ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಶಿಕ್ಷಣ ಸುಧಾರಣೆಗಾಗಿ 18 ಸಾವಿರ ಕೋಟಿ

Mainashree
Updated On : 28 Jul 2013, 1:13 am

ಧಾರವಾಡ: ಶಿಕ್ಷಣ ಕ್ಷೇತ್ರಕ್ಕೆ ರಾಜ್ಯ ಸರ್ಕಾರ ವಿಶೇಷ ಒತ್ತು ನೀಡುತ್ತಿದ್ದು, ಶಿಕ್ಷಣರಂಗದ ಸುಧಾರಣೆಗಾಗಿ ಬಜೆಟ್‌ನಲ್ಲಿ ರು. 18 ಸಾವಿರ ಕೋಟಿಗಿಂತ ಹೆಚ್ಚು ಹಣ ಮೀಸಲಿಡಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಅವರು ಇಲ್ಲಿನ ಬುದ್ದರಕ್ಕಿತ ಪ್ರೌಢಶಾಲೆಯ ಬಳಿ ನೂತನವಾಗಿ ರು. 24.34 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ತಾಲೂಕು ಗ್ರಾಮೀಣ ಪ್ರಾಥಮಿಕ ಶಿಕ್ಷಕರ ಪತ್ತು ಬೆಳೆಸುವ ಸಹಕಾರಿ ಸಂಘದ ನೂತನ ಕಟ್ಟಡ ಹಾಗೂ ಅಡಿಗಲ್ಲು ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಶಾಲೆಗಳ ಹಾಗೂ ಶಿಕ್ಷಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಉತ್ತಮವಾದ ವ್ಯವಸ್ಥೆ ಕಲ್ಪಿಸುತ್ತಿದೆ. ಅದರಂತೆ ಶಿಕ್ಷಕರು ಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸುವ ಮೂಲಕ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ನಾಡಕಟ್ಟುವ ಜವಾಬ್ದಾರಿ: ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಧ್ಯಮ, ದಿನದಲಿತ ಹಾಗೂ ಕೊಳಗೇರಿ ಜನರ ಮಕ್ಕಳು ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಈ ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ನೀಡುವುದಲ್ಲದೆ, ಸಮಾಜದ ಉತ್ತಮ ನಾಗರಿಕರನ್ನಾಗಿ ಪರಿವರ್ತಿಸುವ ಜವಾಬ್ದಾರಿ ಶಿಕ್ಷಕರದ್ದಾಗಿರುತ್ತದೆ. ಸಮಾಜದ ಎಲ್ಲರೂ ಸುಶಿಕ್ಷಿತರಾದರೆ ಮಾತ್ರ ಸಮಾಜದಲ್ಲಿ ಬದಲಾವಣೆಗಳಾಗಲು ಸಾಧ್ಯ. ಶಿಕ್ಷಕರ ಮೇಲೆ ನಾಡು ಕಟ್ಟುವ ಜವಾಬ್ದಾರಿ ಇದೆ. ಅದನ್ನು ಸರಿಯಾಗಿ ನಿಭಾಯಿಸಬೇಕು ಎಂದರು.
ಶಿಕ್ಷಕರ ಸಹಕಾರಿ ಸಂಘ ಶಿಕ್ಷಕರಲ್ಲಿ ಸಹಕಾರ ಮನೋಭಾವ ಬೆಳೆಸುವ ಮೂಲಕ ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಸಹಾಯ ನೀಡುತ್ತದೆ. ಯಾವುದೇ ಸಂಘ ಅಥವಾ ಸಂಘಟನೆಗಳಲ್ಲಿ ಶಕ್ತಿ ಇದ್ದರೆ ಮಾತ್ರ ಸಮಾಜದ ಸುಧಾರಣೆಯಾಗಲು ಸಾಧ್ಯ. ಸಂಘದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ಅವರ ನೇತೃತ್ವದಲ್ಲಿ ಸಂಘ, ಶಿಕ್ಷರಿಗಾಗಿ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ. ಸರ್ಕಾರ ಮಟ್ಟದ ಕೆಲಸ ಕಾರ್ಯಗಳನ್ನು ಸಂಘ ಪಡೆದುಕೊಂಡಿದೆ ಎಂದು ಹೇಳಿದರು. ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಶಿಕ್ಷಣಕ್ಕೆ ಭಾಷಣದಲ್ಲಿ ಮಾತ್ರ ವಿಶೇಷ ಸ್ಥಾನ ಲಭಿಸಿದೆಯೇ ಹೊರತು ವಾಸ್ತವಿಕವಾಗಿ ಸಿಕ್ಕಿಲ್ಲ. ಶಿಕ್ಷಣದ ಮೂಲಕ ಮಾನವ ಸಂಪನ್ಮೂಲ ಬೆಳೆಸಬೇಕಾಗಿದೆ. ಮಾನವ ಸಂಪನ್ಮೂಲ ಬೆಳೆದರೆ ಮಾತ್ರ ಸಮಾಜ ಸುಧಾರಣೆಗೊಳ್ಳುತ್ತದೆ. ಆದಕಾರಣ ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಶಿಕ್ಷಕರು ಶಿಕ್ಷಣದ ಜತೆಗೆ ಉತ್ತಮ ಸಮಾಜದ ಪರಿಕಲ್ಪನೆಯನ್ನು ಬೋಧಿಸಬೇಕು ಎಂದರು.
ಗುಣಮಟ್ಟದ ಶಿಕ್ಷಣ: ಶಿಕ್ಷಕರು ಯಾವುದೇ ಗೊಂದಲ ಹಾಗೂ ವಿಚಾರಗಳನ್ನು ಇಟ್ಟುಕೊಳ್ಳದೇ ತರಗತಿಯನ್ನು ಪ್ರವೇಶಿಸಬೇಕು. ಅಂದಾಗ ಮಾತ್ರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಪ್ರಾಥಮಿಕ ಶಿಕ್ಷಣ ಪಡೆದ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮಾಧ್ಯಮಿಕ ಶಿಕ್ಷಣ ಪಡೆಯುತ್ತಿಲ್ಲ. ನಂತರ ಕಾಲೇಜು ಶಿಕ್ಷಣಕ್ಕೆ ಕೇವಲ ಶೇ. 20ರಷ್ಟು ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆಯುತ್ತಿದ್ದಾರೆ. ಯುನೆಸ್ಕೊ ವರದಿ ಪ್ರಕಾರ ಭಾರತ ಶಿಕ್ಷಣದಲ್ಲಿ 127ನೇ ಸ್ಥಾನ ಪಡೆದಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಕಲಘಟಗಿ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಅಧ್ಯಕ್ಷ ವೀರಣ್ಣ ಕುಬಸ ಸಂಘದ ಸಭಾಭವನ ನಿರ್ಮಾಣಕ್ಕೆ ರು. 2.51ಲಕ್ಷ ದೇಣಿಗೆ ನೀಡಿದರು. ಜಾಗ ದಾನವಾಗಿ ನೀಡಿದ ಬಸವಣ್ಣೆವ್ವ ಕಲಘಟಗಿ ಅವರನ್ನು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸನ್ಮಾನಿಸಿದರು. ಶಾಸಕ ವಿನಯ ಕುಲಕರ್ಣಿ ಮಾತನಾಡಿದರು. ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕಿ ಸೀಮಾ ಮಸೂತಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಸಂಘದ ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ, ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಜಿಪಂ ಸದಸ್ಯೆ ಪ್ರೇಮಾ ಕೋಮಾರದೇಸಾಯಿ, ಹನಮವ್ವ ಬಿಂಗಿ, ಡಾ. ಸುನೀತಾ ಸಿದ್ರಾಮ, ವಿಜಯೇಂದ್ರ ಪಾಟೀಲ, ಹನುಮವ್ವ ಬಿಂಗಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement