ಅಂಬಿಗೇರಿ ಕೆರೆಗೆ ನೀರು ತುಂಬಿಸಿ
ಅಣ್ಣಿಗೇರಿ: ಪಟ್ಟಣದ ಅಂಬಿಗೇರಿ ಕೆರೆಗೆ ಮಲಪ್ರಭಾ ಕಾಲುವೆಯಿಂದ 10 ದಿನ ಮಾತ್ರ ನೀರು ಹರಿಸಲಾಗಿದ್ದು, 20-25 ದಿನಗಳಿಗೆ ಸಾಕಾಗುವಷ್ಟು ಮಾತ್ರ ನೀರಿನ ಸಂಗ್ರಹವಿದೆ. ಮುಂದಿನ ದಿನಗಳಲ್ಲಿ ಮತ್ತೆ ನೀರಿಗೆ ಹಾಹಾಕಾರ ಉಂಟಾಗುವ ಪರಿಸ್ಥಿತಿ ಬರಬಹುದು.
ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ, ಶಾಸಕರು, ಮಲಪ್ರಭಾ ನೀರಾವರಿ ಪ್ರಾಧಿಕಾರ ಅಧಿಕಾರಿಗಳು ತಕ್ಷಣವೇ ಕ್ರಮಕೈಗೊಳ್ಳುವಲ್ಲಿ ಆಸಕ್ತಿ ತೋರಬೇಕಿದೆ. ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಜಿಲ್ಲಾಡಳಿತ ಗಮನಕ್ಕೆ ತಂದಿದ್ದಾರೆ.
ಈಗಾಗಲೇ ರಾಜ್ಯದ ಎಲ್ಲ ನದಿಗಳು ಉಕ್ಕಿ ಹರಿಯುತ್ತಿವೆ. ಆದರೆ, ಈ ಭಾಗದಲ್ಲಿ ಮಳೆರಾಯ ಕೃಪೆ ತೋರಿಲ್ಲ. ಜಿಟಿಜಿಟಿ ಮಳೆಯಿಂದ ಕೆರೆಗಳಿಗೆ ನೀರು ಬರುತ್ತಿಲ್ಲ. ಹೀಗಾಗಿ, ಇತ್ತೀಚಿಗಷ್ಟೇ ಮಲಪ್ರಭಾ ಮಲಪ್ರಭಾ ಬಲದಂಡೆ ಕಾಲುವೆ ಮೂಲಕ 100 ಕ್ಯುಸೆಕ್ ನೀರು ಹರಿಸಲಾಗಿತ್ತು. ಸದ್ಯ ಕೆರೆಯಲ್ಲಿ ಕೆಲ ದಿನಗಳಿಗಾಗುವಷ್ಟು ಮಾತ್ರ ನೀರಿದೆ. ಹೀಗಾಗಿ, ಆದಷ್ಟು ಬೇಗನೆ ಮಲಪ್ರಭಾ ಬಲದಂಡೆ ಕಾಲುವೆ ಮೂಲಕ ನೀರು ಹರಿಸಿ ಕೆರೆ ತುಂಬಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜನತೆ ಆಗ್ರಹಿಸಿದ್ದಾರೆ.