ಲಂಡನ್ ಮಾದರಿ ಹುಬ್ಬಳ್ಳಿಯಲ್ಲಿ ಫೇಲ್
ಹುಬ್ಬಳ್ಳಿ: ವಾರ್ಡ್ ಸ್ವಚ್ಛವಾಗಿರಲಿ ಎಂದು ಲಂಡನ್ ಮಾದರಿ ಅಳವಡಿಸಿಕೊಂಡ ವಾರ್ಡ್ ನಂ. 34ರಲ್ಲಿ ಲಂಡನ್ ಮಾದರಿ ಫೇಲ್ ಆಗಿದೆ.
ಏಕೆಂದರೆ ಹು-ಧಾ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಕಸ ಹೊಂದಿರುವ ವಾರ್ಡ್ ಎಂಬ ಕುಖ್ಯಾತಿ ಸದ್ಯದಲ್ಲೇ ಈ ವಾರ್ಡ್‌ಗೆ ಬರಲಿದೆ. ಹು-ಧಾ ಮಹಾನಗರ ಪಾಲಿಕೆ ವಾರ್ಡ್ ನಂ. 34ರ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮಹಾನಗರ ಪಾಲಿಕೆ ಸದಸ್ಯೆ ಲಕ್ಷ್ಮಿಬಾಯಿ ಉಪ್ಪಾರ ಅವರ ಮುತುವರ್ಜಿಯಿಂದಾಗಿ ಲಂಡನ್ ನಗರದಲ್ಲಿ ಅನುಸರಿಸುತ್ತಿರುವ ಮನೆ ಹಂತದಲ್ಲೇ ತ್ಯಾಜ್ಯ ವಿಲೇವಾರಿ ವಿಧಾನ ಅಳವಡಿಸಿಕೊಂಡು ಪ್ರತಿ ಮನೆಗೂ ಎರಡು ಪ್ರತ್ಯೇಕ ಪ್ಲಾಸ್ಟಿಕ್ ಕಂಟೇನರ್ ನೀಡಲಾಯಿತು. ಆದರೆ, ಇದೀಗ ಇಡೀ ವಾರ್ಡ್‌ನಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಮನೆಗಳ ಎದುರು ಇರಿಸಿದ ಪ್ಲಾಸ್ಟಿಕ್ ಕಂಟೇನರ್‌ಗಳಲ್ಲಿ ಕಸ ಭರ್ತಿಯಾಗಿದ್ದರೂ ಕಸವನ್ನು ಎತ್ತಿ ಗಾಡಿಗೆ ಹಾಕಿಕೊಳ್ಳುವುದಕ್ಕೆ ಪೌರ ಕಾರ್ಮಿಕರಿಗೆ ಆಗುತ್ತಿಲ್ಲ. ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕಾದ ಅಧಿಕಾರಿಗಳು ಅತ್ತ ಗಮನ ನೀಡುತ್ತಿಲ್ಲ.
ವಾರ್ಡ್ ನಂ. 34ರ ವ್ಯಾಪ್ತಿಯಲ್ಲಿ ಅತ್ಯುತ್ಸಾಹದಿಂದಲೇ ಜಾರಿಗೊಂಡ ಮನೆ-ಮನೆ ಕಸ ಸಂಗ್ರಹ ಯೋಜನೆಗೂ ಜನರಿಂದಲೂ ಆರಂಭಿಕ ದಿನಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ದಿನಗಳದಂತೆ ಕಸ ತೆಗೆದುಕೊಂಡು ಹೋಗುವ ಟ್ರ್ಯಾಕ್ಟರ್ ಅಥವಾ ಇನ್ನಾ ವುದೇ ವಾಹನ ನಿಯಮಿತವಾಗಿ ಬಾರದ ಕಾರಣ ಬಹುತೇಕ ವಾರ್ಡ್ ನಂ. 34ರಲ್ಲಿ ಕಸ ತುಂಬಿಕೊಂಡಿದ್ದು, ಸರಿಯಾದ ನಿರ್ವಹಣೆ ಇಲ್ಲದ್ದರಿಂದ ಹು-ಧಾ ಮಹಾನಗರ ಪಾಲಿಕೆಯಲ್ಲೇ ಅತಿ ಹೆಚ್ಚು ಕಸವಿರುವ ವಾರ್ಡ್ ಎಂಬ ಕುಖ್ಯಾತಿ ಪಡೆಯುವತ್ತ ಹೆಜ್ಜೆ ಹಾಕುತ್ತಿದೆ.
ಏನಿದು ಲಂಡನ್ ಮಾದರಿ?: ತ್ಯಾಜ್ಯ ವಿಲೇವಾರಿಗಾಗಿ ಲಂಡನ್ ಮಹಾನಗರ ಪಾಲಿಕೆ ಪ್ರತಿ ಮನೆಗೂ ಎರಡು ಪ್ಲಾಸ್ಟಿಕ್ ಕಂಟೇನರ್ ನೀಡಿದೆ. ಆ ಪ್ಲಾಸ್ಟಿಕ್ ಕಂಟೇನರ್‌ಗಳಲ್ಲಿ ಮನೆಯಲ್ಲಿನ ಕಸವನ್ನು ಸಾವಯವ ತ್ಯಾಜ್ಯ ಮತ್ತು ಕೊಳೆದಂತಹ ತ್ಯಾಜ್ಯ ಎಂದು ಬೇರ್ಪಡಿಸಿ ಮನೆ ಮಾಲೀಕ ಹಾಕಬೇಕು. ಪೌರ ಕಾರ್ಮಿಕರು ಪ್ರತಿ ದಿನ ಬಂದು ಮನೆ ಎದುರು ಇರಿಸಿದ ತ್ಯಾಜ್ಯವನ್ನು ವಾಹನಗಳ ಮುಖಾಂತರ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತೆಗೆದುಕೊಂಡು ಹೋಗುತ್ತಾರೆ.
ವಾರ್ಡ್‌ನಲ್ಲಿ ಏನಾಗಿದೆ?: ಲಕ್ಷ್ಮಿಬಾಯಿ ಉಪ್ಪಾರ ಅವರು ಪ್ರತಿನಿಧಿಸುವ ವಾರ್ಡ್ ನಂ. 34ರಲ್ಲಿ ಹು-ಧಾ ಮಹಾನಗರ ಪಾಲಿಕೆ ಅತ್ಯುತ್ಸಾಹದಿಂದ ವಾರ್ಡ್‌ನ ಕೆಲವೊಂದು ಭಾಗಗಳಿಗೆ ಪ್ಲಾಸ್ಟಿಕ್ ಕಂಟೇನರ್‌ಗಳನ್ನು ವಿತರಿಸಿದೆ. ಆದರೆ, ಸದ್ಯದ ಸಮಸ್ಯೆ ಏನೆಂದರೆ ಪ್ಲಾಸ್ಟಿಕ್ ಕಂಟೇನರ್‌ಗಳು ತುಂಬಿ ತುಳುಕುತ್ತಿದ್ದರೂ ಕಸ ಎತ್ತೊಯ್ಯಬೇಕು ಎನ್ನುವ ಗೊಡವೆಗೆ ಹೋಗಿಲ್ಲ.
ಈ ಕುರಿತು ಮಹಾನಗರ ಪಾಲಿಕೆ ಸದಸ್ಯೆ ಲಕ್ಷ್ಮಿಬಾಯಿ ಉಪ್ಪಾರ ಅವರನ್ನು ಕೇಳಿದರೆ, ವಾರ್ಡ್ ನಂ. 34ರಲ್ಲಿ ಲಂಡನ್ ಮಾದರಿಯಲ್ಲಿ ಕಸ ಸಂಗ್ರಹಣೆ ಮಾಡುವುದಕ್ಕೆ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೇ ವಿದ್ಯಾನಗರದ ಕೆಲವೊಂದು ಪ್ರದೇಶಗಳ ನಾಗರಿಕರಿಗೆ ಪ್ಲಾಸ್ಟಿಕ್ ಕಂಟೇನರ್‌ಗಳನ್ನು ವಿತರಿಸಿದ್ದಾಗಿ ತಿಳಿಸಿದರು.
ಭರ್ತಿಯಾದ ಪ್ಲಾಸ್ಟಿಕ್ ಕಂಟೇನರ್‌ಗಳ ಕುರಿತು ಮಾತನಾಡಿದ ಅವರು, ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಕಸ ಸಂಗ್ರಹಣೆಯಲ್ಲಿ ಸಮಸ್ಯೆಯಾಗಿದೆ ಅಷ್ಟೆ, ಮಳೆ ನಿಂತ ಕೂಡಲೇ ಮತ್ತೆ ಎಂದಿನಂತೆ ವಾರ್ಡ್‌ನಲ್ಲಿನ ಕಸ ಎತ್ತಲಾಗುವುದು ಎಂದಿದ್ದಾರೆ. ಹೀಗಿರುವಾಗ ಇದೀಗ ರಾಶಿ ಬಿದ್ದಿರುವ ಕಸದ ಕಥೆ ಏನು ಎಂಬುದು ವಾರ್ಡ್ ನಿವಾಸಿಗಳು ಪ್ರಶ್ನೆ?
- ಸತೀಶ ಪಾಗಾದ