ಕಲಕೇರಿ ಸಂಗೀತ ಶಾಲೆಗೆ ಉಪಕರಣ ದಾನ
ಧಾರವಾಡ: ತಾಲೂಕಿನ ಕಲಕೇರಿ ಸಂಗೀತ ವಿದ್ಯಾಲಯಕ್ಕೆ ಇತ್ತೀಚಿಗೆ ರೋಟರಿ ಕ್ಲಬ್ ಮತ್ತು ರೋಟರಿ ಕ್ಲಬ್ ಪೊಟ್ಸ್ಡ್ಯಾಂ ಜರ್ಮನಿ ಸಹಯೋಗದೊಂದಿಗೆ ರು. 5.50 ಲಕ್ಷ ಮೊತ್ತದ ವಿವಿಧ ಸಂಗೀತ ಉಪಕರಣಗಳನ್ನು ವಿತರಿಸಲಾಯಿತು.
ಐದು ವರ್ಷ ಮೇಲ್ಪಟ್ಟ ಬಡಮಕ್ಕಳಿಗಾಗಿ ನಡೆಸುವ ಈ ವಸತಿ ಶಾಲೆಗೆ ಸಂಗೀತ ವಾದ್ಯಗಳಾದ ಸಿತಾರ್, ಹಾರ್ಮೋನಿಯಂ, ಕೊಳಲು, ತಬಲಾ, ವಯಲಿನ್, ಸ್ವರಮಂಡಲ ಹಾಗೂ ಧ್ವನಿ ವರ್ಧಕಗಳಾದ ಪವರ್ ಸ್ಪೀಕರ್, ಸೌಂಡ್ ಮಿಕ್ಸರ್ ಮತ್ತು ವಾದ್ಯಗಳ ರಕ್ಷಣೆಗೆಂದು ಸ್ಟೀಲ್ ಕಪಾಟ್ಗಳನ್ನು ದಾನವಾಗಿ ನೀಡಲಾಯಿತು.
ರೋಟರಿ ಜಿಲ್ಲಾ ಮಾಜಿ ಗವರ್ನರ್ ಮಹೇಶ ರಾಯ್ಕರ ಮಾತನಾಡಿ, ಸಂಗೀತದಿಂದ ಮಾನಸಿಕ ನೆಮ್ಮದಿಯೊಂದಿಗೆ ಚೈತನ್ಯ ದೊರೆಯುತ್ತದೆ. ವಿರಳವಾಗಿರುವ ಭಾರತೀಯ ಸಂಗೀತವನ್ನು ಬಡ ಮಕ್ಕಳಿಗೆ ಉಚಿತವಾಗಿ ನೀಡುವ ಕಲಕೇರಿ ಸಂಗೀತ ವಿದ್ಯಾಲಯ ಕಾರ್ಯ ಶ್ಲಾಘನೀಯ ಎಂದರು.
ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ. ರಾಜನ್ ದೇಶಪಾಂಡೆ ಮಾತನಾಡಿ, ಸಂಗೀತ ಮಕ್ಕಳಲ್ಲಿ ಮಾನಸಿಕ ಸಮತೋಲನ ಕಾಪಾಡುತ್ತದೆ ಎಂದರು.
ಡಾ. ಸುಲ್ತಾನಪುರಿ, ಯಶಕರಣಸಿಂಗ ಲಾಲಿ, ಡಾ. ಕುಂದೂರ, ಡಾ. ವಿಶ್ವನಾಥ ಚಿಂತಾಮಣಿ, ಶಂಕರ ಪಾಗದ, ತಹಸೀಲ್ದಾರ, ದಿಲಾವರ ದೇಸಾಯಿ, ರಮೇಶ ಹೆರ್ಲೇಕರ, ಶ್ರೀಕಾಂತ ದೊಡವಾಡ ಇದ್ದರು.
ರೋಟರಿ ಕ್ಲಬ್ ಅಧ್ಯಕ್ಷ ಎಲ್.ಜೆ. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ರೋಟರಿ ಕ್ಲಬ್ ಧಾರವಾಡ ಅಧ್ಯಕ್ಷ ಡಾ. ವೈ.ಪಿ. ಕಲ್ಲನಗೌಡರ ಸ್ವಾಗತಿಸಿದರು. ವಿ.ಡಿ. ಪತ್ತಾರ ನಿರೂಪಿಸಿದರು. ಎಂ. ಎ. ಮುಮ್ಮಿಗಟ್ಟಿ ವಂದಿಸಿದರು.