ಲೋಕಾಯುಕ್ತರ ಕಾರ್ಯಕ್ರಮ ಮುಂದೂಡಿಕೆ
ಧಾರವಾಡ: ಕರ್ನಾಟಕ ಲೋಕಾಯುಕ್ತರು ಆಗಸ್ಟ್ 5ರಂದು ಜಿಲ್ಲೆಯ ವಿವಿಧೆಡೆ ನೀಡಲಿದ್ದ ಭೇಟಿ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಧಾರವಾಡ ಲೋಕಾಯುಕ್ತ ಅಧೀಕ್ಷಕ ಕೆ. ಪರಶುರಾಮ ತಿಳಿಸಿದರು. ಇಲ್ಲಿನ ತಮ್ಮ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿವಿಧ ಕಾರಣಗಳಿಂದ ಭೇಟಿ ಕಾರ್ಯಕ್ರಮ ಮುಂದೂಡಲಾಗಿದ್ದು, ಮುಂದಿನ ದಿನಾಂಕ ಪ್ರಕಟಿಸಲಾಗುವುದು ಎಂದರು. ಲೋಕಾಯುಕ್ತ ಕಚೇರಿಯು ಸಾರ್ವಜನಿಕ ಸೇವಾ ವಲಯದ ಕಾರ್ಯಗಳಿಗಾಗಿ ಲಂಚ ಸ್ವೀಕಾರ, ಆರೋಪ ಕುರಿತು ಅಕ್ರಮ ಸಂಪಾದನೆ ಹಾಗೂ ಸರ್ಕಾರಿ ಯೋಜನೆಗಳ ಜಾರಿಯಲ್ಲಿ ಆಗುವ ಲೋಪದೋಷ ಅಥವಾ ವಂಚನೆ ಪ್ರಕರಣಗಳ ಕುರಿತು ತನಿಖೆ ನಡೆಸಲು ಅಧಿಕಾರ ಹೊಂದಿದೆ. ಸಂಬಂಧಿತರು ಸೂಕ್ತ ದಾಖಲೆ ಒದಗಿಸುವುದು. ಸಾಕ್ಷಿಗಳು ನ್ಯಾಯಾಲಯದಲ್ಲಿ ವಸ್ತುನಿಷ್ಠ ಸಾಕ್ಷಿ ನುಡಿಯುವರು. ಮುಂತಾದವುಗಳ ಆಧಾರದ ಮೇಲೆ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವುದಾಗಲಿ, ಶಿಕ್ಷೆ ವಿಧಿಸುವಂತೆ ನೋಡಿಕೊಳ್ಳಲು ಸಾಧ್ಯ. ಈ ಹಿನ್ನೆಲೆಯಲ್ಲಿ ಜನರು ಹೆಚ್ಚಿನ ಮಾಹಿತಿ ಹಾಗೂ ಜಾಗೃತಿಗಾಗಿ ಪಾಲಿಕೆ ಕಚೇರಿಗಳಲ್ಲಿ ಹಾಗೂ ತಾಲೂಕು ಕೇಂದ್ರಗಳಲ್ಲಿ ಲೋಕಾಯುಕ್ತ ಕಾರ್ಯ ಕುರಿತ ಮಾಹಿತಿ ಫಲಕಗಳನ್ನು ಪ್ರದರ್ಶಿಸಲು ತಾವು ಉದ್ದೇಶಿಸಿರುವುದಾಗಿ ಅಧೀಕ್ಷಕ ಕೆ. ಪರಶುರಾಮ ತಿಳಿಸಿದರು.