ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಹುಬ್ಬಳ್ಳಿಗೆ ಸಿಎಂ ಅನ್ಯಾಯ: ಪ್ರತಿಭಟನೆ

Lingaraj Badiger
Updated On : 30 Jul 2013, 10:50 am

ಹುಬ್ಬಳ್ಳಿ: ಬಜೆಟ್‌ನಲ್ಲಿ ಮೈಸೂರಿಗೆ ನೂರು ಕೋಟಿ ರು. ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿ-ಮಹಾನಗರ ಪಾಲಿಕೆಗೆ ಸ್ವಲ್ಪವೂ ಅನುದಾನ ನೀಡದೇ ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಿ ಸೋಮವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ಬೆಂಗಳೂರು ನಂತರ ಅತಿ ಹೆಚ್ಚು ಜನಸಂಖ್ಯೆಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹೊಂದಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿಗೆ ಮಾತ್ರ ಅನುದಾನ ನೀಡಿ ರಾಜ್ಯದ ಇತರ ನಗರಗಳಿಗೆ ಅನ್ಯಾಯ ಮಾಡಿದ್ದಾರೆ. ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದ ವೇಳೆ ಎಲ್ಲ ನಗರಗಳಿಗೂ ಸಮನಾಗಿ ಎರಡು ಹಂತದಲ್ಲಿ ತಲಾ ನೂರು ಕೋಟಿ ರು. ಅನುದಾನ ನೀಡಿತ್ತು. ಬೆಂಗಳೂರು ಮತ್ತು ಮೈಸೂರು ನಗರಗಳಿಗೆ ಕೇಂದ್ರ ಸರ್ಕಾರದ ನೂರಮ್ ಯೋಜನೆಯಡಿ ಸಾವಿರಾರು ಕೋಟಿ ರು.ಗಳು ಅನುದಾನ ರೂಪದಲ್ಲಿ ಬರುತ್ತಿದೆ. ಕೇಂದ್ರದ ಅನುದಾನವಿಲ್ಲದ ಧಾರವಾಡ ಹುಬ್ಬಳ್ಳಿ ಮಹಾನಗರ ಪಾಲಿಕೆಗೆ ಹಣ ನೀಡದೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಾರತಮ್ಯ ಎಸಗಿದ್ದಾರೆ ಎಂದು ಆರೋಪಿಸಿದರು.
ಮೀಸಲಾತಿಗೆ ನಿಗದಿಗೆ ಒತ್ತಾಯ: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು 4 ತಿಂಗಳು ಆಗಿದ್ದು, ಸರ್ಕಾರ ಇನ್ನೂ ಸ್ಥಳೀಯ ಸಂಸ್ಥೆಗಳ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸದೇ ವಿಳಂಬ ಧೋರಣೆ ಅನುಸರಿಸುತ್ತಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರಣ ಸರಿಯಾದ ರೀತಿಯಲ್ಲಿ ಅಭಿವೃದ್ಧಿ ಮತ್ತು ನಗರ ನಿರ್ವಹಣೆ ಕೆಲಸ ನಡೆಯುತ್ತಿಲ್ಲ. ಜನರ ಸಮಸ್ಯೆಗಳನ್ನು ಪರಿಹರಿಸಲು ಪಾಲಿಕೆ ಸದಸ್ಯರಿಗೆ ಆಗುತ್ತಿಲ್ಲ. ಸಮಸ್ಯೆ ಪರಿಹಾರವಾಗದ ಹಿನ್ನೆಲೆಯಲ್ಲಿ ನಾಗರಿಕರು ಪಾಲಿಕೆ ಸದಸ್ಯರೊಂದಿಗೆ ಜಗಳಕ್ಕೆ ಇಳಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರತಿಭಟನೆಯಲ್ಲಿ ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ, ವೀರಣ್ಣ ಸವಡಿ, ನಾರಾಯಣ ಜರತಾರಘರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ ಸರಾಫ್, ಸಂಜಯ ಕಪಟಕರ್, ರಾಮಣ್ಣ ಬಡಿಗೇರ, ಡಿ.ಕೆ. ಚವ್ಹಾಣ, ಲಕ್ಷ್ಮಿ ಉಪ್ಪಾರ ಸೇರಿದಂತೆ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement