ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್‌ಗೆ ಮರುಜೀವ

Lingaraj Badiger
Updated On : 31 Jul 2013, 10:58 am

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜು. 30
ನನೆಗುದಿಗೆ ಬಿದ್ದಿದ್ದ 'ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಯೋಜನೆ'ಗೆ ಮತ್ತೆ ಚಾಲನೆ ದೊರೆತಿದೆ.
ನಗರದ 'ಕೋರ್ಟ್‌' ವೃತ್ತದ ಎದುರು ನಿರ್ಮಿಸಲು ಉದ್ದೇಶಿಸಿರುವ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಯೋಜನೆಗೆ ಹಲವಾರು ಕಾರಣಗಳಿಂದ ರಾಜ್ಯ ಸರ್ಕಾರದ ಸಮ್ಮತಿ ದೊರಕದ ಕಾರಣ 2009ರಿಂದ ಮುಂದೂಡುತ್ತ ಬಂದಿದೆ.
2009ರಲ್ಲಿ ಪ್ರಸ್ತಾವನೆ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ 14 ಡಿಸೆಂಬರ್ 2009ರಂದು ರಾಜ್ಯ ಸರ್ಕಾರಕ್ಕೆ ಯೋಜನೆಯ ನಕಾಶೆ ಹಾಗೂ ಮತ್ತಿತರ ವಿವರಗಳುಳ್ಳ ಪ್ರಸ್ತಾವನೆ ಸಲ್ಲಿಸಿತ್ತು. ಸುಮಾರು ರು. 44 ಕೋಟಿ ವೆಚ್ಚದ ಈ ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಪೂರ್ಣಗೊಳಿಸುವ ಉದ್ದೇಶ ಇರುವುದರಿಂದ ರಾಜ್ಯ ಸರ್ಕಾರದ ಸಮ್ಮತಿ ಅವಶ್ಯಕ. ಮಹಾನಗರ ಪಾಲಿಕೆ ಈ ಯೋಜನೆಯ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ ನಂತರ ಧಾರಾಶಾ ಆ್ಯಂಡ್ ಕಂಪನಿ ಪ್ರೈ. ಲಿ. ಖಾಸಗಿ ಸಂಸ್ಥೆಯವರು ಯೋಜನೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ನಿಭಾಯಿಸಲು ಮುಂದೆ ಬಂದಿದ್ದಲ್ಲದೇ, ಸಂಬಂಧಿಸಿದ ಇಲಾಖೆ ಹಿರಿಯ ಅಧಿಕಾರಿಗಳ ಎದುರು ನಿಯೋಜಿತ ಯೋಜನೆಯ ವಿವರಗಳನ್ನೂ ನೀಡಿದ್ದರು.
ನೂತನ ಪ್ರಸ್ತಾವನೆಗೆ ಸೂಚನೆ: ಆದರೆ ಸರ್ಕಾರ 19 ಜೂನ್ 2012ರಂದು ಯೋಜನೆಯ ಪ್ರಸ್ತಾವನೆಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಮರಳಿ ಕಳುಹಿಸಿತಲ್ಲದೇ, ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯ 2007ರಲ್ಲಿ ರಚಿಸಲಾದ ನಿಯಮಗಳ ಪ್ರಕಾರ ನೂತನ ಪ್ರಸ್ತಾವನೆ ಕಳುಹಿಸುವಂತೆ ಸೂಚಿಸಿತ್ತು. ಧಾರವಾಡ ಸೂಪರ್ ಮಾರ್ಕೆಟ್ ನವೀಕರಣಕ್ಕೆ ಅನುಮತಿ ದೊರೆತ ನಂತರ ಈ ಯೋಜನೆಯ ನೂತನ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸುವಂತೆ ಸಂಬಂಧಿಸಿದ ಇಲಾಖೆ ಹಿರಿಯ ಅಧಿಕಾರಿಗಳು ಪಾಲಿಕೆ ಅಧಿಕಾರಿಗಳಿಗೆ ಮೌಖಿಕ ಸೂಚನೆಯನ್ನೂ ನೀಡಿದ್ದರು.
ಇದೀಗ ಧಾರವಾಡ ಸೂಪರ್ ಮಾರ್ಕೆಟ್ ನವೀಕರಣಕ್ಕೆ ಸರ್ಕಾರ ಸಮ್ಮತಿ ನೀಡಿದ್ದು, ಟೆಂಡರ್ ಪ್ರಕ್ರಿಯೆಯೂ ಚಾಲನೆಯಲ್ಲಿದೆ. ಹೀಗಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ನೆನೆಗುದಿಗೆ ಬಿದ್ದಿದ್ದ 'ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಯೋಜನೆ'ಯ ನೂತನ ಪ್ರಸ್ತಾವನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಯೋಜನೆಯ ವಿವರ:  ಕೋರ್ಟ್ ವೃತ್ತದ ಎದುರು (ಸರ್ವೇ ನಂ. ಸಿಟಿಎಸ್ 173) ಇರುವ 44 ಸಾವಿರ ಚದರ ಅಡಿ ಜಾಗದಲ್ಲಿ 'ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್‌' ನಿರ್ಮಿಸುವ ಯೋಜನೆ ಅಡಿ ಎರಡು ಮಹಡಿಗಳ ಕಟ್ಟಡ ತಲೆ ಎತ್ತಲಿದೆ. ತಲಾ 28,600 ಚದರ ಅಡಿಗಳ ನೆಲ ಮಹಡಿ, ಮೊದಲ ಮಹಡಿ ಹಾಗೂ ಎರಡನೇ ಮಹಡಿ ಸೇರಿದಂತೆ ಒಟ್ಟು 85,800 ಚ.ಅಡಿಯ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ನಿರ್ಮಾಣಗೊಳ್ಳಲಿದೆ.  ಈ 'ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್‌'ನಲ್ಲಿ 204 ಕಾರು ಸೇರಿದಂತೆ ಇತರ ನಾಲ್ಕು ಚಕ್ರದ ವಾಹನಗಳು ಹಾಗೂ 470 ದ್ವಿಚಕ್ರ ವಾಹನಗಳು ನಿಲ್ಲಿಸಬಹುದಾಗಿದೆ. ಒಟ್ಟು 674 ವಾಹನಗಳು ಒಂದೇ ಕಟ್ಟಡದಲ್ಲಿ ನಿಂತಲ್ಲಿ ಪಾರ್ಕಿಂಗ್ ಸಮಸ್ಯೆ ಸಾಕಷ್ಟು ನಿವಾರಣೆಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.
ಖಾಸಗಿ ಸಂಸ್ಥೆಯಿಂದ ಅಥವಾ ಪಿಪಿಪಿ (ಖಾಸಗಿ ಮತ್ತು ಸರ್ಕಾರದ ಸಹಭಾಗಿತ್ವ) ಆಧಾರದ ಮೇಲೆ ಈ 'ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್‌' ನಿರ್ಮಿಸುವ ಯೋಜನೆ ಮಹಾನಗರ ಪಾಲಿಕೆಗೆ ಇದೆ. ಯಾವ ಆಧಾರದ ಮೇಲೆ ಯೋಜನೆ ಅನುಷ್ಠಾನಗೊಳಿಸಬೇಕು ಎಂಬುದನ್ನು ಸರ್ಕಾರ ನಿರ್ಧರಿಸಲಿದೆ.  ಮೇಲಿನ ಮಹಡಿಯಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಬೇಕೆಂಬ ಯೋಜನೆಯೂ ಪಾಲಿಕೆಗೆ ಇದ್ದು, ಸರ್ಕಾರದ ಸಮ್ಮತಿ ಮೇಲೆ ನಿರ್ಧಾರಗೊಳ್ಳಲಿದೆ. ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಯ 2007ರಲ್ಲಿ ರಚಿಸಲಾದ ನಿಯಮಗಳನ್ವಯ ಇಂಥ ಯೋಜನೆಗಳಲ್ಲಿ ಪಾಲ್ಗೊಳ್ಳುವ ಖಾಸಗಿ ಸಂಸ್ಥೆಯವರು ಕಟ್ಟಡಗಳನ್ನು ಕನಿಷ್ಠ 30 ವರ್ಷಗಳವರೆಗೆ ಲೀಜ್ ಆಧಾರದ ಮೇಲೆ ನಿರ್ವಹಿಸಬೇಕು. ನಂತರ ಸ್ಥಳೀಯ ಸಂಸ್ಥೆಗೆ ಹಸ್ತಾಂತರಿಸಬೇಕೆಂಬ ಸೂಚನೆಗಳೂ ಇರುವುದಾಗಿ ಪಾಲಿಕೆ ಮೂಲಗಳು ತಿಳಿಸಿವೆ. ಮಹಾನಗರ ಪಾಲಿಕೆ ಅಧಿಕಾರಿಗಳು 'ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಯೋಜನೆ'ಯ ಪ್ರಸ್ತಾವನೆ ಸಿದ್ಧಪಡಿಸುವಲ್ಲಿ ನಿರತರಾಗಿದ್ದು, ಆಗಸ್ಟ್ ಅಂತ್ಯದೊಳಗೆ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಇದಕ್ಕಾಗಿ ಕೆಲ ಅಧಿಕಾರಿಗಳ ತಂಡ ಶೀಘ್ರ ಬೆಂಗಳೂರಿನ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆಗೆ ತೆರಳಿ 2007ರಲ್ಲಿ ನಿಯಮಿಸಿದ ನಿಯಮಗಳನ್ನು ಅಧ್ಯಯನ ಮಾಡಲಿದೆ.  ಈ ಹಿಂದೆ ಮಹಾನಗರ ಪಾಲಿಕೆ ಈ ಯೋಜನೆ ಅನುಷ್ಠಾನಕ್ಕೆ 2009ರಲ್ಲಿ ಸಲ್ಲಿಸಿದ್ದ ಯೋಜನೆಯನ್ನು ಮೂರು ವರ್ಷಗಳ ನಂತರ ಮರಳಿ ಕಳುಹಿಸಿ, ಮರು ಪ್ರಸ್ತಾವನೆಗೆ ಸೂಚಿಸಿದ್ದ ಸರ್ಕಾರ ಈಗಲಾದರೂ ಯೋಜನೆ ಅನುಷ್ಠಾನಕ್ಕೆ ತ್ವರಿತಗತಿಯಲ್ಲಿ ನಿರ್ಧಾರ ಕೈಗೊಳ್ಳುವುದೇ?
-ಆನಂದ ಅಂಗಡಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement