ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ರಕ್ಷಣಾ ಪಡೆಗಳ ಅರಿವಿಗಾಗಿ ಕುಮಾಂವು

Lingaraj Badiger
Updated On : 31 Jul 2013, 11:07 am

ಧಾರವಾಡ: ಸಾಮಾನ್ಯ ಜನತೆಯಲ್ಲಿ ಸೈನ್ಯ, ಸೈನಿಕ, ಯುದ್ಧದ ವಿಷಯಗಳಲ್ಲಿ ಆಸ್ಥೆ ಹಾಗೂ ಅರಿವು ತೀರಾ ಕಮ್ಮಿ. ಈ ವಿಷಯಗಳ ಕುರಿತು ಭಾವುಕತೆ, ಅಜ್ಞಾನ ಹಾಗೂ ಅವಗಣನೆ ಅಧಿಕವಾಗಿದ್ದು, ಇದನ್ನು ಹೋಗಲಾಡಿಸಲು ಭಾರತೀಯ ರಕ್ಷಣಾ ಪಡೆಗಳ ಕೆಲ ನಿವೃತ್ತ ಅಧಿಕಾರಿಗಳು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಧಾರವಾಡದಲ್ಲಿ ಪ್ರತಿಷ್ಠಾನವೊಂದನ್ನು ಆರಂಭಿಸಿದ್ದಾರೆ.
ಪಾಶ್ಚಾತ್ಯ ದೇಶಗಳ ಹಲವು ವಿದ್ಯಾಸಂಸ್ಥೆಗಳು, ವಿವಿಗಳು ಸೈನ್ಯದ ವಿಷಯವಾಗಿ ದೀರ್ಘ ಅಧ್ಯಯನ, ಸಂಶೋಧನೆಗಳನ್ನು ನಿರಂತರ ಕೈಗೊಂಡಿವೆ. ಭಾರತದಲ್ಲಿ ಕೆಲವೇ ವಿವಿಗಳು ಮಿಲಿಟರಿ, ಯುದ್ಧ, ರಕ್ಷಣಾ ವ್ಯವಸ್ಥೆ ಬಗ್ಗೆ ಅಧ್ಯಯನ ಕೈಗೊಂಡಿದ್ದರೂ ರಾಜ್ಯದಲ್ಲಿ ಯಾವ ಸಂಸ್ಥೆಗಳು ಸೈನ್ಯ ಕುರಿತು ಹೇಳಿಕೊಳ್ಳುವ ಕಾರ್ಯ ಮಾಡಿಲ್ಲ. ಪುರಾತನ ರಾಜರು, ವೀರರ ದಂಡಯಾತ್ರೆಗಳ ಬಗ್ಗೆ ನಾವು ಮಾತನಾಡುತ್ತೇವೆ ಹೊರತು ಈಗಿರುವ ಸೈನಿಕ ವೃತ್ತಿ, ಯುದ್ಧದ ರಚನೆ, ಶಸ್ತ್ರಾಸ್ತ್ರಗಳ ಅರಿವು ನಮ್ಮ ಜನರಿಗೆ ಅಷ್ಟಕಷ್ಟೇ.
ಈ ಕಾರಣಕ್ಕಾಗಿಯೇ 2012ರ ಜನವರಿ ತಿಂಗಳಲ್ಲಿ ಹುಟ್ಟಿಕೊಂಡಿದ್ದು ಶ್ರೀ ಕುಮಾಂವು  ಪ್ರತಿಷ್ಠಾನ. ಶ್ರೀಲಂಕಾದ ಭಾರತೀಯ ಶಾಂತಿ ಪಾಲನಾ ಪಡೆಯ ಮಾಜಿ ಮುಖ್ಯಸ್ಥ, ವಿಶಿಷ್ಟ ಸೇವಾ ಪದಕ ಪಡೆದ ನಿವೃತ್ತ ಲೆಪ್ಟಿನಂಟ್ ಜನರಲ್ ಎಸ್.ಸಿ. ಸರ್‌ದೇಶಪಾಂಡೆ ಅವರ ಪ್ರಯತ್ನವಾಗಿ ಹುಟ್ಟಿಕೊಂಡ ಈ ಪ್ರತಿಷ್ಠಾನ, ಪ್ರಸ್ತುತ ಸೈನ್ಯ, ಸೈನಿಕನ ಕುರಿತಾಗಿ ಸಾಮಾನ್ಯ ಜನರಿಗೆ ಅರಿವು ಮೂಡಿಸುತ್ತಿದೆ. ಸರದೇಶಪಾಂಡೆ ಸಂಘಟನೆ ಖರ್ಚು-ವೆಚ್ಚ ತಾವೇ ಭರಿಸುತ್ತಿದ್ದು, ಸಂಸ್ಥಾಪಕ ಸದಸ್ಯರಾಗಿ ಆದಾಯ ಕರ ಇಲಾಖೆ ನಿವೃತ್ತ ಮುಖ್ಯ ಆಯುಕ್ತ ಎನ್.ಪಿ. ಭಟ್, ಭಾರತೀಯ ವಾಯು ಸೇನೆಯ ನಿವೃತ್ತ ಅಧಿಕಾರಿ ವಸಂತ ವಾಯಿ, ಕರ್ನಲ್ ಮೋಹನಮಠ, ಬ್ರಿಗೇಡಿಯರ್ ಎಸ್.ಜಿ. ಭಾಗವತ್, ನೌಕಾ ಸೇನೆಯ ನಿವೃತ್ತ ಕಮೋಡೋರ್ ಅರವಿಂದ ಶಿಗ್ಗಾಂವ ಕೈ ಜೋಡಿಸಿದ್ದಾರೆ.
ಏನಿದರ ಕಾರ್ಯ: ರಕ್ಷಣಾ ಪಡೆಗಳ ಬಗ್ಗೆ ಅರಿವು ಮೂಡಿಸುವುದು ಮಾತ್ರವಲ್ಲದೇ, ಸೈನ್ಯ, ಸೈನಿಕನ ವಿಷಯವಾಗಿ ಸಮಾಜದ ಸಾಮಾಜಿಕ ಜವಾಬ್ದಾರಿ ಏನು ಸೈನಿಕ ಸನ್ಮಾನ ಎಂದರೇನು ಎಂಬುದನ್ನು ಜನತೆ ಅರಿಯಬೇಕಿದೆ. ಈ ಉದ್ದೇಶದಿಂದ ಪ್ರತಿಷ್ಠಾನವನ್ನು ಆರಂಭಿಸಲಾಗಿದೆ. ಪ್ರತಿಷ್ಠಾನದ ಸಂಸ್ಥಾಪಕ ಎಸ್.ಸಿ. ಸರದೇಶಪಾಂಡೆ ಅವರು ಉತ್ತರಾಖಂಡದ ಕುಮಾಂವು ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರತಿಷ್ಟಾನಕ್ಕೆ ಕುಮಾಂವು ಹೆಸರು ಇಡಲಾಗಿದೆ. ಪ್ರತಿ ತಿಂಗಳು ವಿದ್ಯಾವರ್ಧಕ ಸಂಘದಲ್ಲಿ ರಕ್ಷಣಾ ಪಡೆಗಳ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗುತ್ತಿದೆ ಎಂದು ಪ್ರತಿಷ್ಠಾನದ ಕುರಿತು ವಾಯು ಸೇನೆಯ ನಿವೃತ್ತ ಅಧಿಕಾರಿ ವಸಂತ ವಾಯಿ ಮಾಹಿತಿ ನೀಡಿದರು.
ಭಾರತೀಯ ವಾಯು ಸೇನೆಯ ಬಳುವಳಿ, ಭಾರತೀಯ ರಕ್ಷಣಾ ಪಡೆಗಳಲ್ಲಿ ಮಹಿಳೆಯರು, ರಕ್ಷಣಾ ಪಡೆಯಲ್ಲಿ ಮಾಧ್ಯಮಗಳು, ಜಗತ್ತಿನ ಪ್ರಸ್ಥಭೂಮಿಗೆ ರೈಲು, ಭಾರತೀಯ ಸೇನಾ ದಿವಸ, ಸಾಕ್ಷ್ಯಚಿತ್ರಗಳ ಪ್ರದರ್ಶನ, ಯುದ್ಧಗಳಲ್ಲಿ ತಂತ್ರಜ್ಞಾನ, ಆಕಾಶ ಯುದ್ಧ, ನಮ್ಮ ಸಾಮುದ್ರಿಕ ಸಂಪತ್ತು, ಇಂಡೋ-ಚೀನಾ ಸಂಬಂಧ, ಭಾರತ-ಚೀನಾ ಸಂಘರ್ಷ, ಮುಂದೇನು ಹೀಗೆ ಒಂದು ವರ್ಷದಲ್ಲಿ 16 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಿವೃತ್ತ ಸೇನಾಧಿಕಾರಿಗಳಿಂದ ವಿಶೇಷ ಉಪನ್ಯಾಸ ಮಾಡಲಾಗಿದೆ. ಅಲ್ಲದೇ, ಬರುವ ದಿನಗಳಲ್ಲಿ ಸಾಮುದ್ರಿಕ ರಕ್ಷಣಾ ವ್ಯವಸ್ಥೆ, ಭಾರತದ ಆಂತರಿಕ ರಕ್ಷಣಾ ವ್ಯವಸ್ಥೆ, ನಕ್ಸಲ್ ಹಾವಳಿ, ಕನ್ನಡದಲ್ಲಿ ಮಿಲಿಟರಿ ಸಾಹಿತ್ಯ, ರಕ್ಷಣಾ ಸಂಶೋಧನಾ ಸಂಸ್ಥೆ ಹೀಗೆ ಮತ್ತಿತರೆ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಜನೆ ಇದೆ. ಪ್ರತಿಷ್ಠಾನದ ವತಿಯಿಂದ ಬರೀ ಧಾರವಾಡ ಮಾತ್ರವಲ್ಲ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲೂ ಈ ಕಾರ್ಯಕ್ರಮ ಆಯೋಜಿಸುವ ಇರಾದೆ ನಮ್ಮದಿದ್ದರೂ ಸಂಘ-ಸಂಸ್ಥೆಗಳು ಮುಂದೆ ಬರುತ್ತಿಲ್ಲ ಎಂದು ವಸಂತ ವಾಯಿ ಬೇಸರ ವ್ಯಕ್ತಪಡಿಸುತ್ತಾರೆ.
ಸೈನದ ಕುರಿತು ಇಡೀ ರಾಜ್ಯದಲ್ಲಿಯೇ ಕುಮಾಂವು ಪ್ರತಿಷ್ಠಾನ ವಿಶಿಷ್ಟ ಕೆಲಸ ಮಾಡುತ್ತಿದ್ದು, ಪ್ರೋತ್ಸಾಹಿಸುವ ಅಗತ್ಯವಿದೆ. ತಮ್ಮ ಸಂಘ-ಸಂಸ್ಥೆಗಳಿಂದ ಸಾಮಾನ್ಯ ಜನರಿಗೆ ಸೈನ್ಯದ ಕುರಿತು ಮಾಹಿತಿ ಒದಗಿಸುವ ಉದ್ದೇಶವಿದ್ದರೆ 0836-2743374 ಅಥವಾ ಮೊ: 97319 33889 ಸಂಪರ್ಕಿಸಿ.
-ಬಸವರಾಜ ಹಿರೇಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement