ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸಣ್ಣ ಮಕ್ಕಳ ಅಂಧತ್ವ ನಿವಾರಣೆಗೆ ಬದ್ಧ

Lingaraj Badiger
Updated On : 31 Jul 2013, 10:58 am

ಧಾರವಾಡ:  ಇತ್ತೀಚೆಗೆ ಶಾಲಾ ಮಕ್ಕಳಲ್ಲಿ ದೃಷ್ಟಿ ದೋಷ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಇದರ ನಿವಾರಣೆಗಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ.
ಮಂಗಳವಾರ ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಎಂ.ಎಂ. ಜೋಶಿ ನೇತ್ರ ವಿಜ್ಞಾನ ಸಂಸ್ಥೆಯ ವೈದ್ಯ ಡಾ. ಕೃಷ್ಣಪ್ರಸಾದ, ಪಾಲಕರ ನಿರ್ಲಕ್ಷ್ಯ ಹಾಗೂ ಅಂಧತ್ವ ಪತ್ತೆ ತಿಳುವಳಿಕೆ ಕೊರತೆಯಿಂದ ಸಾಕಷ್ಟು ಮಕ್ಕಳ ಕಣ್ಣಿನ ಸಮಸ್ಯೆ ಸಾಮಾನ್ಯವಾಗಿ ಉಳಿದು ದೃಷ್ಟಿ ಕಳೆದುಕೊಳ್ಳುತ್ತಿದ್ದಾರೆ. ಜಿಲ್ಲೆಯ ಪ್ರತಿ ಶಾಲೆಯಲ್ಲಿ ಶೇ. 6.5ರಷ್ಟು ಮಕ್ಕಳು ದೃಷ್ಟಿ ದೋಷದಿಂದ ಬಳಲುತ್ತಿರುವ ಅಂಶ ಅಧ್ಯಯನದಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ 2009ರಿಂದಲೇ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನೇತ್ರ ವಿಜ್ಞಾನ ಸಂಸ್ಥೆಯು ಮಕ್ಕಳಿಗೆ ಚಿಕಿತ್ಸೆ ನೀಡುವ ಯೋಜನೆ ಚಾಲ್ತಿಯಲ್ಲಿದೆ ಎಂದರು.
ಮೊದಲು ಗ್ರಾಮಗಳಲ್ಲಿ: ಆರಂಭದಲ್ಲಿ ಗ್ರಾಮೀಣ ಪ್ರದೇಶದ ಪ್ರತಿ ಸರ್ಕಾರಿ ಶಾಲೆಯಿಂದ ಓರ್ವ ಶಿಕ್ಷಕರಿಗೆ ಕಣ್ಣಿನ ತಪಾಸಣೆ ಬಗ್ಗೆ ತರಬೇತಿ ನೀಡಲಾಯಿತು. ಮಕ್ಕಳಲ್ಲಿನ ಅಂಧತ್ವ ಯಾವ ರೀತಿ ಪತ್ತೆ ಹಚ್ಚಬೇಕು ಎಂದು ತಿಳಿಸಿ ಕೊಡಲಾಯಿತು. ನಂತರದ ದಿನಗಳಲ್ಲಿ ವಿವಿಧ ರೀತಿಯ ದೃಷ್ಟಿ ದೋಷ ಹಾಗೂ ಅಂಧತ್ವ ಪತ್ತೆಯಾದ ಮಕ್ಕಳಿಗೆ ನೇತ್ರ ಸಂಸ್ಥೆಯು ಸರ್ವ ಶಿಕ್ಷಣ ಅಭಿಯಾನದ ಮೂಲಕ ಉಚಿತ ಚಿಕಿತ್ಸೆ ಮಾಡಲಾಯಿತು. 2009ರಿಂದ 2012ರ ವರೆಗೆ 204 ಮಕ್ಕಳಿಗೆ ಕನ್ನಡಕ ಕೊಡಲಾಗಿದ್ದು, 143 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ ಎಂದು ಹೇಳಿದರು.
ಯೋಜನೆ ಯಶಸ್ವಿ ಹಿನ್ನೆಲೆಯಲ್ಲಿ ಪ್ರಸ್ತುತ ವರ್ಷ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮಕ್ಕಳ ಕಣ್ಣಿನ ತಪಾಸಣೆ ಹಾಗೂ ಅದಕ್ಕೆ ಪರಿಹಾರ ನೀಡುವ ಯೋಜನೆ ಹಾಕಲಾಗಿದೆ. ಸುವರ್ಣ ಆರೋಗ್ಯ ಚೇತನ ಯೋಜನೆ ಅಡಿ ದೃಷ್ಟಿ ದೋಷದಿಂದ ಬಳಲುವ ಮಗುವಿಗೆ ಪೂರ್ತಿ ಉಚಿತ ಚಿಕಿತ್ಸೆ ನೀಡಲಾಗುವುದು. ಅಲ್ಲದೇ, ಆರ್ಥಿಕ ತೊಂದರೆಯಿಂದ ಯಾವುದೇ ಮಗು ತನ್ನ ಅಂಧತ್ವ ಮುಚ್ಚಿಡದೆ ಚಿಕಿತ್ಸೆ ಪಡೆದುಕೊಳ್ಳಬೇಕೆಂಬ ಉದ್ದೇಶದಿಂದ ಶಿಕ್ಷಣ ಇಲಾಖೆ ಜತೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಟ್ಟಿನಲ್ಲಿ ಧಾರವಾಡ ಜಿಲ್ಲೆಯಲ್ಲಿ ಕಣ್ಣಿನ ಸಮಸ್ಯೆಯುಳ್ಳ ಒಂದೂ ಮಗುವು ಇರದಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ಡಾ. ಕೃಷ್ಣಪ್ರಸಾದ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಾ.ಎಂ.ಎಂ. ಜೋಶಿ ಹಾಗೂ ಸಮನ್ವಯ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement