ಈತ ಹಿಂದೂಗಳಲ್ಲಿ ಹಿಂದೂ, ಮುಸ್ಲಿಂರಲ್ಲಿ ಮುಸ್ಲಿಂ
ಹೆಬ್ಬಳ್ಳಿ (ಧಾರವಾಡ): ಈತ ಹಿಂದೂ ಧರ್ಮದವ. ಆದರೂ ಈತ ಆರಾಧಿಸುವುದು ಹಿಂದೂ ದೇವರುಗಳ ಜೊತೆಗೆ ಅಲ್ಲಾನನ್ನೂ.
ಆರೇ.. ಇದರಲ್ಲೇನಿದೆ ವಿಶೇಷ ಅಂತೀರಾ..?
ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ರಾಯಪ್ಪ ಮೇಲಿನಮನಿ ಬರೀ ಹಿಂದೂ ದೇವರನ್ನು ಆರಾಧಿಸುವುದಿಲ್ಲ. ರಂಜಾನ್ ತಿಂಗಳಲ್ಲಿ ಮುಸ್ಲಿಂ ಬಂಧುಗಳಂತೆ ನಿತ್ಯ ರೋಜಾ ಮಾಡುತ್ತಾನೆ. ಮುಸ್ಲಿಂರಿಗಿಂತಲೂ ಮುಂಚೆಯೇ ಎದ್ದು ನಮಾಜ್ ಮಾಡಲು ಬರುವವರಿಗೆ ನೀರು ತುಂಬಿಟ್ಟು, ಮಸೀದಿ ಶುಚಿಗೊಳಿಸಿ ಅವರೊಂದಿಗೆ ತಾನೂ ನಮಾಜ್ ಮಾಡುತ್ತಾನೆ. ಕಳೆದ ಎಂಟು ವರ್ಷಗಳಿಂದ ರಾಯಪ್ಪ ಹಿಂದೂಗಳಲ್ಲಿ ಹಿಂದೂವಾಗಿ, ಮುಸ್ಲಿಂರಲ್ಲಿ ಮುಸ್ಲಿಂನಾಗಿ ಜೀವಿಸುತ್ತಿದ್ದಾನೆ.
ರಾಯಪ್ಪ ನಿತ್ಯದ ಯಾವ ಕೆಲಸವನ್ನು ತಪ್ಪಿಸಿದರೂ ಮಸೀದಿ ಶುಚಿಗೊಳಿಸುವ ಕೆಲಸವನ್ನು ನಿತ್ಯ ಅಚ್ಚುಕಟ್ಟಾಗಿ ನಿರ್ವಹಿಸುತ್ತಾನೆ. ಪ್ರತಿದಿನ ಮಸೀದಿ ಶುಚಿಗೊಳಿಸುವುದು ಆತನ ಕಾಯಕದಲ್ಲೊಂದು. ಮುಸ್ಲಿಂರ ಪ್ರತಿಯೊಂದು ಹಬ್ಬವನ್ನು ರಾಯಪ್ಪ ಮನೆಯಲ್ಲಿಯೇ ಆಚರಿಸುತ್ತಾನೆ. ಹಿಂದೂ ಧರ್ಮದಲ್ಲಿ ಬರುವ ಎಲ್ಲ ಹಬ್ಬಗಳನ್ನೂ ಸರಿ ಸಮಾನಾಗಿ ಆಚರಿಸುತ್ತಾನೆ. ಹಿಂದೂ ದೇವರೊಂದಿಗೆ ಮುಸ್ಲಿಂ ದೇವರ ಭಾವಚಿತ್ರಗಳು ಆತನ ಮನೆಯಲ್ಲಿ ಕಾಣಸಿಗುತ್ತವೆ.
ಮನಸ್ಸಿಗೆ ಶಾಂತಿ: ರಂಜಾನ್ ತಿಂಗಳಲ್ಲಿ ಅಲ್ಲದೇ, ಪ್ರತಿ ಶುಕ್ರವಾರದಂದು ನಮಾಜ್ ಮಾಡುವುದನ್ನೂ ರಾಯಪ್ಪ ರೂಢಿಸಿಕೊಂಡಿದ್ದಾನೆ. ಹೀಗೆ ಹಿಂದೂ ಸಂಪ್ರದಾಯದೊಂದಿಗೆ ಮುಸ್ಲಿಂ ಸಂಪ್ರದಾಯ ಮೈಗೂಡಿಸಿಕೊಂಡಿರುವ ರಾಯಪ್ಪ, ನನಗೆ ಎಲ್ಲ ಧರ್ಮಗಳೂ ಒಂದೇ. ಯಾವ ಧರ್ಮದ ಮಾರ್ಗದಲ್ಲಿ ಮನಸ್ಸಿಗೆ ಶಾಂತಿ ಲಭಿಸುತ್ತದೆಯೋ ಆ ಧರ್ಮವನ್ನು ಆರಾಧಿಸುತ್ತೇನೆ ಎನ್ನುತ್ತಾರೆ. ಗುರು ಗೋವಿಂದ ಭಟ್ಟರ ಶಿಷ್ಯರಾಗಿದ್ದ ಶಿಶುವಿನಹಾಳದ ಸಂತ ಶರೀಫರು ಮುಸ್ಲಿಂರಾಗಿದ್ದರೂ ಹಿಂದೂ ಧರ್ಮವನ್ನು ಆರಾಧಿಸಿದರು. ಆಗ ಅವರನ್ನು ಟೀಕಿಸಿದರೂ ಅವರು ತಲೆ ಕೆಡಿಸಿಕೊಳ್ಳಲಿಲ್ಲ. ಅವರು ಒಂದು ರೀತಿಯಲ್ಲಿ ನನಗೆ ಮಾದರಿ. ಆರಂಭದಲ್ಲಿ ಸ್ನೇಹಿತರು ಹಾಗೂ ಬಂಧುಗಳು ನನ್ನನ್ನೂ ಹಿಯಾಳಿಸಿದರು, ನಕ್ಕರು. ಆದರೆ, ನಾನು ಮಾತ್ರ ಅಲ್ಲಾನನ್ನು ಆರಾಧಿಸುವುದನ್ನು ಬಿಡಲಿಲ್ಲ. ಈಗ ಅವರೇ ನನ್ನನ್ನು ಹೊಗಳುತ್ತಾರೆ ಎನ್ನುತ್ತಾರೆ ರಾಯಪ್ಪ. ಎಲ್ಲ ಧರ್ಮೀಯರೂ ಕಾಣಸಿಗುವ ಈ ದೊಡ್ಡ ಗ್ರಾಮದಲ್ಲಿ ಜಾತಿ, ಭೇದ- ಭಾವ ಎಲ್ಲೂ ಕಾಣಸಿಗುವುದಿಲ್ಲ. ಹಿಂದೂ-ಮುಸ್ಲಿಂ ಹಬ್ಬಗಳೆರಡನ್ನೂ ಎಲ್ಲರೂ ಜೊತೆಗೂಡಿ ಆಚರಿಸುತ್ತೇವೆ. 101 ಬಾವಿಗಳು ಹಾಗೂ 101 ದೇವಾಲಯಗಳನ್ನು ಹೊಂದಿ ಐತಿಹಾಸಿಕ ಮಹತ್ವವುಳ್ಳ ಗ್ರಾಮ ಹೆಬ್ಬಳ್ಳಿಯಲ್ಲಿ ರಾಯಪ್ಪ ಈಗ ಎಲ್ಲರಿಗೂ ಬೇಕಾದ ವ್ಯಕ್ತಿ. ಎಷ್ಟೋ ಮಹಾನ್ ಸಂತರು, ಶರಣರು, ದಾರ್ಶನಿಕರು ಜಗತ್ತಿನಲ್ಲಿ ಮಾನವರೆಲ್ಲರೂ ಒಂದೇ ಎಂದು ಪ್ರತಿಪಾದಿಸಿದರೂ ಸಮಾಜದಲ್ಲಿ ಜಾತಿ-ಜಾತಿ ಎಂದು ಗೊಂದಲಗಳಾಗುತ್ತಿರುವುದು ಬೇಸರದ ಸಂಗತಿ. ಈ ಸಂದರ್ಭದಲ್ಲಿ ರಾಯಪ್ಪನ ಬದುಕು ನಿಜಕ್ಕೂ ನಮಗೆಲ್ಲಾ ಮಾದರಿ ಎಂದು ಹೇಳುತ್ತಾರೆ ಗ್ರಾಮದ ಹಿರಿಯರಾದ ಮಂಜುನಾಥ ಮುಗ್ಗನವರ.
-ಹೊನ್ನಪ್ಪ ಲಕ್ಕಮ್ಮನವರ