ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ನ್ಯಾಯಾಲಯ ನಿರ್ದೇಶನ ಪಾಲಿಸದ ಅಧಿಕಾರಿಗಳ ವಿರುದ್ಧ ಅಸಮಾಧಾನ

Lingaraj Badiger
Updated On : 1 Aug 2013, 11:52 am

ಧಾರವಾಡ: ನ್ಯಾಯಾಲಯದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾಧಿಕಾರಿ ಬಿಸ್ವಾಸ್ ಸೇರಿದಂತೆ ಸರ್ಕಾರಿ ಹಿರಿಯ ಅಧಿಕಾರಿಗಳನ್ನು ಬುಧವಾರ ಹೈಕೋರ್ಟ್ ಸಂಚಾರಿ ಪೀಠ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಹೊಸಪೇಟೆ ಶುಗರ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಂಚಾರಿ ಪೀಠವು ಈ ವಿಷಯವಾಗಿ ನ್ಯಾಯಾಲಯ ನೀಡಿದ್ದ ನಿರ್ದೇಶನಗಳನ್ನು ಪಾಲಿಸದ ಬಳ್ಳಾರಿ ಜಿಲ್ಲಾಧಿಕಾರಿ ಅಮ್ಲನ್ ಬಿಸ್ವಾಸ್, ತುಮಕೂರು ಜಿಲ್ಲಾಧಿಕಾರಿ ಸತ್ಯಮೂರ್ತಿ, ಸದ್ಯದ ರಾಜ್ಯ ಚುನಾವಣಾ ಆಯುಕ್ತ ಅನಿಲಕುಮಾರ ಝಾ, ಉಪ ವಿಭಾಗಾಧಿಕಾರಿ ಅಶೋಕ್ ಅವರ ವಿರುದ್ಧ ನ್ಯಾಯಾಂಗ ನಿಂದನೆಯ ಎಚ್ಚರಿಕೆ ನೀಡಿತಲ್ಲದೆ ಆಗಸ್ಟ್ 7ರ ಒಳಗೆ ಹೊಸದಾಗಿ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಮೂರ್ತಿ ಎನ್. ಕುಮಾರ ಹಾಗೂ ಎಚ್.ಎಸ್. ಕೆಂಪಣ್ಣ ಅವರಿದ್ದ ದ್ವಿಸದಸ್ಯ ಪೀಠ ಬುಧವಾರ ಸೂಚಿಸಿತು. ಹೊಸಪೇಟೆ ಶುಗರ್ಸ್ ತನ್ನ ಕಾರ್ಯವ್ಯಾಪ್ತಿಯ ಜಮೀನುಗಳಿಂದ ಕಬ್ಬನ್ನು ಬೇರೆ ಕಾರ್ಖಾನೆಗೆ ಸಾಗಿಸದಂತೆ ಸೂಚಿಸಬೇಕು. ಈ ವಿಷಯವಾಗಿ ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮ ಜರುಗಿಸಿಲ್ಲ ಎಂದು ಅರ್ಜಿ ದಾಖಲಿಸಿತ್ತು. ಜು. 24ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠವು ಆಗ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಆಯುಕ್ತರಾಗಿದ್ದ ಅನಿಲಕುಮಾರ ಝಾ, ಬಳ್ಳಾರಿ ಜಿಲ್ಲಾಧಿಕಾರಿ ಆದಿತ್ಯ ಅಮ್ಲನ್ ಬಿಸ್ವಾಸ್, ಕಬ್ಬು ಆಯೋಗದ ನಿರ್ದೇಶಕರಾಗಿದ್ದ ಸತ್ಯಮೂರ್ತಿ, ಉಪ ವಿಭಾಗಾಧಿಕಾರಿ ಅಶೋಕ ಅವರಿಗೆ ಜು.31ರಂದು ನ್ಯಾಯಾಲಯಕ್ಕೆ ಖದ್ದಾಗಿ ಹಾಜರಾಗುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಕುರಿತು ಸರ್ಕಾರಿ ಅಧಿಕಾರಿಗಳ ಪರ ವಕೀಲರಾದ ಎಸ್.ಎಸ್. ನಾಗಾನಂದ ಸಲ್ಲಿಸಿದ ಅಫಿಡವಿಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ದ್ವಿಸದಸ್ಯ ಪೀಠವು ಆ.7ರ ಒಳಗಾಗಿ ಸಮಗ್ರ ಮಾಹಿತಿಗಳನ್ನೊಳಗೊಂಡ ಹೊಸ ಅಫಿಡವಿಟ್ ಸಲ್ಲಿಸಲು ಸೂಚನೆ ನೀಡಿತು.
ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ
ನವಲಗುಂದ: ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನು ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಬಿ.ಎಚ್. ಪಾಟೀಲರನ್ನು ಅಧ್ಯಕ್ಷರನ್ನಾಗಿ ಪುನರಾಯ್ಕೆ ಮಾಡಲಾಗಿದೆ. ಶಿಕ್ಷಣ ಇಲಾಖೆ ವೈ.ಎಚ್. ಬಣವಿ ಅವರನ್ನು ರಾಜ್ಯ ಪರಿಷತ್ ಸದಸ್ಯರಾಗಿ, ಆರೋಗ್ಯ ಇಲಾಖೆಯ ಎಸ್.ಬಿ. ಹಣಕೋಶ ಅವರನ್ನು ಕೋಶಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಎಸ್.ಎಸ್.ಪಟ್ಟಣಶೆಟ್ಟಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement