ಬಡತನದಿಂದ ಮಕ್ಕಳು ಶಾಲೆಗೆ ಗೈರು
ಹುಬ್ಬಳ್ಳಿ: ಕಿತ್ತು ತಿನ್ನುವ ಬಡತನದಿಂದಾಗಿ ಮಕ್ಕಳು ಶಾಲೆಗೆ ಬಾರದಿರುವುದು ಕಳವಳಕಾರಿ ಎಂದು ಕನಕದಾಸ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಶಾಂತಣ್ಣ ಕಡಿವಾಲ ಖೇದ ವ್ಯಕ್ತಪಡಿಸಿದರು.
ಕನಕದಾಸ ಶಿಕ್ಷಣ ಸಮಿತಿ ಹಾಗೂ ಸಿಂಧು ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ ವತಿಯಿಂದ ನವನಗರ ಬಳಿಯ ಅಧ್ಯಾಪಕ ನಗರದಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗದ ಮಕ್ಕಳಲ್ಲಿ ಶಿಕ್ಷಣ ಜ್ಞಾನದ ಅರಿವು ಮೂಡಿಸಲು ಇತ್ತೀಚೆಗೆ ಆಯೋಜಿಸಿದ್ದ 'ಕೂಲಿ ಬೇಡಾ ಶಾಲೆಗೆ ಬಾ' ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಡ ಮಕ್ಕಳಿಗೆ ಶಿಕ್ಷಣ ನೀಡುವುದಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಬಡತನದ ಮಧ್ಯೆಯೂ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಒದಗಿಸಲು ಮುಂದಾಗಬೇಕು. ಇದಕ್ಕಾಗಿ ಮಕ್ಕಳನ್ನು ನಿತ್ಯ ಶಾಲೆಗೆ ಕಳುಹಿಸಬೇಕು ಎಂದು ಸಲಹೆ ನೀಡಿದರು.
ಮಹಾನಗರ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ ಮಾತನಾಡಿ, ಬಡ ಮಕ್ಕಳಿಗೆ ಶಿಕ್ಷಣ ಒದಗಿಸುವ ಜತೆಗೆ ಅವರಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ತಿಳಿಸಿದರು. ಎಪಿಎಂಸಿ ಅಧ್ಯಕ್ಷ ಸುರೇಶ ದಾಸನೂರ, ಸಿಂಧು ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆಯ ಸದಸ್ಯ ನಜೀರಅಹ್ಮದ ಕೋಲಕಾರ, ಎಸ್.ಎನ್. ಛಬ್ಬಿ, ಶಿವನಗೌಡ ಪಾಟೀಲ, ಮಹಾಂತೇಶ ಕೋಣೆ, ಶಶಿಧರ ಕುರಹಟ್ಟಿ, ನಾಗರಾಜ ಅಮರಗೋಳ ಮತ್ತಿತರರು ಹಾಜರಿದ್ದರು.