ಅಧಿಕಾರಿಗಳಿಗೆ ಲಾಡ್ ಆದೇಶಗಳ ಮಹಾಪೂರ
ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 1
ಜಿಲ್ಲೆಯಲ್ಲಿ ಕುಡಿಯುವ ನೀರಿನ ಯೋಜನೆಗಳು ನಿಗದಿತ ಅವಧಿಯಲ್ಲಿ ಮುಗಿಸಬೇಕು. ಬರುವ ದಿನಗಳಲ್ಲಿ ಶಾಶ್ವತ ನೀರು ಪೂರೈಕೆ ಇರದಂತಹ ಯಾವ ಗ್ರಾಮಗಳು ಇರಬಾರದು. ಅಣ್ಣಿಗೇರಿಯ ಕುಡಿಯುವ ನೀರಿನ 44 ಕೋಟಿ ಯೋಜನೆಯ ಕುರಿತು ಭೂಸ್ವಾಧೀನ ಪ್ರಕ್ರಿಯೆಯನ್ನು ಮಳೆಗಾಲ ಮುಗಿಯುವುದರೊಳಗೆ ಮುಗಿಸಬೇಕು. ಅಳ್ನಾವರಕ್ಕೆ ಕಾಳಿ ನದಿ ನೀರಿನ ಯೋಜನೆಯ ಸಾಧ್ಯತೆ ಕುರಿತು ಸಾಧ್ಯತಾ ವರದಿಯನ್ನು ಸಲ್ಲಿಸಬೇಕು. ಜಿಲ್ಲೆಯಾದ್ಯಂತ ಇರಬಹುದಾದ ಬೋಗಸ್ ರೇಶನ್ ಕಾರ್ಡ್‌ಗಳನ್ನು ಕಾಲಮಿತಿ ಒಳಗೆ ಪತ್ತೆ ಹಚ್ಚಬೇಕು. ಯಾವುದೇ ಬಡವರಿಗೂ ಬಿಪಿಎಲ್ ಕಾರ್ಡ್ ಇಲ್ಲ ಎನ್ನುವ ಸ್ಥಿತಿ ಇರಕೂಡದು...
ಮೂಲಸೌಕರ್ಯ ಹಾಗೂ ವಾರ್ತಾ ಇಲಾಖೆ ಸಚಿವರಾಗಿ ಮೊದಲ ಬಾರಿಗೆ ಆಗಮಿಸಿದ ಸಂತೋಷ ಲಾಡ್ ಅವರು, ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಹೀಗೆ ಇನ್ನೂ ಅನೇಕ ಆದೇಶಗಳನ್ನು ಕೊಟ್ಟರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯು ರಾಜ್ಯಮಟ್ಟದ ರ್ಯಾಂಕಿಂಗ್‌ನಲ್ಲಿ ಸತತ ಇಳಿಕೆಯ ಗತಿ ಬದಲಾಗಿ ಅದು ಏರುಮುಖವಾಗಲು ಅವಶ್ಯಕ ಕ್ರಮಗಳನ್ನು ಈಗಿನಿಂದಲೇ ಪ್ರಾರಂಭಿಸಬೇಕು. ಮುಂಗಾರು ಹಂಗಾಮಿನಲ್ಲಿ ಒಳ್ಳೆ ಮಳೆ ಆದ ತಕ್ಷಣ ಹೆಚ್ಚಾಗುವ ರಸಗೊಬ್ಬರ ಹಾಗೂ ಗುಣಮಟ್ಟದ ಬೀಜಗಳು ಬೇಡಿಕೆಗೆ ಅನುಗುಣವಾಗಿ ರೈತರಿಗೆ ತಕ್ಷಣ ದೊರಕುವಂತೆ ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರವು ಯಾವುದೇ ಗ್ರಾಮ ನೀರಿನ ತೊಂದರೆಯಿಂದ ಪದೇಪದೇ ಬಳಲದಂತೆ ಶಾಶ್ವತ ಜಲಮೂಲ ಹೊಂದುವಂತಾಗಬೇಕು. ಎಲ್ಲ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು. ರಾಜ್ಯ ಸರ್ಕಾರದ ಈ ಆಶಯಗಳ ಹಿನ್ನೆಲೆಯಲ್ಲಿ ಪ್ರತಿ ಇಲಾಖೆ ಹಾಗೂ ಸರ್ಕಾರಿ ಸಂಸ್ಥೆಗಳ ಜಿಲ್ಲಾ ಮುಖ್ಯಸ್ಥರು ತ್ವರಿತವಾಗಿ ದಕ್ಷತೆ ಹಾಗೂ ಇಚ್ಛಾಶಕ್ತಿಯಿಂದ ಕಾರ್ಯನಿರ್ವಹಿಸಲು ಸಚಿವ ಸಂತೋಷ ಲಾಡ್ ಸೂಚಿಸಿದರು.
ಜಿಲ್ಲೆಯಲ್ಲಿ ಡೆಂಘೀ, ಚಿಕೂನ್‌ಗುನ್ಯಾ ಕುರಿತು ತ್ವರಿತ ಸಮೀಕ್ಷಾ ಕಾಲದಲ್ಲಿ ಆರೋಗ್ಯ ಇಲಾಖೆ ಹಾಗೂ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳು ಜಂಟಿಯಾಗಿ ತಂಡದೊಂದಿಗೆ ಹೋಗಿ ಜನರಿಗೆ ಕೈಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿವರಿಸಬೇಕು ಎಂದ ಅವರು, ರಸಗೊಬ್ಬರ ಅಥವಾ ಬೀಜಗಳ ಬೇಡಿಕೆ ಹಾಗೂ ಪೂರೈಕೆಯನ್ನು ಜಿಲ್ಲೆಯಲ್ಲಿ ಆಗುವ ಮಳೆಯನ್ನವಲಂಬಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ 3.72 ಲಕ್ಷ ಕುಟುಂಬಗಳಿದ್ದರೆ 4.12 ಲಕ್ಷ ಪಡಿತರ ಚೀಟಿ ನೀಡಲಾಗಿದೆ. ಇಷ್ಟಾಗಿ ಬಿಪಿಎಲ್ ಕಾರ್ಡ್ ಅರ್ಹತೆ ಇದ್ದು ಅದನ್ನು ಹೊಂದದ ಕುಟುಂಬಗಳಿವೆ. ಬೋಗಸ್ ಅಥವಾ ಹೆಚ್ಚುವರಿ ಕಾರ್ಡ್‌ಗಳಿಂದಾಗಿ ಈ ಸ್ಥಿತಿ ಇದೆ. ಇವುಗಳ ಪತ್ತೆ, ರದ್ದತಿಗೆ ಆಹಾರ ಇಲಾಖೆ ಗಮನವಿಟ್ಟು ಕೆಲಸ ಮಾಡಬೇಕು. ಡಿಸಿ ಸಮೀರ್ ಶುಕ್ಲ ಸಚಿವರಿಗೆ ಜಿಲ್ಲೆಯ ಕುಡಿಯುವ ನೀರಿನ ಪರಿಸ್ಥಿತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಜಿಪಂ ಸಿಇಓ ಹಳ್ಳಿಗಳಲ್ಲಿ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಪ್ರಮುಖ ಅಂಶಗಳ ಕುರಿತು ವಿವರ ನೀಡಿದರು.
ಶಾಸಕರಾದ ಪ್ರಸಾದ ಅಬ್ಬಯ್ಯ, ವಿನಯ ಕುಲಕರ್ಣಿ, ಶ್ರೀನಿವಾಸ ಮಾನೆ ಇದ್ದರು. ಎಸ್ಪಿ ಡಾ.ವೈ.ಎಸ್. ರವಿಕುಮಾರ, ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ, ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಇದ್ದರು.