ಇಂದು ಸಚಿವ ಲಾಡ್ಗೆ ಸನ್ಮಾನ
ಕಲಘಟಗಿ: ರಾಜ್ಯ ವಾರ್ತಾ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯ ರಾಜ್ಯ ಸಚಿವ, ಸ್ಥಳೀಯ ಶಾಸಕ ಸಂತೋಷ ಲಾಡ್ ಸಚಿವರಾಗಿ ಪ್ರಥಮ ಬಾರಿ ಪಟ್ಟಣಕ್ಕೆ ಜೂ. 2ರ ಬೆಳಗ್ಗೆ 9ಕ್ಕೆ ಆಗಮಿಸುತ್ತಿದ್ದು, ತಾಲೂಕು ಕಾಂಗ್ರೆಸ್ ಕಾರ್ಯಕರ್ತರು ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಸನ್ಮಾನಕ್ಕಾಗಿ ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ತಾಪಂ ಕಚೇರಿ ಸಭಾಭವನದಲ್ಲಿ ತಾಪಂ ಅಧ್ಯಕ್ಷ ಬಸವಣ್ಣಯ್ಯ ಹಿರೇಮಠ, ಸದಸ್ಯರು ಸಚಿವ ಲಾಡ್ರನ್ನು ಸನ್ಮಾನಿಸಲಿದ್ದಾರೆ. ನಂತರ ಸಚಿವರ ನಿವಾಸದಲ್ಲಿ ಪಕ್ಷದ ಕಾರ್ಯಕರ್ತರು ವಿವಿಧ ಸಂಘ-ಸಂಸ್ಥೆ, ಅಭಿಮಾನಿಗಳು ಸನ್ಮಾನ ಮಾಡಿ ತಮ್ಮ ಅಹವಾಲು ನೀಡಲಿದ್ದಾರೆಂದು ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬಿ.ವೈ. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಾಂಧಿನಗರ: ಅದ್ಧೂರಿ ಶಾಲಾ ಪ್ರಾರಂಭೋತ್ಸವ
ಧಾರವಾಡ: ನಗರದಲ್ಲಿರುವ ಗಾಂಧಿನಗರದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.5ರಲ್ಲಿ 2013-14ನೇ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಜೀವನ ಶಿಕ್ಷಣದ ನಿವೃತ್ತ ಸಹ ಸಂಪಾದಕರಾದ ಎಂ.ಯು. ಕರ್ಜಗಿ ಅವರು ಶಾಲೆಗೆ ಆಗಮಿಸಿದ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಿ ಮಾತನಾಡಿದರು. ಮುಖ್ಯೋಪಾಧ್ಯಾಯ, ರಾಷ್ಟ್ರಪ್ರಶಸ್ತಿ ಶಿಕ್ಷಕ ಶಂಕರ ಗಂಗಣ್ಣವರ, ಗೋಪಾಲ ನಾಯಕ, ಮಾಳಮಡ್ಡಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ವಿಜಯ ಮೆಳವಂಕಿ, ಎಸ್ಡಿಎಂಸಿ ಸದಸ್ಯರಾದ ಲಕ್ಷ್ಮೀ ಪಾಟೀಲ, ಪ್ರಕಾಶ್ ಪಾಟೀಲ, ದೈಹಿಕ ಶಿಕ್ಷಕ ಎ.ಎನ್. ಮುತ್ತಗಿ ಮತ್ತಿತರರಿದ್ದರು.
ಗುಟಕಾ ನಿಷೇಧ: ಮಾಜಿ ಶಾಸಕ ಬೆಲ್ಲದ ಸ್ವಾಗತ
ಧಾರವಾಡ: ರಾಜ್ಯ ಸರ್ಕಾರವು ಗುಟಕಾ ನಿಷೇಧ ಮಾಡಿದ್ದು, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅವರು ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರಮಿಕರ, ಸಾಮಾನ್ಯ ಜನರ, ಬಡವರ ಆರೋಗ್ಯಕ್ಕೆ ಮಾರಕವಾಗಿದ್ದ ಈ ಗುಟಕಾ ವಿಷಕಾರಿ ಪದಾರ್ಥವನ್ನು ನಿಷೇಧಿಸಿದ್ದು ಉತ್ತಮ ಕ್ರಮ. ಸಮಾಜದ ಆರೋಗ್ಯ ಯಾವಾಗಲೂ ಚೆನ್ನಾಗಿರಬೇಕು, ಅಂದಾಗ ಮಾತ್ರ ಉತ್ತಮ ಸಮಾಜ ಹುಟ್ಟಿಕೊಳ್ಳಲು ಸಾಧ್ಯ. ಇದರಿಂದ ಸಾಕಷ್ಟು ಆಸ್ಪತ್ರೆ ಖರ್ಚು ಸಹ ಉಳಿಯುತ್ತದೆ. ಇದೇ ರೀತಿಯ ಮದ್ಯ ಹಾಗೂ ಸಿಗರೇಟ್ ಸಹ ನಿಷೇಧಿಸುವ ಕೆಲಸವಾಗಬೇಕಿದೆ. ಈ ಪದಾರ್ಥಗಳ ನಿಷೇಧದಿಂದ ಸರ್ಕಾರಕ್ಕೆ ನಷ್ಟವೇನಿಲ್ಲ. ಸರ್ಕಾರದ ಬೊಕ್ಕಸ ತುಂಬಿಕೊಳ್ಳಲು ಸಾಕಷ್ಟು ನ್ಯಾಯವಾದ ಮಾರ್ಗಗಳಿದ್ದು, ಈ ಮೂಲಕ ಸರ್ಕಾರ ಆಡಳಿತ ನಡೆಸಬೇಕು. ಸಾಕಷ್ಟು ಹಣ ಆಡಳಿತದಲ್ಲಿ ಸೋರಿಕೆಯಾಗುತ್ತಿದ್ದು, ಮುಖ್ಯಮಂತ್ರಿಗಳು ಮೊದಲು ಸೋರಿಕೆಯನ್ನು ತಡೆಯಲಿ ಎಂದು ಬೆಲ್ಲದ ಹೇಳಿದರು. ಅಗ್ಗದ ದರದಲ್ಲಿ ಮದ್ಯ ನೀಡುವುದು ಹಾಗೂ ಒಂದು ಕೆಜಿ ಅಕ್ಕಿಯನ್ನು ರು. 1ಕ್ಕೆ ಕೊಡುತ್ತೇವೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಧಾರ ಕುರಿತು ಕೇಳಿದ ಪ್ರಶ್ನೆಗೆ ಈ ಬಗ್ಗೆ ಸರ್ಕಾರ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಜಾರಿಯಾದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸುತ್ತೇನೆ ಎಂದರು.
ಅಪರಿಚಿತ ವ್ಯಕ್ತಿ ಶವ ಪತ್ತೆ
ಧಾರವಾಡ: ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿ ಶವ ಮೇ. 30ರಂದು ಪತ್ತೆಯಾಗಿದೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತನ್ನ ಲುಂಗಿಯಿಂದ ಬಿಗಿದು ನೇಣು ಹಾಕಿಕೊಂಡಿರುವ ಅಪರಿಚಿತ ವ್ಯಕ್ತಿ 55 ರಿಂದ 60 ವರ್ಷದವನಾಗಿದ್ದಾನೆ. 5 ಪುಟು 5 ಇಂಚು ಎತ್ತರ, ಸಾಧಾರಣ ಮೈಕಟ್ಟು, ಮೈಬಣ್ಣ ಹೊಂದಿರುವ ಈತ ಉದ್ದ ಮುಖ ಮತ್ತು ಉದ್ದ ಮೂಗು ಚಹರೆ ಹೊಂದಿದ್ದಾನೆ. ಅಪರಿಚಿತ ವ್ಯಕ್ತಿ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಗರಗ ಠಾಣೆ 0836-2233217 ಅಥವಾ ಪೊಲೀಸ್ ಕಂಟ್ರೋಲ್ 0836-2233200ಗೆ ಸಂಪರ್ಕಿಸಬೇಕೆಂದು ಠಾಣೆ ಪಿಎಸ್ಐ ಎಂ.ಬಿ. ಮೊಕಾಶಿ ತಿಳಿಸಿದ್ದಾರೆ.
4ರಂದು ಎಸ್ಡಿಎಂ ಡಾಕ್ಟರ್
ಧಾರವಾಡ: ಆಕಾಶವಾಣಿ ನೇರ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಎಸ್ ಡಿಎಂ ಮಹಾವಿದ್ಯಾಲಯದ ಮಾನಸಿಕ ರೋಗ ಚಿಕಿತ್ಸಾ ವಿಭಾಗದ ಡಾ. ಉಷಾ ಪಾಟೀಲ ಜೂ. 4ರಂದು ಸಂಜೆ 6.50ಕ್ಕೆ ವಿಶ್ವ ತಂಬಾಕು ರಹಿತ ದಿನ ವಿಷಯದ ಕುರಿತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಕೇಳುಗರು ಪ್ರಶ್ನೆಗಳನ್ನು ದೂ.ಸಂ-0836-2443414 ಅಥವಾ 2443415 ಅಥವಾ 2443416ಗೆ ಕರೆ ಮಾಡಬಹುದು.
ಸರಳ ರೀತಿಯಲ್ಲಿ ಆಂಗ್ಲ ಭಾಷೆ ಕಲಿಕೆ
ಕನ್ನಡಪ್ರಭ ವಾರ್ತೆ, ಧಾರವಾಡ, ಜೂನ್ 1
ಆಂಗ್ಲ ಭಾಷೆ ಅಂತಾರಾಷ್ಟ್ರೀಯ ಭಾಷೆಯಾಗಿ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಇಂತಹ ಈ ಭಾಷಾ ಕೌಶಲ್ಯವನ್ನು ಮಕ್ಕಳಿಗೆ ಕಲಿಸಿಕೊಡುವಲ್ಲಿ ಎಬಿಬಿ ಇಂಗ್ಲಿಷ್ ಅಕಾಡೆಮಿ ಯಶಸ್ವಿಯಾಗಿದೆ ಎಂದು ಶಿಕ್ಷಣ ತಜ್ಞರಾದ ಉಷಾ ಜೋಸೆಫ್ ಹೇಳಿದರು.
ಇಲ್ಲಿನ ಎಬಿಬಿ ಇಂಗ್ಲಿಷ್ ಅಕಾಡೆಮಿ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ಅಕಾಡೆಮಿ ಮಕ್ಕಳಿಗಾಗಿ ಬೇಸಿಗೆ ಶಿಬಿರ ಏರ್ಪಡಿಸಿದ್ದು, ಈ ಮೂಲಕ ಮಕ್ಕಳಲ್ಲಿ ಆಂಗ್ಲ ಭಾಷೆಯನ್ನು ಸರಳವಾಗಿ ಕಲಿಸುತ್ತಿರುವುದು ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಅಕಾಡೆಮಿ ಮುಖ್ಯಸ್ಥ ಪ್ರೊ. ಎ.ಬಿ. ಬಿಜಾಪುರ, ಎಂ.ಎಂ. ಖತೀಬ್, ಸ್ವೀವ್ ಅಬ್ರಾಹಂ, ಆರ್. ಬಸವರಾಜ, ಮಹಾಜನ, ದೇಶಪಾಂಡೆ ಇದ್ದರು.
ಬೇಸಿಗೆ ಶಿಬಿರ ಧಾರವಾಡ ಎಬಿಬಿ
ಇಂಗ್ಲಿಷ್ ಅಕಾಡೆಮಿ ಶಾಲಾ ಮಕ್ಕಳಿಗಾಗಿ ಏರ್ಪಡಿಸಿದ್ದ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಶಿಕ್ಷಣ ತಜ್ಞರಾದ ಉಷಾ ಜೋಸೆಫ್ ಮಾತನಾಡಿದರು.