ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಶ್....! ಪಾಲಿಕೆ ನಿದ್ರಿಸುತ್ತಿದೆ

Vishwanath S
Updated On : 2 Jun 2013, 12:06 pm

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂನ್ 1
ಶ್....! ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಗಾಢ ನಿದ್ರೆಯಲ್ಲಿದೆ.
ಹೌದು, ಕೋಟೆ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವ ಜಾಯಮಾನದವರು ಹು-ಧಾ ಪಾಲಿಕೆ ಅಧಿಕಾರಿಗಳು. ಫುಟ್‌ಪಾತ್ ಸ್ವಾಹಾ ಮಾಡಲಾಗುತ್ತಿದೆ ಎಂದು ಜನ ಮರುಗುತ್ತಿದ್ದರೂ ಪಾಲಿಕೆಯ ಅಧಿಕಾರಿಗಳು ಮಾತ್ರ ತಮಗೆ ಯಾವುದೂ ಸಂಬಂಧವೇ ಇಲ್ಲ ಎನ್ನುವಂತೆ ನಿದ್ರೆಗೆ ಜಾರಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೂ ಗುರಿಯಾಗಿದೆ.
ಅಂಗಡಿಕಾರರು ಫುಟ್‌ಪಾತ್ ಅತಿಕ್ರಮಣ ಮಾಡುತ್ತಿದ್ದಾರೆ. ಹು-ಧಾದಲ್ಲಿ ಶೇ. 70ರಷ್ಟು ಫುಟ್‌ಪಾತ್‌ನ್ನು ಅಂಗಡಿಕಾರರು ಅತಿಕ್ರಮಿಸಿಕೊಂಡಿರುವ ಬಗ್ಗೆ ಜನರು ಕಳವಳ ವ್ಯಕ್ತಪಡಿಸಿದರೂ ಪಾಲಿಕೆ ಮಾತ್ರ ಫುಟ್‌ಪಾತ್ ತನ್ನ ಸ್ವಂತ ಆಸ್ತಿಯೇ ಅಲ್ಲ ಎಂಬಂತೆ ವರ್ತಿಸುತ್ತಿದೆ.
ಹಳೆ ಸ್ಥಿತಿಯತ್ತ ಫುಟ್‌ಪಾತ್...
ಹು-ಧಾ ಫುಟ್‌ಪಾತ್ ಸುಂದರ ರೂಪ ಪಡೆದುಕೊಂಡ ಬಳಿಕ ಜನರು ನಿರ್ಭಯರಾಗಿ ರಸ್ತೆ ಬಿಟ್ಟು ಫುಟ್‌ಪಾತ್ ಮೇಲೆ ಓಡಾಡುವಂತಾಗಿತ್ತು. ಜನರು ಈ ಬಗ್ಗೆ ಪಾಲಿಕೆ ಆಡಳಿತ ವ್ಯವಸ್ಥೆಯನ್ನು ಹರಸಿದ್ದರು. ಆದರೀಗ ಕಾಲ ಬದಲಾಗಿದೆ, ಹಳೆಯ ಸಮಸ್ಯೆ ಮತ್ತೆ ವಕ್ಕರಿಸಿಕೊಳ್ಳಲಾರಂಭಿಸಿದೆ. ಫುಟ್‌ಪಾತ್ ಮೇಲೆ ಮತ್ತೆ ಅಂಗಡಿಗಳು ತಲೆ ಎತ್ತಿವೆಯಲ್ಲದೇ, ಫುಟ್‌ಪಾತ್‌ಗೆ ಹೊಂದಿಕೊಂಡಿರುವ ಅಂಗಡಿಕಾರರು ಫುಟ್‌ಪಾತ್ ಅತಿಕ್ರಮಣ ಮಾಡಿಕೊಂಡು ಬಿಟ್ಟಿದ್ದಾರೆ. ಹೀಗಾಗಿ ಜನ ಫುಟ್‌ಪಾತ್ ಮೇಲೆ ಓಡಾಡಲು ಸಾಧ್ಯವಾಗದೇ ತೊಂದರೆ ಅನುಭವಿಸುತ್ತಿದ್ದಾರೆ. ಅನಿವಾರ್ಯವಾಗಿ ರಸ್ತೆಗಳಿದು ಅಪಘಾತಕ್ಕೀಡಾಗುವ ಭೀತಿ ಎದುರಿಸುತ್ತಿದ್ದಾರಲ್ಲದೇ, ಇದರಿಂದ ವಾಹನ ಸಂಚಾರಕ್ಕೂ ಕಿರಿಕಿರಿ ಉಂಟಾಗುತ್ತಿದೆ.
ಹೇಳೋರಿಲ್ಲ ಕೇಳೋರಿಲ್ಲ...
ಫುಟ್‌ಪಾತ್ ಅತಿಕ್ರಮಣವಾಗಿರುವ ಬಗ್ಗೆ ಸಾರ್ವಜನಿಕರು ಹಾಗೂ ಕೆಲ ಸಂಘಟನೆಯವರು ಪಾಲಿಕೆಗೆ ಈಗಾಗಲೇ ದೂರು ನೀಡಿದ್ದಾರೆ. ಆದರೆ, ಅಧಿಕಾರಿಗಳು ಮಾತ್ರ ಯಾರ ಮಾತನ್ನೂ ಕೇಳುತ್ತಿಲ್ಲ. ಪಾಲಿಕೆಗೆ ಮೇಯರ್, ಉಪಮೇಯರ್ ಆಯ್ಕೆಯಾಗಿಲ್ಲ. ಅಧಿಕಾರಿಗಳಿಗೆ ಮೂಗುದಾರ ಹಾಕುವ ಆಡಳಿತ ವ್ಯವಸ್ಥೆ ಪಾಲಿಕೆಯಲ್ಲಿ ಇನ್ನೂ ಅಧಿಕಾರಕ್ಕೆ ಬಂದಿಲ್ಲವಾದ್ದರಿಂದ ಅಧಿಕಾರಿಗಳು ಆಡಿದ್ದೇ ಆಟ ಎಂಬಂತಾಗಿದೆ.
ಫುಟ್‌ಪಾತ್‌ನಿಂದ ಬಂದಷ್ಟು ಹಫ್ತಾ ಕಿಸೆಗೆ ಹಾಕಿಕೊಂಡು ಮುಗುಮ್ಮಾಗಿ ಕುಳಿತಿದ್ದಾರೆ. ಜನರು ಸಮಸ್ಯೆ ಹೇಳಿಕೊಂಡು ಬಂದರೆ ಕೇಳುವ ಕಿವಿಗಳೇ ಪಾಲಿಕೆಯಲ್ಲಿ ಇಲ್ಲವಾಗಿದೆ. ಹೀಗಾಗಿ ಜನರು ತಮ್ಮ ಅಳಲು ಯಾರ ಬಳಿ ತೋಡಿಕೊಳ್ಳಬೇಕೆಂದು ತೋಚದಾಗಿದ್ದಾರೆ.
ಬಿಗ್ ಮಾಫಿಯಾ..: ಫುಟ್‌ಪಾತ್ ಮೇಲೆ ಅಂಗಡಿ ಇಟ್ಟುಕೊಂಡು ನಿಯಮ ಉಲ್ಲಂಘಿಸಿದರೂ ಪಾಲಿಕೆ ಅಧಿಕಾರಿಗಳು ಸುಮ್ಮನೇ ಕುಳಿತುಕೊಂಡಿರುವುದು ನೋಡಿದರೆ ಫುಟ್‌ಪಾತ್ ಅತಿಕ್ರಮಣ ಬಿಗ್ ಮಾಫಿಯಾ ತರ ಆಗಿದೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ.
ಈ ಮಾಫಿಯಾದಿಂದಾಗಿ ಅಧಿಕಾರಿಗಳಿಗೆ ಕುಂತಲ್ಲೇ ಲಕ್ಷಾಂತರ ರುಪಾಯಿ ಹಫ್ತಾ    ಕೈ ಸೇರುತ್ತಿದೆ. ಇದರಿಂದಾಗಿಯೇ ಅಧಿಕಾರಿಗಳು ಕರ್ತವ್ಯ ಪ್ರಜ್ಞೆ ಮರೆತು ಫುಟ್‌ಪಾತ್ ಅತಿಕ್ರಮಣ ಮಾಡಿಕೊಂಡವರಿಗೆ ಅಭಯ     ನೀಡುತ್ತಿದ್ದಾರೆ.
ಅವರೊಬ್ಬರಿದ್ದರು, ಇವರೂ ಇದ್ದಾರೆ...
ಪಿ. ಮಣಿವಣ್ಣನ್ ಎಂದ ಕೂಡಲೇ ಹು-ಧಾದ ಜನ ಒಮ್ಮೆ ಆ ಮುಖವನ್ನು ನೆನಪಿಸಿಕೊಳ್ಳುತ್ತಾರೆ. ಫುಟ್‌ಪಾತ್ ಮೇಲೆ ಅನಧಿಕೃತವಾಗಿ ತಲೆ ಎತ್ತಿದ್ದ ಅಂಗಡಿ, ಬಿಲ್ಡಿಂಗ್‌ಗಳನ್ನು ಮುಲಾಜಿಲ್ಲದೇ ನೆಲಸಮಗೊಳಿಸಿದ್ದರು. ಇದರಿಂದಾಗಿ ಸಾಮಾನ್ಯ ಜನರ ಬಾಯಲ್ಲಿಯೂ ಮಣಿವಣ್ಣನ್ ಹೆಸರು ಓಡಾಡುತ್ತಿತ್ತು. ಹಾಳು ಕಿಷ್ಕಿಂದೆಯಂತಾಗಿದ್ದ ಹು-ಧಾಕ್ಕೆ ಅಂದದ ರೂಪ ಕೊಟ್ಟಿದ್ದೇ ಮಣಿವಣ್ಣನ್. ಫುಟ್‌ಪಾತ್ ಜನರ ಓಡಾಟಕ್ಕೆ ಮುಕ್ತಗೊಳಿಸಿಕೊಡುವ ಮೂ ಲಕ ಪ್ರಶಂಸೆಗೆ ಪಾತ್ರರಾಗಿದ್ದರು. ಆದರೆ, ತದನಂತರ ಬಂದ ಅಧಿಕಾರಿಗಳು ಅತಿಕ್ರಮಣ ಬಂಧನದಿಂದ ಮುಕ್ತವಾಗಿದ್ದ ಫುಟ್‌ಪಾತ್ ಉಳಿಸಿಕೊಳ್ಳಲು ವಿಫಲವಾಗಿದ್ದಾರೆ. ಹಾಲಿ ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ ಸಹ ಫುಟ್‌ಪಾತ್ ಪಾಲಿಕೆಯ ಆಸ್ತಿ ಅಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಫುಟ್‌ಪಾತ್ ಅತಿಕ್ರಮಣವಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪಾಟೀಲರನ್ನು ಸಂಪರ್ಕಿಸಿದರೆ, ತಾವು ವ್ಯಸ್ತರಾಗಿದ್ದೇವೆ ಎಂಬ ಜವಾಬು ನೀಡುತ್ತಾರೆ. ಜನ ಸಾಮಾನ್ಯರ ಹಿತ ಕಾಪಾಡುವ ಕೆಲಸವಾಗಿಯೇ ಮಾತನಾಡಲು ಆಯುಕ್ತ ಪಾಟೀಲರ ಬಳಿ ಸಮಯವಿಲ್ಲವೆಂದ ಮೇಲೆ ಅವರೆಂಥ ಘನ ಕಾರ್ಯದಲ್ಲಿ ಬ್ಯೂಸಿಯಾಗಿದ್ದಾರೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದೇ ವೇಳೆ ಪಾಟೀಲರು ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕುತ್ತಿರುವುದನ್ನು ಗಮನಿಸಿದರೆ ಸಂಶಯವೂ ವ್ಯಕ್ತವಾಗುತ್ತದೆ. ಪಾಟೀಲರ ಈ ವರ್ತನೆ, ಫುಟ್‌ಪಾತ್ ಮೇಲೆ ಅಂಗಡಿ ನಿರ್ಮಿಸಿಕೊಳ್ಳಲಿ ಎಂಬ ಒಪ್ಪಿಗೆಯೋ ಅಥವಾ ಹಫ್ತಾ ವಸೂಲಿ ಮಾಡುವವರಿಗೆ ನೀಡುತ್ತಿರುವ ಸವಲತ್ತೋ? ಎಂಬ ಪ್ರಶ್ನೆಗೆ ಕಾರಣವಾಗಿದ್ದು, ಇದಕ್ಕೆ ಅವರೇ ಉತ್ತರಿಸಬೇಕಿದೆ.

- ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement