ಸಚಿವ ಲಾಡ್ಗೆ ಅದ್ಧೂರಿ ಸ್ವಾಗತ
ಹುಬ್ಬಳ್ಳಿ: ರಾಜ್ಯದ ಮೂಲ ಸೌಕರ್ಯ ಮತ್ತು ವಾರ್ತಾ ಇಲಾಖೆಗಳ ರಾಜ್ಯ ಸಚಿವರೂ ಆಗಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಜಿಲ್ಲೆಗೆ ಶನಿವಾರ ಪ್ರಥಮ ಬಾರಿಗೆ ಆಗಮಿಸಿದಾಗ ನಗರದ ಗಬ್ಬೂರ ಕ್ರಾಸ್ನಲ್ಲಿ ಸ್ವಾಗತ ನೀಡಲಾಯಿತು.
ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಕಾಂಗ್ರೆಸ್ ಮುಖಂಡರು ಸಚಿವರಿಗೆ ಹೂಗುಚ್ಛ ನೀಡಿ, ಸ್ವಾಗತಿಸಿದರು.
ಪಟಾಕಿಗಳನ್ನು ಸಿಡಿಸಿ, ಸಿಹಿ ಹಂಚಿದ ಕಾಂಗ್ರೆಸ್ ಕಾರ್ಯಕರ್ತರು, ಸಚಿವ ಲಾಡ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು. ಬೈಕ್ ರ್ಯಾಲಿ ಜೊತೆಗೆ ನಗರಕ್ಕೆ ಕಾಲಿಸಿರಿಸಿದ ಸಚಿವ ಲಾಡ್, ಮೂರುಸಾವಿರ ಮಠ, ತುಳಜಾಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಡಾ.ಬಿ.ಆರ್. ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ಕಿತ್ತೂರ ರಾಣಿ ಚೆನ್ನಮ್ಮ, ಬಸವನದಲ್ಲಿನ ಬಸವೇಶ್ವರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು. ನಂತರ ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ನಿವಾಸಕ್ಕೆ ಭೇಟಿ ನೀಡಿದ ಸಚಿವರು, ಉಭಯ ಕುಶಲೋಪಹರಿ ನಡೆಸಿ, ಜಿಲ್ಲೆಯ ಅಭಿವೃದ್ಧಿ ಕುರಿತು ಚರ್ಚಿಸಿದರು. ಹಳೇ ಹುಬ್ಬಳ್ಳಿಯ ಫತೇಶಾಅಲಿ ದರ್ಗಾ ಹಾಗೂ ಸ್ವಾಮಿ ಸಿದ್ಧಾರೂಢರ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದ ನಂತರ ಸಚಿವ ಲಾಡ್, ಧಾರವಾಡಕ್ಕೆ ತೆರಳಿದರು.