ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

5ರಂದು ಚಿಪ್ಕೋ ಮಾದರಿ ಚಳವಳಿ

Vishwanath S
Updated On : 4 Jun 2013, 12:18 pm

ಕ.ಪ್ರ.ವಾರ್ತೆ ,  ಹುಬ್ಬಳ್ಳಿ ,  ಜೂ. 3
ಹುಬ್ಬಳ್ಳಿ-ಧಾರವಾಡ ಮಧ್ಯೆ ಚತುಷ್ಪಥ ರಸ್ತೆ ನಿರ್ಮಿಸುವ ಹೆಸರಲ್ಲಿ 1800 ಮರಗಳನ್ನು ಕಡಿಯಲಾಗಿದ್ದು, ಇದೀಗ ಅಷ್ಟಪಥ ನಿರ್ಮಿಸುವ ಹೆಸರಲ್ಲಿ ಮತ್ತೂ ಸಾವಿರಾರು ಮರಗಳನ್ನು ಕತ್ತರಿಸುವ ಹುನ್ನಾರ ನಡೆದಿದೆ. ಸರ್ಕಾರದ ಈ ನೀತಿಯನ್ನು ವಿರೋಧಿಸಿ ಚಿಪ್ಕೋ ಚಳವಳಿ ಮಾದರಿಯಲ್ಲಿ ಜೂನ್ 5ರಂದು ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೋತ್ಥಾನ ಸಮಿತಿಯ ಸಂಚಾಲಕ ಸಂತೋಷ್ ನರಗುಂದ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ 2010ರಲ್ಲಿ ಚತುಷ್ಪಥ ರಸ್ತೆ ನಿರ್ಮಿಸುವ ಉದ್ದೇಶದಿಂದ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ 2 ಸಾವಿರ ಮರಗಳನ್ನು ಕಡಿದಿತ್ತು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಮರ ಕಡಿದಿದ್ದಕ್ಕೆ ಪ್ರತಿಯಾಗಿ ಪುನಾ ರಸ್ತೆಯ ಇಕ್ಕೆಲಗಳಲ್ಲಿ 4 ಸಾವಿರ ಗಿಡ ನೆಡಲು 27 ಲಕ್ಷ ಅರಣ್ಯ ಇಲಾಖೆಗೆ ನೀಡಿತ್ತು. ಆದರೆ ಅರಣ್ಯ ಇಲಾಖೆ ಚತುಷ್ಪಥ ರಸ್ತೆಯ ಪಕ್ಕಕ್ಕೆ ಒಂದೇ ಒಂದು ಗಿಡವನ್ನೂ ನೆಟ್ಟಿಲ್ಲ. ಇದಕ್ಕೆ ಕಾರಣ ಕೇಳಿದರೆ ಕೆಆರ್‌ಡಿಸಿಎಲ್ ಗಿಡ ನೆಡುವ ಜಾಗ ಗುರುತು ಮಾಡಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕೆಆರ್‌ಡಿಸಿಎಲ್, ಅರಣ್ಯ ಇಲಾಖೆ ಮೇಲೆ ಆರೋಪ ಮಾಡುತ್ತಾ ಚೆಲ್ಲಾಟವಾಡುತ್ತಿದೆ. ಎರಡೂ ಇಲಾಖೆಯ ಧೋರಣೆಯನ್ನು ಖಂಡಿಸಿ ಹಾಗೂ ಈ ಕೂಡಲೇ 4 ಸಾವಿರ ಗಿಡಗಳನ್ನು ನೆಡಬೇಕೆಂದು ಒತ್ತಾಯಿಸಿ ಜೂ.5ರಂದು ಬೆಳಗ್ಗೆ 10ಕ್ಕೆ ರಾಯಾಪುರದಲ್ಲಿರುವ ಬಿಆರ್‌ಟಿಎಸ್ ಕಚೇರಿ ಎದುರು ಪ್ರತಿಭಟಿಸಲಾಗುವುದು ಎಂದರು.
ಅವೈಜ್ಞಾನಿಕ ಯೋಜನೆ: ಹುಬ್ಬಳ್ಳಿ-ಧಾರವಾಡ ಮಧ್ಯದ ಬಿಆರ್‌ಟಿಎಸ್ ಯೋಜನೆಯೇ ಅವೈಜ್ಞಾನಿಕವಾಗಿದೆ. ಅನ್ಯ ರಾಜ್ಯಗಳಲ್ಲಿ ಈ ಯೋಜನೆ ವಿಫಲವಾಗಿದೆ. ಪ್ರಸ್ತುತ ಬಿಆರ್‌ಟಿಎಸ್ ಯೋಜನೆ ಹುಬ್ಬಳ್ಳಿಯ ಹೊಸೂರಿನಿಂದ ಧಾರವಾಡದ ವಿದ್ಯಾಗಿರಿವರೆಗೆ ಮಾತ್ರ ಇದೆ. ಮುಂದಿನ ದಾರಿಯಲ್ಲಿ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ಹೇಳಿದರು.
ಅಧಿಕಾರಿಗಳೊಂದಿಗೆ ಸಭೆ: ಬಿಆರ್‌ಟಿಎಸ್ 700 ಕೋಟಿಯ ಯೋಜನೆಯಾಗಿದೆ. ಇದಕ್ಕಾಗಿ ಸರ್ಕಾರ, ವರ್ಲ್ಡ್ ಬ್ಯಾಂಕ್‌ನಿಂದ 500 ಕೋಟಿ ಸಾಲ ಕೇಳಿದೆ. ಯಾವುದೇ ಯೋಜನೆ ಪರಿಸರ ವಿರೋಧಿಯಾಗಿದ್ದಲ್ಲಿ ವರ್ಲ್ಡ್ ಬ್ಯಾಂಕ್ ಸಾಲ ನೀಡುವುದಿಲ್ಲ. ಆದರೆ ಸರ್ಕಾರ ವರ್ಲ್ಡ್ ಬ್ಯಾಂಕ್ ಅನ್ನೇ ಕತ್ತಲಲ್ಲಿಟ್ಟು ಸಾಲ ತರಹೊರಟಿದೆ. ಯೋಜನೆಯ ಅಸಲಿಯತ್ತ ತಿಳಿಸಿಕೊಡುವ ನಿಟ್ಟಿನಲ್ಲಿ ವರ್ಲ್ಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಜೂನ್ 15ರಂದು ಸಭೆ ನಡೆಸಲಾಗುತ್ತಿದೆ ಎಂದು ಸಂತೋಷ್ ತಿಳಿಸಿದರು.
ರೈಲು ಸೇವೆ ನೀಡಲಿ: ಹುಬ್ಬಳ್ಳಿ-ಧಾರವಾಡ ಮಧ್ಯೆ ಈಗಾಗಲೇ ರೈಲು ಓಡಾ ಡುತ್ತಿದ್ದು, ಹಳಿ ಹೆಚ್ಚಿಸುವ ಮೂಲಕ ಹುಬ್ಬಳ್ಳಿ-ಧಾರವಾಡ ಮಧ್ಯೆ ಲೋಕಲ್ ರೈಲು ಆರಂಭಿಸಬೇಕು. ಇದರಿಂದ ಪರಿಸರಕ್ಕೆ ಹಾನಿಯಾಗದು. ನಮ್ಮ ಸಂಘಟನೆ ಅಭಿವೃದ್ಧಿ ವಿರೋಧಿಯಲ್ಲ, ಆದರೆ ಅವೈಜ್ಞಾನಿಕ ಅಭಿವೃದ್ಧಿ ಯೋಜನೆಯಿಂದ ಪರಿಸರ ಹಾನಿ ಮಾಡುವುದನ್ನು ಸಂಘಟನೆ ಸಹಿಸುವುದಿಲ್ಲ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement