ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅವ್ಯವಸ್ಥೆ ಆಗರವಾದ ಧಾರವಾಡ ಅರೆ ಗ್ರಾಮೀಣ ಬಸ್ ನಿಲ್ದಾಣ

Mainashree
Updated On : 4 Jun 2013, 11:14 am

ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 3
ಸಾಂಸ್ಕೃತಿಕ ನಗರಿ, ಸಾಹಿತಿಗಳ ತವರೆಂದು ಗುರುತಿಸಿಕೊಂಡ ಧಾರಾನಗರಿಯ ಅರೆ ಗ್ರಾಮೀಣ ಬಸ್ ನಿಲ್ದಾಣ ಈಗ ಅವ್ಯವಸ್ಥೆಯ ಆಗರ !
ಈ ಬಸ್ ನಿಲ್ದಾಣದಲ್ಲಿ ಸೌಲಭ್ಯಗಳಿಗಿಂತ ಸಿಗದೇ ಇರುವ ಸೌಕರ್ಯಗಳ ಸಂಖ್ಯೆಯೇ ಹೆಚ್ಚು. ಹೌದು... ಸಾಂಸ್ಕೃತಿಕ ನಗರಿಯ ಅರೆ ಗ್ರಾಮೀಣ ಬಸ್ ನಿಲ್ದಾಣದಲ್ಲಿ ಹಲವು ತಿಂಗಳುಗಳಿಂದ ತಲೆದೋರಿರುವ ಅವ್ಯವಸ್ಥೆಗಳಿಂದಾಗಿ ಪ್ರಯಾಣಿಕರು ಹಲವಾರು ತೊಂದರೆ ಎದುರಿಸುವುದು ಅನಿವಾರ್ಯವಾಗಿದೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಅವ್ಯವಸ್ಥೆ ಸರಿಪಡಿಸುವ ಬದಲು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.
ನಿಲ್ದಾಣದಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದ್ದು, ದಿನದಿಂದ ದಿನಕ್ಕೆ ಸಮಸ್ಯೆಗಳು ಮಾತ್ರ ದ್ವಿಗುಣಗೊಳ್ಳುತ್ತಲೆ ಸಾಗಿವೆ. ಇದರಿಂದಾಗಿ ಪ್ರಯಾಣಿಕರಿಗೆ ತೀವ್ರ ಕಿರಿಕಿರಿ ಉಂಟಾಗುತ್ತಿದೆ. ಈ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ರೋಗರುಜಿನ ಅಂಟಿಸಿಕೊಂಡು ಮನೆಗೆ ಹೋಗಬೇಕಾದ ಆತಂಕದ ಸ್ಥಿತಿ ಎದುರಾಗಿದೆ.
ಇನ್ನೂ ಪ್ರಯಾಣಿಕರು ಬಸ್ ನಿಲ್ದಾಣದ ಒಳಗೆ ಪ್ರವೇಶ ಮಾಡಿದರೆ ಅವರನ್ನು ಸ್ವಾಗತಿಸುವುದು ಮುರಿದ ಹೋಗಿರುವ ಆಸನಗಳು. ಭಾರಿ ಗುಣಮಟ್ಟದ ಅಲ್ಲದೇ ಇದ್ದರೂ ಸಾಮಾನ್ಯವಾದ ಆಸನಗಳ ವ್ಯವಸ್ಥೆಯೂ ಇಲ್ಲಿ ಇಲ್ಲ. ಹೀಗಾಗಿ ಪ್ರಯಾಣಿಕರು ನಿಂತುಕೊಂಡೇ ಬಸ್‌ಗಾಗಿ ಕಾಯುವ ದುಸ್ಥಿತಿ. ನಿಲ್ದಾಣದಲ್ಲಿ ಬಸ್ ನಿಲ್ಲಿಸಲು ಸರಿಯಾದ ಸ್ಥಳಾವಕಾಶವಿಲ್ಲ. ಇದೇ ಕಾರಣದಿಂದಾಗಿ ನಿಲ್ದಾಣದೊಳಗೆ ಬರುವ ಬಸ್‌ಗಳು ಮರಳಿ ಹೊರಹೋಗಬೇಕಾದರೆ ಹರಸಾಹಸ ಪಡಬೇಕಾದ ಸ್ಥಿತಿ ಉದ್ಬವಿಸಿದೆ.
ಬಸ್ ನಿಲ್ದಾಣ ಒಂದು ರೀತಿ ಶೌಚಾಲಯದ ಒಂದು ಭಾಗವಾಗಿ ಪರಿಣಮಿಸಿದ್ದು, ಒಳ ಪ್ರವೇಶಿಸುವ ಪ್ರಯಾಣಿಕರು ಮೂಗು ಮುಚ್ಚಿಕೊಳ್ಳದೇ ವಿಧಿ ಇಲ್ಲ. ಬಹುತೇಕ ಪ್ರಯಾಣಿಕರು ಸೇರಿದಂತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರು ಹಾಗೂ ನಿರ್ವಾಹಕರು ಶೌಚಾಲಯದ ಬಳಕೆ ಮಾಡದೇ, ಬಸ್ ನಿಲ್ದಾಣದ ಬಳಿ ಇರುವ ಪೊಲೀಸ್ ಕ್ಲಬ್‌ನ ಎದುರಿಗೆ ಮೂತ್ರವಿಸರ್ಜನೆ ಮಾಡುತ್ತಾರೆ. ಈ ಬಗ್ಗೆ ಸಾರಿಗೆ ಸಂಸ್ಥೆಯ ಯಾವೊಬ್ಬ ಅಧಿಕಾರಿಯೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗಿಲ್ಲ.
ವ್ಯಾಪಾರಸ್ಥರ ಗೋಳು: ಜನನಿಬಿಡ ಪ್ರದೇಶವಾದ ಬಸ್ ನಿಲ್ದಾಣದಲ್ಲಿ ಮಳಿಗೆಗಳಿದ್ದು, ಈ ಮಳಿಗೆಗಳಲ್ಲಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳ ಗೋಳು ಕೇಳುವರಿಲ್ಲ. ದುಬಾರಿ ಬೆಲೆ ತೆತ್ತು ಟೆಂಡರ್ ಮೂಲಕ ಮಳಿಗೆ ಖರೀದಿಸಿದ ಸಾಕಷ್ಟು ವ್ಯಾಪರಸ್ಥರು ಅಲ್ಲಿ ನಿತ್ಯ ವ್ಯಾಪಾರ ನಡೆಸುವುದು ಕಷ್ಟಕರವಾಗಿದೆ. ಬಸ್ ನಿಲ್ದಾಣದಲ್ಲಿಯೇ ಅನೇಕರು ಮೂತ್ರವಿಸರ್ಜನೆ ಮಾಡುವುದರಿಂದ ಸದಾ ಗಬ್ಬುನಾತ ಬೀರುತ್ತಿರುತ್ತದೆ. ನಿತ್ಯ ವ್ಯಾಪಾರ ವಹಿವಾಟು ನಡೆಸುವ ವ್ಯಾಪಾರಸ್ಥರು ಈ ದುರ್ನಾತದಿಂದ ರೋಸಿ ಹೋಗಿದ್ದಾರೆ. ಕೆಲಬಾರಿಯಂತೂ ದುರ್ವಾಸನೆ ತಾಳದೇ, ಚೆನ್ನಾಗಿ ವ್ಯಾಪಾರ ನಡೆಯುವ ಸಂದರ್ಭದಲ್ಲಿಯೇ ಅಂಗಡಿ ಬಾಗಿಲಿಗೆ ಬೀಗ ಜಡಿದು ಹೋದ ಘಟನೆಗಳು ಹಲವಾರು ಬಾರಿ ಸಂಭವಿಸಿವೆ. ಈ ಕುರಿತಂತೆ ಅನೇಕ ವ್ಯಾಪಾರಸ್ಥರು ಹಿರಿಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಏನು ಪ್ರಯೋಜನವಾಗಿಲ್ಲ.
ಹದಗೆಟ್ಟ ರಸ್ತೆ: ಈ ಮೊದಲು ಬಸ್ ನಿಲ್ದಾಣದ ಒಳ ರಸ್ತೆ ಹದಗೆಟ್ಟು, ತಗ್ಗು ಏರ್ಪಟ್ಟಿದ್ದವು. ಬಸ್ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಉಯ್ಯಾಲೆ ಆಡಿಸುತ್ತಿತ್ತು. ನಂತರ ನಿಲ್ದಾಣದ ಒಳಭಾಗದಲ್ಲಿ ಡಾಂಬರೀಕರಣ ಮಾಡಲಾಗಿತ್ತಾದರೂ ಕೆಲ ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಡಾಂಬರ್ ಕಿತ್ತಿದೆ. ನಿಲ್ದಾಣದ ಬಹುತೇಕ ಕಡೆ ಕಿತ್ತುಹೋಗಿರುವ ಡಾಂಬರ್, ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿಯಂತಿದೆ. ಮಳೆಯಿಂದಾಗಿ ರಸ್ತೆ ಮತ್ತಷ್ಟು ಅಧೋಗತಿಗೆ ತಲುಪಿದ್ದು, ಆದಷ್ಟು ಬೇಗ ರಸ್ತೆ ಸರಿ ಪಡಿಸಬೇಕೆಂಬುವುದು ಪ್ರಯಾಣಿಕರ ಒತ್ತಾಯ.
ಕುಡಿಯುವ ನೀರಿನ ಸಮಸ್ಯೆ: ಪ್ರಯಾಣ ಮಾಡಿ ಸುಸ್ತಾಗಿ ಬಂದ ಪ್ರಯಾಣಿಕರಿಗೆ ಇಲ್ಲಿ ಕುಡಿಯುವ ನೀರಿನ ಸೌಕರ್ಯ ಇಲ್ಲ. ಹಾಗಾಗಿ ಇಲ್ಲಿಗೆ ಬರುವರು ನೀರಿನ ಬಾಟಲ್ ಇಟ್ಟುಕೊಂಡ ಬರಬೇಕು. ಇಲ್ಲವಾದಲ್ಲಿ ಕುಡಿಯುವ ನೀರಿಗಾಗಿ ಪರದಾಡಬೇಕಾಗುತ್ತದೆ. ಸಾಮಾನ್ಯವಾಗಿ ಪ್ರಯಾಣಿಕರು ಕುಡಿಯುವ ನೀರಿಗಾಗಿ ನಿಲ್ದಾಣದ ಬಳಿ ಇರುವ ಹೊಟೇಲ್‌ಗೆ ತೆರಳಬೇಕಿದೆ. ಹೋಟೆಲ್‌ಗೆ ನೀರಷ್ಟೆ ಕುಡಿಯಲು ಬಂದ ಅನೇಕರನ್ನು ಮಾಲೀಕರು ಕೆಲವೊಮ್ಮೆ ಹೊರ ನೂಕಿದ ಘಟನೆಗಳು ಈ ಬಸ್ ನಿಲ್ದಾಣದ ಸುತ್ತಮುತ್ತಲಿನ ಹೊಟೇಲ್‌ಗಳಲ್ಲಿ ನಡೆದಿವೆ.
ಒಟ್ಟಾರೆ, ಧಾರವಾಡ ಅರೆ ಗ್ರಾಮೀಣ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದ್ದು, ಪ್ರಸ್ತುತ ರಾಜ್ಯದ ಜನತೆಯ ನಿದ್ದೆಗೆಡಿಸಿದ ಡೆಂಘೀಯಂತಹ ಮಾರಕ ಕಾಯಿಲೆಗೆ ಆಹ್ವಾನ ನೀಡಲು ಸಜ್ಜಾಗಿ ಕುಳಿತಂತೆ ಕಾಣುತ್ತಿದೆ. ಬಸ್ ನಿಲ್ದಾಣ ಡೆಂಘೀ ಹರಡಿಸುವ ತಾಣವಾಗುವ ಮುನ್ನವೇ ಬಸ್ ನಿಲ್ದಾಣವನ್ನು ಸೂತೂತ್ರವಾಗಿಡಲು ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ರಾಜ್ಯ ಸಾರಿಗೆ ಸಂಸ್ಥೆ ಮುಂದಾಗಬೇಕೆಂಬುವುದು ಪ್ರಯಾಣಿಕರ ಆಗ್ರಹ.
-ಕಲ್ಮೇಶ ಪಟ್ಟಣದವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement