4 ಸಾವಿರ ಸಸಿ ನೆಡಲು ಆಗ್ರಹ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 5
ಹುಬ್ಬಳ್ಳಿ-ಧಾರವಾಡ ಮಧ್ಯೆ ಚತುಷ್ಪಥ ನಿರ್ಮಿಸುವ ಹೆಸರಲ್ಲಿ ಸಾವಿರಾರು ಮರಗಳನ್ನು ಕಡಿಯಲಾಗಿದ್ದು, ಇದಕ್ಕೆ ಪರ್ಯಾಯವಾಗಿ 4 ಸಾವಿರ ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದು ಒತ್ತಾಯಿಸಿ ರಾಷ್ಟ್ರೋತ್ಥಾನ ಸಮಿತಿ ನೇತೃತ್ವದಲ್ಲಿ ಪರಿಸರ ಪ್ರೇಮಿಗಳು ರಾಯಾಪುರದ ಬಿಆರ್ಟಿಎಸ್ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಸರ್ಕಾರ 2010ರಲ್ಲಿ ಚತುಷ್ಪಥ ನಿರ್ಮಿಸುವ ಉದ್ದೇಶದಿಂದ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ 2 ಸಾವಿರ ಮರಗಳನ್ನು ಕಡಿದು ಹಾಕಿತು. ಕೆಆರ್ಡಿಸಿಎಲ್ ಮರ ಕಡಿದಿದ್ದಕ್ಕೆ ಪ್ರತಿಯಾಗಿ ಪುನಃ ರಸ್ತೆಯ ಇಕ್ಕೆಲಗಳಲ್ಲಿ 4 ಸಾವಿರ ಸಸಿ ನೆಡಲು ರು. 27 ಲಕ್ಷ ಅರಣ್ಯ ಇಲಾಖೆಗೆ ಭರಣ ಮಾಡಿತು. ಆದರೆ ಅರಣ್ಯ ಇಲಾಖೆ ಚತುಷ್ಪಥ ಪಕ್ಕಕ್ಕೆ ಒಂದೇ ಒಂದು ಸಸಿ ನೆಟ್ಟಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಕೆಆರ್ಡಿಸಿಎಲ್ ಸಸಿ ನೆಡುವ ಜಾಗ ಗುರುತು ಮಾಡಿಲ್ಲವೆಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಕೆಆರ್ಡಿಸಿಎಲ್, ಅರಣ್ಯ ಇಲಾಖೆಯ ಮೇಲೆ ಆರೋಪ ಮಾಡುತ್ತಾ ಚೆಲ್ಲಾಟವಾಡುತ್ತಿದೆ. ಈ ಕೂಡಲೇ 4 ಸಾವಿರ ಸಸಿಗಳನ್ನು ನೆಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿ ಮರ 20 ಜನರಿಗೆ ಆಮ್ಲಜನಕ ನೀಡುತ್ತದೆ. ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿದ್ದ 2 ಸಾವಿರ ಮರಗಳು 20 ಸಾವಿರ ಜನರಿಗೆ ಆಮ್ಲಜನಕ ಒದಗಿಸುತ್ತಿದ್ದವು. ಆದರೆ, ಮರ ಕಡಿದ ಪರಿಣಾಮ 20 ಸಾವಿರ ಜನರಿಗೆ ಆಮ್ಲಜನಕ ಸಿಗದಾಗಿದೆ. ಇದೀಗ ಮತ್ತೆ 2 ಸಾವಿರ ಗಿಡ ಕಡಿಯಲು ಕೆಆರ್ಡಿಸಿಎಲ್ ಮುಂದಾಗಿದೆ. ಇದರಿಂದ 40 ಸಾವಿರ ಜನರು ಆಮ್ಲಜನಕದಿಂದ ವಂಚಿತರಾಗಲಿದ್ದಾರೆಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.
ಹುಬ್ಬಳ್ಳಿ-ಧಾರವಾಡ ಮಧ್ಯೆ ಈಗಾಗಲೇ ರೈಲು ಓಡಾಡುತ್ತಿದ್ದು, ಹಳಿ ಹೆಚ್ಚಿಸುವ ಮೂಲಕ ಹುಬ್ಬಳ್ಳಿ-ಧಾರವಾಡ ಮಧ್ಯೆ ಲೋಕಲ್ ರೈಲು ಆರಂಭಿಸಬೇಕು. ಇದರಿಂದ ಪರಿಸರಕ್ಕೆ ಹಾನಿಯಾಗದು, ಸಂಚಾರಕ್ಕೂ ತೊಂದರೆಯಾಗದು ಎಂದು ಆಗ್ರಹಿಸಿದರು.
ಸರ್ಕಾರ ಈ ಕೂಡಲೇ ಅಷ್ಟಪಥ ರಸ್ತೆ ನಿರ್ಮಿಸುವ ಯೋಜನೆ ಕೈಬಿಡಬೇಕು ಹಾಗೂ ನಾಶ ಮಾಡಿರುವ 2 ಸಾವಿರ ಮರಗಳಿಗೆ ಬದಲಾಗಿದೆ 4 ಸಾವಿರ ಗಿಡ ಬೆಳೆಸಬೇಕು. ಈ ವಿಷಯವಾಗಿ ಅಗತ್ಯಬಿದ್ದರೆ ಕಾನೂನು ಹೋರಾಟ ನಡೆಸಲೂ ಸಿದ್ಧವೆಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ರಾಷ್ಟ್ರೋತ್ಥಾನ ಸಮಿತಿ ಅಧ್ಯಕ್ಷ ಸಂತೋಷ ನರಗುಂದ, ಶಾಮ್ ಕಾಮತ್, ಪರೀದ ಹಬೀಬ, ಆರ್.ಎಸ್. ಪಾಟೀಲ, ಸಂದೀಪ ಮೆಲವಂಕಿ, ಎಂ.ಡಿ. ಪಾಟೀಲ, ಅರವಿಂದ ಮೇಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.