ಅನುಮಾನಕ್ಕೆಡೆ ಮಾಡಿದ ತಾಪಂ ಸಭೆ
ಕುಂದಗೋಳ: ತಾಪಂ ಸಭಾ ಭವನದಲ್ಲಿ ಬುಧವಾರ ನಡೆದ ಕೆಡಿಪಿ ಸಭೆ ನಿಜಕ್ಕೂ ಇದು ಸಭೆನಾ ಎಂಬ ಸಂಶಯಕ್ಕೆ ಎಡೆ ಮಾಡಿಕೊಟ್ಟಿತು. ಸಭೆ ಕೇವಲ 45 ನಿಮಿಷದಲ್ಲಿ ಪೂರ್ಣಗೊಂಡಿದ್ದು ಬಹುತೇಕ ಕುರ್ಚಿಗಳು ಖಾಲಿ ಖಾಲಿ ಇದ್ದವು.
ತಾಲೂಕಿನಲ್ಲಿ ವಿವಿಧ ಇಲಾಖೆ ಪ್ರಗತಿಯ ಪರಿಶೀಲನಾ ಸಭೆ ಇದಾಗಿದ್ದು, ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ಪ್ರಗತಿ ವರದಿ ಒಪ್ಪಿಸಬೇಕಾಗಿತ್ತು. ಆದರೆ, ಅಧಿಕಾರಿಗಳು ಕೇವಲ ಎರಡೇ ಮಾತುಗಳಲ್ಲಿ ಮುಗಿಸಿದ್ದು, ಅನೇಕ ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಈಗ ಮುಂಗರು ಹಂಗಾಮಾಗಿರುವುದರಿಂದ ರೈತರಿಗೆ ಬೀಜ, ಗೊಬ್ಬರ ಕುರಿತು ಚರ್ಚಿಸಬೇಕಾಗಿತ್ತು. ಅಲ್ಲದೇ ತಾಲೂಕಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದೆ ಇನ್ನೂ ಕುಡಿಯುವ ನೀರಿನ ಸಮಸ್ಯೆ ಇದೆ.
ತಾಲೂಕಿನಲ್ಲಿ ಹಲವಾರು ಸಮಸ್ಯೆಗಳಿದ್ದರೂ ತಾಪಂ ಅಧ್ಯಕ್ಷೆ ಅಂಬವ್ವ ಪಾಟೀಲ ತುಟಿ ಪಿಟಿಕ್ ಅನ್ನದೇ ಸುಮ್ಮನೇ ಕುಳಿತಿದ್ದರು. ತಾಪಂ ಉಪಾಧ್ಯಕ್ಷ ಚಂದ್ರಶೇಖರ ಬಿಸಿರೊಟ್ಟಿ ಸಭೆಗೆ ಗೈರಾಗಿದ್ದರು. ಮೇ 20ರಂದು ನೂತನ ಶಾಸಕ ಸಿ.ಎಸ್. ಶಿವಳ್ಳಿ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡು ತಾಲೂಕಿನಲ್ಲಿರುವ ಅನೇಕ ಇಲಾಖೆಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. 15 ದಿನಗಳಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯ ವರದಿ ನೀಡುವಂತೆ ಆದೇಶಿಸಿದ್ದರು. ಅದರಂತೆ ಮೇ 24ರಂದು ಸಾಮಾನ್ಯ ಸಭೆಯಲ್ಲೂ ವಿವಿಧ ಇಲಾಖೆಯ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದಿದ್ದವು. ಬುಧವಾರದ ಸಭೆಯಲ್ಲಿ ತಾಪಂ ಅಧ್ಯಕ್ಷರು ಯಾವುದೇ ಇಲಾಖೆಯನ್ನು ಪ್ರಶ್ನಿಸದೆ ಸುಮ್ಮನೆ ಕುಳಿತಿದ್ದು, ಅನುಮಾನಕ್ಕೆ ಎಡೆ ಮಾಡಿಕೊಟ್ಟಿತು.