ನಿಖರ ಮಾಹಿತಿ ಒದಗಿಸಿ:ಕೃಷ್ಣ ಪ್ರಸಾದ
ಹುಬ್ಬಳ್ಳಿ: ಹತ್ತಿ ಉತ್ಪಾದನೆ ಕುರಿತು ನಿಖರ ಮಾಹಿತಿ ಒದಗಿಸುವುದರಿಂದ ಹತ್ತಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಅನುಕೂಲವಾಗುತ್ತದೆ ಎಂದು ಕೇಂದ್ರ ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣ ಪ್ರಸಾದ ಹೇಳಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಕರ್ನಾಟಕ ಕಾಟನ್ ಅಸೋಸಿಯೇಶನ್ ಸಹಯೋಗದೊಂದಿಗೆ ಕೇಂದ್ರ ಜವಳಿ ಮಂತ್ರಾಲಯ ಆಯೋಜಿಸಿದ್ದ ಹತ್ತಿ ಉತ್ಪಾದನೆ, ಕಾಟನ್ ಜಿನ್ನಿಂಗ್ ಘಟಕಗಳು, ಕಾಟನ್ ಪ್ರೆಸ್ಸಿಂಗ್ ಘಟಕಗಳಿಂದ ಅಂಕಿ ಅಂಶ ಸಂಗ್ರಹಿಸಿ ಮಾಹಿತಿ ಒದಗಿಸುವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಪಾಸ್ ಉತ್ಪಾದನೆಗಳಾದ ಉದ್ದ ಎಳೆಯ ಹತ್ತಿ, ಶಾರ್ಟ್ ಸ್ಟೆಪಲ್, ಮೀಡಿಯಂ ಸ್ಟೆಪಲ್ ಹತ್ತಿಯ ಆಮದು-ರಫ್ತುಗಳ ಬಗ್ಗೆ ವರ್ತಕರು ಮತ್ತು ಜಿನ್ನಿಂಗ್ ಉದ್ದಿಮೆದಾರರಿಂದ ಪ್ರಾರಂಭಿಕ ಶಿಲ್ಕು, ಸಂಸ್ಕರಣೆ ಮತ್ತು ಮುಕ್ತಾಯ ಶಿಲ್ಕುಗಳುಳ್ಳ ಮಾಹಿತಿಗಳೊಂದಿಗೆ ಮಾಸಿಕ ದಾಖಲೆಗಳನ್ನು ನಿಗದಿಪಡಿಸಿದ ಅರ್ಜಿ ತುಂಬಿ ಪ್ರಾದೇಶಿಕ ಆಯುಕ್ತರು, ಜವಳಿ ಇಲಾಖೆ, ಬೆಂಗಳೂರು ಇವರಿಗೆ ಸಲ್ಲಿಸಬೇಕು ಎಂದು ತಿಳಿಸಿದರು.
ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎನ್.ಪಿ. ಜವಳಿ ಮಾತನಾಡಿ, ಹತ್ತಿ, ಜಿನ್ನಿಂಗ್ ವ್ಯಾಪಾರಸ್ಥರು ಅಂಕಿ ಅಂಶಗಳ ಮಾಹಿತಿ ಒದಗಿಸುವುದರಿಂದ ದೇಶದ ಹತ್ತಿ ಉತ್ಪಾದನೆ ಬಗ್ಗೆ ನಿಖರ ಅಂಶ ತಿಳಿಯಲು ಸಹಕಾರಿ ಎಂದರು.
ವಸಂತ ಲದ್ವಾ, ಅಂದಾನಪ್ಪ ಸಜ್ಜನರ, ಮಹೇಂದ್ರ ಲದ್ದಡ, ವಿಶ್ವನಾಥ ಗಿಣಿಮಾವ, ಸಿ.ಎನ್. ಕರಿಕಟ್ಟಿ, ಪೂನಮಚಂದ ಓಸ್ತವಾಲ, ಸುಜೀತ್ ಜಂಬಗಿ ಮತ್ತಿತರರಿದ್ದರು.