ಭೂ ಪರಿಹಾರ ವಿಳಂಬ ಖಂಡಿಸಿ ರೈತರ ಪ್ರತಿಭಟನೆ
ಧಾರವಾಡ: ನರಗುಂದ ಹಾಗೂ ರೋಣ ತಾಲೂಕಿನ ಮಲಪ್ರಭಾ ಕಾಲುವೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಂಡಿದ್ದು, ಪ್ರತಿಯಾಗಿ ರೈತರಿಗೆ ಬರಬೇಕಾದ ಪರಿಹಾರ ಧನಕ್ಕೆ ಕಡಿವಾಣ ಹಾಕುತ್ತಿರುವ ಭೂಸ್ವಾಧೀನ ಅಧಿಕಾರಿಗಳನ್ನು ವರ್ಗಾಯಿಸುವಂತೆ ಆ ಭಾಗದ ರೈತರು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಾಲುವೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಂಡಿದ್ದು, ಅದಕ್ಕೆ ತಕ್ಕಂತೆ ಪರಿಹಾರ ಧನ ಬಂದಿಲ್ಲ. ಹೀಗಾಗಿ ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ಈ ಪ್ರಕರಣದಲ್ಲೂ ರೋಣ ಹಾಗೂ ಗದಗ ಸಿವಿಲ್ ನ್ಯಾಯಾಧೀಶರು ಈ ಕುರಿತ ಕಾಗದ ಪತ್ರಗಳನ್ನು ಕೋರ್ಟ್ಗೆ ಕಳುಹಿಸಿ ಕೊಡಲು 3ನೇ ಮಲಪ್ರಭಾ ಯೋಜನೆಯ ಧಾರವಾಡ ಭೂಸ್ವಾಧೀನ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಈ ಆದೇಶ ಪ್ರತಿಯನ್ನು ಪಡೆದು ಭೂಸ್ವಾಧೀನ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಎರಡು ವರ್ಷಗಳಾದರೂ ಸಹ ಈವರೆಗೆ ಯಾವುದೇ ಕಾಗದ ಪತ್ರಗಳನ್ನು ಸಲ್ಲಿಸಿಲ್ಲ ಎಂದು ದೂರಿದರು. ರಿಕಾರ್ಡ್ ರೂಂನಲ್ಲಿರುವ ಅಧಿಕಾರಿಗಳು ರಿಕಾರ್ಡ್ ನೀಡಲು ಹಾಗೂ ಕೆಲ ಅಧಿಕಾರಿಗಳು ಕಾಗದ ಪತ್ರಗಳನ್ನು ಕೋರ್ಟ್ಗೆ ಕಳುಹಿಸಿಕೊಡಲು ಲಂಚ ಕೇಳುತ್ತಿದ್ದಾರೆ. ಹೀಗಾಗಿ ಲಂಚ ನೀಡಲಾಗದೇ ಇರುವುದರಿಂದ ಈ ಕಾರ್ಯಗಳು ಹಾಗೇ ಉಳಿದುಕೊಂಡಿವೆ. ಈ ಬಗ್ಗೆ ಭೂಸ್ವಾಧೀನ ಅಧಿಕಾರಿಗಳಿಗೂ ಗಮನ ಸೆಳೆದು ಈ ರೀತಿ ಹಣ ಕೇಳುತ್ತಿದ್ದಾರೆ ಎಂದು ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ರೈತರ ಪರಿಹಾರ ಹಣ ನೀಡಿಕೆಯಲ್ಲಿ ವಿಳಂಬಕ್ಕೆ ಕಾರಣವಾಗಿ ಭೂಸ್ವಾಧೀನ ಕಚೇರಿಯಲ್ಲಿರುವ ಎಂ.ಎಲ್. ಬೊಂಬಲೆ ಅವರನ್ನು ಈ ಕೂಡಲೇ ವರ್ಗಾವಣೆಗೊಳಿಸಿ, ಆ ಸ್ಥಾನಕ್ಕೆ ಸೂಕ್ತ ಉತ್ತಮ ಅಧಿಕಾರಿಯನ್ನು ನೇಮಕಗೊಳಿಸಬೇಕು.
ಒಂದು ವೇಳೆ ಇದು ಆಗದೇ ಹೋದರೆ ಮುಂದಿನ ದಿನಗಳಲ್ಲಿ ಭೂಸ್ವಾಧೀನ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಮನವಿಯಲ್ಲಿ ಎಚ್ಚರಿಸಿದ್ದಾರೆ.