ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಮೀಸಲಾತಿಗೆ ಪುರಪಿತೃಗಳ ಕಸರತ್ತು

Mainashree
Updated On : 6 Jun 2013, 10:49 am

ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 5

ಸ್ಥಳೀಯ ಸಂಸ್ಥೆಗಳ ಮೇಯರ್-ಉಪ ಮೇಯರ್ ಹಾಗೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಸಮಯದಲ್ಲಿ ಮೀಸಲಾತಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ವಿಧಾನಸಭೆ ಅಧಿವೇಶನ ಜೂ. 7ಕ್ಕೆ ಪೂರ್ಣಗೊಳ್ಳಲಿರುವುದರಿಂದ ನಂತರದ ಒಂದೆರಡು ದಿನಗಳಲ್ಲಿ ಮೀಸಲಾತಿ ಪ್ರಕಟಗೊಳ್ಳುವುದು ಬಹುತೇಕ ಖಚಿತವಾಗಿದೆ. ಮೀಸಲಾತಿ ಪ್ರಕಟಣೆಗೆ ಈಗಾಗಲೇ ನಗರಾಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆ ಹಿರಿಯ ಅಧಿಕಾರಿಗಳು ಪೂರ್ವ ಸಿದ್ಧತೆ ಮಾಡಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಸಿರು ನಿಶಾನೆ ತೋರಿಸುವುದೊಂದೇ ಬಾಕಿ ಇದೆ ಎಂದು ಮೂಲಗಳು ತಿಳಿಸಿವೆ.
201 ಸಂಸ್ಥೆಗಳಿಗೆ: ಕಳೆದ ಮಾರ್ಚ್ 7ರಂದು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿದ್ದರೂ, ಮೇಯರ್-ಉಪಮೇಯರ್ ಹಾಗೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಇದುವರೆಗೂ ಮೀಸಲಾತಿ ಪ್ರಕಟಗೊಂಡಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಗೊಂಡಿದ್ದರಿಂದ ಮೀಸಲಾತಿ ಪ್ರಕಟಣೆಗೆ ತಡವಾಯಿತು. ದಾವಣಗೆರೆ, ಬಳ್ಳಾರಿ, ಗುಲ್ಬರ್ಗಾ, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿದಂತೆ ಒಟ್ಟು 7 ಮಹಾನಗರ ಪಾಲಿಕೆಗಳ ಮೇಯರ್-ಉಪಮೇಯರ್, 93 ಪಟ್ಟಣ ಪಂಚಾಯಿತಿ, 65 ಪುರಸಭೆ, 43 ನಗರಸಭೆ ಸೇರಿದಂತೆ ಒಟ್ಟು 201 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಗೊಳ್ಳುವುದು ಬಾಕಿ ಇದೆ.  
ಬಿರುಸುಗೊಂಡ ಚಟುವಟಿಕೆ: ಜೂ. 7ಕ್ಕೆ ಅಧಿವೇಶನ ಮುಕ್ತಾಯಗೊಳ್ಳಲಿರುವುದರಿಂದ ಮುಂದಿನ ಒಂದೆರಡು ದಿನಗಳಲ್ಲಿ ಮೀಸಲಾತಿ ಪ್ರಕಟಗೊಳ್ಳುವ ಸಾಧ್ಯತೆ ಹೆಚ್ಚಾಗಿರುವುದರಿಂದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಯ್ಕೆಗೊಂಡ ಪುರಪಿತೃರ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ.
ಇದೇ ಕಾರಣಕ್ಕಾಗಿ ಆಡಳಿತ ಕಾಂಗ್ರೆಸ್ ಪಕ್ಷದ ಸ್ಥಳೀಯ ಸಂಸ್ಥೆಗಳ ಸದಸ್ಯರು ತಮಗೆ ಅನುಕೂಲವಾಗುವ ಮೀಸಲಾತಿ ನಿಗದಿಪಡಿಸಲು ತೆರೆಮರೆಯ ಪ್ರಯತ್ನಕ್ಕೆ ಮತ್ತಷ್ಟು ಚುರುಕು ನೀಡಿದ್ದಾರೆ. ವಿಧಾನಸಭೆ ಚುನಾವಣೆ ಮುಂಚೆ ಸ್ಥಳೀಯ ಸಂಸ್ಥೆಗಳ ಆಡಳಿತ ಚುಕ್ಕಾಣಿ ಹಿಡಿಯಲು ಇದ್ದಿದ್ದ ಪರಿಸ್ಥಿತಿ ಚುನಾವಣೆ ನಂತರ ಬದಲಾವಣೆಗೊಂಡಿದೆ. ಹೀಗಾಗಿ ಹೆಚ್ಚಿನ ಸ್ಥಳೀಯ ಸಂಸ್ಥೆಗಳಲ್ಲಿನ ಅಧಿಕಾರದ ಚುಕ್ಕಾಣಿ ಹಿಡಿಯಲು ಎಲ್ಲ ರಾಜಕೀಯ ಪಕ್ಷಗಳಲ್ಲಿ ತೀವ್ರ ಪೈಪೋಟೆ ನಡೆದಿದೆ.
ಇದೊಂದು ಉದಾಹರಣೆ:  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 33 ಸ್ಥಾನ ಗಳಿಸುವ ಮೂಲಕ ಸ್ಪಷ್ಟ ಬಹುಮತಕ್ಕೆ ಒಂದು ಸ್ಥಾನ ಕಡಿಮೆ ಪಡೆದಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಕ್ರಮವಾಗಿ 22 ಮತ್ತು 9 ಸ್ಥಾನಗಳಲ್ಲಿ ಗೆಲವು ಪಡೆದಿವೆ. ಒಂದು ಸ್ಥಾನದಲ್ಲಿ ಕೆಜೆಪಿ ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಗೆ ಮುನ್ನ ಬಿಜೆಪಿಗೆ ನಾಲ್ವರು ಶಾಸಕರು, ಒಬ್ಬ ಸಂಸದ ಸೇರಿದಂತೆ 38 ಸ್ಥಾನಗಳ ಬಲವಿತ್ತು. ಆದರೆ ವಿಧಾನಸಭೆ ಚುನಾವಣೆ ನಂತರ ಬಿಜೆಪಿ ಬಲ ತಾನು ಗೆದ್ದಿರುವ 33 ಸ್ಥಾನಗಳ ಜತೆಗೆ ಇಬ್ಬರು ಶಾಸಕರು ಮತ್ತು ಒಬ್ಬರು ಸಂಸದರು ಸೇರಿದಂತೆ 36ಕ್ಕೆ ಕುಸಿಯಿತು. ಒಬ್ಬ ಪಕ್ಷೇತರ ಅಭ್ಯರ್ಥಿ ಬೆಂಬಲ ದೊರೆತರೂ ಆ ಪಕ್ಷಕ್ಕೆ 37 ಸ್ಥಾನಗಳ ಬಲ ದೊರೆಯುತ್ತದೆ.
ಆದರೆ ಕಾಂಗ್ರೆಸ್ ಪಕ್ಷ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡರೆ 31 ಸ್ಥಾನಗಳ ಬಲದ ಜೊತೆಗೆ ಒಬ್ಬರು ಕೆಜೆಪಿ ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಬೆಂಬಲ ಸೇರಿದಂತೆ 33 ಸ್ಥಾನ ಪಡೆಯುತ್ತದೆ. ಕಾಂಗ್ರೆಸ್‌ನ ಇಬ್ಬರು ಶಾಸಕರು, ಇಬ್ಬರು ವಿಧಾನಪರಿಷತ್ ಸದಸ್ಯರು ಹಾಗೂ ಜೆಡಿಎಸ್‌ನ ಒಬ್ಬರು ವಿಧಾನಪರಿಷತ್ ಸದಸ್ಯರ ಸಹಕಾರದಿಂದ 38 ಸ್ಥಾನಗಳ ಬಲ ಪಡೆದುಕೊಂಡು, ಪಾಲಿಕೆ ಚುಕ್ಕಾಣಿ ಹಿಡಿಯುವುದು ಸುಲಭವಾಗುತ್ತದೆ.
ಈ ರೀತಿಯ ಪರಿಸ್ಥಿತಿ ಬದಲಾವಣೆ ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಕಂಡುಬರುತ್ತಿದ್ದು, ವಿಧಾನಸಭೆ ಚುನಾವಣೆ ಪೂರ್ವದ ಲೆಕ್ಕಾಚಾರ ಸಂಪೂರ್ಣ ಬದಲಾಗಿದೆ. ಬದಲಾದ ಪರಿಸ್ಥಿತಿಯ ಲಾಭ ಪಡೆಯಲು ಪುರಪಿತೃಗಳು ಮೀಸಲಾತಿಯನ್ನು ತಮಗನುಕೂಲವಾಗುವ ನಿಟ್ಟಿನಲ್ಲಿ ಬದಲಾಯಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement