ಮುಂದುವರಿದ ಆಪರೇಶನ್ ಫುಟ್‌ಪಾತ್
ಹುಬ್ಬಳ್ಳಿ: ಫುಟ್‌ಪಾತ್ ಅತಿಕ್ರಮಿಸಿಕೊಂಡ ವ್ಯಾಪಾರಸ್ಥರ ವಿರೋಧದ ಮಧ್ಯೆ ಬುಧವಾರ ಮಹಾನಗರ ಪಾಲಿಕೆ ಸಿಬ್ಬಂದಿ ಅತಿಕ್ರಮಣ ತೆರವುಗೊಳಿಸಿದರು.
'ಕನ್ನಡಪ್ರಭ' ಪ್ರಕಟಿಸಿದ 'ಫುಟ್‌ಪಾತ್ ಹೈಜಾಕ್' ಸರಣಿ ವಿಶೇಷ ವರದಿಗೆ ಸ್ಪಂದಿಸಿ ಮಹಾನಗರ ಪಾಲಿಕೆ ಸತತ ಮೂರನೇ ದಿನ ಕೈಗೊಂಡಿರುವ ಪುಟ್‌ಪಾತ್ ತೆರವು ಕಾರ್ಯಾಚರಣೆ ವೇಳೆ 100ಕ್ಕೂ ಹೆಚ್ಚಿನ ಅತಿಕ್ರಮಣ ಅಂಗಡಿಗಳನ್ನು ತೆರವುಗೊಳಿಸಲಾಯಿತು.
ದಾಜಿಬಾನಪೇಟೆಯ ಜನತಾ ಜ್ಯೂಸ್ ಸೆಂಟರ್‌ನಿಂದ ಗಣೇಶ ವಿಲಾಸ ಹೋಟೆಲ್‌ವರೆಗೆ, ಹಳೇ ಬಸ್‌ನಿಲ್ದಾಣದ ಬಳಿಯ ಚರ್ಚ್ ವೃತ್ತದಿಂದ ಬಸವ ವನದವರೆಗೆ ಹಾಗೂ ಕಾರ್ಪೊರೇಶನ್ ಬ್ಯಾಂಕ್‌ನಿಂದ ನಿಲಿಜನ್ ರಸ್ತೆವರೆಗಿನ ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸಲಾಯಿತು. ಫುಟ್‌ಪಾತ್ ಮೇಲಿಟ್ಟಿದ್ದ ಅಂಗಡಿ ಹಾಗೂ ಹೋಟೆಲ್‌ಗಳ ನಾಮಫಲಕಗಳನ್ನು ಹಾಗೂ ಪಾಲಿಕೆ ಪರವಾನಗಿ ಇಲ್ಲದೇ ಅನಧಿಕೃತವಾಗಿ ಲಗತ್ತಿಸಿದ ನಾಮಫಲಕಗಳನ್ನೂ ಸಿಬ್ಬಂದಿ ವಶಪಡಿಸಿಕೊಂಡರು.
ನಾಮಫಲಕಗಳನ್ನು ವಶಕ್ಕೆ ಪಡೆದ ಪಾಲಿಕೆ ಸಿಬ್ಬಂದಿಯೊದಿಗೆ ವ್ಯಾಪಾರಸ್ಥರು ವಾದಕ್ಕಿಳಿದರು. ಮಹಾನಗರ ಪಾಲಿಕೆಯಿಂದ ಅನುಮತಿ ಪಡೆದು, ನಿಗದಿತ ಶುಲ್ಕ ಭರಿಸಿ ನಾಮಫಲಕ ಅಳವಡಿಸಲು ಪರವಾನಗಿ ನೀಡಬೇಕು ಎಂದು ಸ್ಥಳದಲ್ಲಿದ್ದ ಪಾಲಿಕೆಯ ಮಾರುಕಟ್ಟೆ ಅಧಿಕಾರಿ ವಾಸುದೇವ ರಾಯ್ಕರ ಸಮಜಾಯಿಸಿ ನೀಡಿದರು.
ನಿಲಿಜನ್ ರಸ್ತೆಯ ಫುಟ್‌ಪಾತ್ ಮೇಲಿದ್ದ ಎರಡು ಡಬ್ಬಾ ಅಂಗಡಿಗಳೂ ಪಾಲಿಕೆ ಸಿಬ್ಬಂದಿಯ ವಶವಾದವು. ಈ ಸಂದರ್ಭದಲ್ಲಿ ಉಪನಗರ ಠಾಣೆ ಪೊಲೀಸರು ಭದ್ರತೆ ಒದಗಿಸಿದ್ದರು. ಬುಧವಾರ ಮಧ್ಯಾಹ್ನ ಸುರಿದ ಮಳೆ ಫುಟ್‌ಪಾತ್ ತೆರವು ಕಾರ್ಯಾಚರಣೆಗೆ ಒಂದಿಷ್ಟು ಅಡಚಣೆಯನ್ನುಂಟು ಮಾಡಿತು. ಮಳೆ ನಿಂತ ನಂತರ ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆ ಪ್ರಾರಂಭಿಸಿದರು.
ಕಾರ್ಯಾಚರಣೆ ಗಮನಿಸಿದ ಬೀದಿ ವ್ಯಾಪಾರಸ್ಥರು ಪಾಲಿಕೆ ಸಿಬ್ಬಂದಿ ಆಗಮಿಸುವ ಮುಂಚೆಯೇ ತಮ್ಮ ವ್ಯಾಪಾರದ ಸಾಮಗ್ರಿಗಳೊಂದಿಗೆ ಜಾಗ ಖಾಲಿ ಮಾಡುತ್ತಿದ್ದ ದೃಶ್ಯ ಕಂಡಿತು. ಕೆಲವು ಅಂಗಡಿಕಾರರು ಫುಟ್‌ಪಾತ್ ಮೇಲಿಟ್ಟಿದ್ದ ತಮ್ಮ ವ್ಯಾಪಾರದ ಸಾಮಗ್ರಿಯನ್ನು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಿದರು.