ಸಿಇಟಿ: ಮೂಲ ದಾಖಲೆ ಪರಿಶೀಲನೆ
ಧಾರವಾಡ: ವೃತ್ತಿಪರ ಕೋರ್ಸ್ಗೆ ಪ್ರವೇಶ ಪಡೆಯಲು ಬುಧವಾರ ಇಲ್ಲಿನ ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೇಂದ್ರದಲ್ಲಿ ತಮ್ಮ ಅಂಕಪಟ್ಟಿಗಳ ಮೂಲ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದರು. ಮೊದಲ ದಿನ ಬುಧವಾರ 1 ರಿಂದ 2000 ರ್ಯಾಂಕ್ ವರೆಗಿನ ವಿದ್ಯಾರ್ಥಿಳು ತಮ್ಮ ಅಂಕಪಟ್ಟಿಗಳ ಮೂಲ ದಾಖಲೆಗಳ ಪರಿಶೀಲನೆಗೆ ನೀಡಿದರು. ಕೇಂದ್ರದ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಭ್ಯರ್ಥಿಗಳು ಮುಂಜಾನೆಯಿಂದಲೇ ತಮ್ಮ ಪೋಷಕರೊಂದಿಗೆ ಆಗಮಿಸಿ, ಕಾದು ನಿಂತಿದ್ದ ದೃಶ್ಯಗಳು ಕಂಡು ಬಂದವು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಈ ನೋಡಲ್ ಕೇಂದ್ರದಲ್ಲಿ ಒಂದು ನೋಂದಣಿ ಹಾಗೂ ಆರು ದಾಖಲೆಗಳ ಪರಿಶೀಲನೆಯ ಕೌಂಟರ್ಳನ್ನು ಎಸ್ಡಿಎಂ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ತೆರೆಯಲಾಗಿದೆ. ಪ್ರತಿ ಕೌಂಟರ್ಗೆ ಇಬ್ಬರಿಂದ ಮೂವರು ಸಿಬ್ಬಂದಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದರು. ದಾಖಲೆಗಳ ಪರಿಶೀಲನೆ ಪ್ರಕ್ರಿಯೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು. ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಿದ ನಂತರ ಎಲ್ಲವೂ ಸರಿಯಾಗಿದೆ ಎಂಬ ಮಾಹಿತಿ ನೀಡಿದ ಬಳಿಕ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ತಮಗೆ ಬೇಕಾದ ಕೋರ್ಸ್, ಕಾಲೇಜನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಕೇಂದ್ರದ ಮುಖ್ಯ ನೋಡಲ್ ಅಧಿಕಾರಿ ಎಸ್.ಬಿ. ಗಿರಿಮಠ ತಿಳಿಸಿದ್ದಾರೆ.