ಸುದ್ದಿ ಸಂಕ್ಷೇಪ
ಉಚಿತ ಆರೋಗ್ಯ ಶಿಬಿರ
ಧಾರವಾಡ: ಜಿಲ್ಲಾ ಆಸ್ಪತ್ರೆ, ಅಂಜುಮನ್ ಇಸ್ಲಾಂ ಸಂಸ್ಥೆ ಮತ್ತು ಶಹರ ಆಟೋ ಚಾಲಕರ ಸಂಘ ಜಂಟಿಯಾಗಿ ಇಲ್ಲಿನ ಪೆಂಡಾರಗಲ್ಲಿಯ ಶಾದಿಮಹಲ್‌ನಲ್ಲಿ ಇತ್ತೀಚಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ಜರುಗಿತು. ಜಿಲ್ಲಾ ಆಸ್ಪತ್ರೆಯ ಕಿವಿ, ಮೂಗು ಮತ್ತು ಗಂಟಲು ವಿಭಾಗದ ಮುಖ್ಯಸ್ಥ ಡಾ. ಅಶೋಕ ಮಹಾದೇವಪ್ಪ ಶಿಬಿರ ಉದ್ಘಾಟಿಸಿ ಮಾತನಾಡಿ, ನಿತ್ಯದ ದುಡಿಮೆಯಲ್ಲಿ ತೊಡಗುವ ಸಾರ್ವಜನಿಕರು ತಮ್ಮ ಆರೋಗ್ಯದ ಕಡೆಗೆ ಲಕ್ಷ್ಯ ವಹಿಸಬೇಕು. ರೋಗ ಬಂದ ನಂತರ ನಿವಾರಣೆಗೆ ಪ್ರಯತ್ನಿಸುವ ಬದಲಾಗಿ ರೋಗ ಬರದಂತೆ ಮುಂಜಾಗ್ರತೆ ವಹಿಸುವುದು ಒಳ್ಳೆಯದು ಎಂದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಬಿ. ಕಡಕೋಳ ಮಾತನಾಡಿ, ಜನರ ಆರೋಗ್ಯ ರಕ್ಷಣೆ ಸಲುವಾಗಿ ಸಂಘ-ಸಂಸ್ಥೆಗಳು ತಮ್ಮ ಇತಿಮಿತಿಯಲ್ಲಿ ಕಾಳಜಿ ವಹಿಸುತ್ತವೆ. ಇದರಿಂದ ಭವಿಷ್ಯದಲ್ಲಿ ಆಗುವ ತೊಂದರೆ ನಿವಾರಿಸಲು ಸಾಧ್ಯ. ಈ ದಿಸೆಯಲ್ಲಿ ಶಹರ ಆಟೋ ಚಾಲಕರ ಸಂಘದ ಕಾರ್ಯ ಮೆಚ್ಚುವಂಥದ್ದು ಎಂದರು. ಕಾರ್ಯಕ್ರಮದಲ್ಲಿ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳಾದ ಇಸಾಕ್ ಕಲಕೇರಿ, ಮುನ್ನಾ ಕಲಕೇರಿ, ತಜ್ಞ ವೈದ್ಯ ಡಾ. ರಾಜಶೇಖರ ಪಾಳೇದವರ, ನೇತ್ರಾಧಿಕಾರಿ ಸಲೀಂ ಮಿಶ್ರಿಕೋಟಿ, ಎಲುಬು-ಕೀಲು ತಜ್ಞ ಡಾ.ಶೇಖ ಇದ್ದರು. ಈ ಶಿಬಿರದಲ್ಲಿ 300ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ರಿಯಾಯ್ತಿ ದರದಲ್ಲಿ ನೋಟ್‌ಬುಕ್
ಕಲಘಟಗಿ: ಪಟ್ಟಣದ ಯುವ ಜೈನ ಮಿಲನ ಸೇವಾ ಸಂಸ್ಥೆಯಿಂದ ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ರಿಯಾಯ್ತಿ ದರದಲ್ಲಿ ಅಹಿಂಸಾ ನೋಟ್‌ಬುಕ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿರುವ ಧರ್ಮಣ್ಣ ಸಾಬಣ್ಣವರ ಕಟ್ಟಡದಲ್ಲಿ ವಿತರಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಯುವ ಜೈನ ಮಿಲನ ಸಂಸ್ಥೆಯ ಪ್ರವೀಣ ಇಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹುಬ್ಬಳ್ಳಿ: ವಿವಾಹಿತ ಮಹಿಳೆ ಅಪಹರಣ
ಹುಬ್ಬಳ್ಳಿ: ವಿವಾಹಿತ ಮಹಿಳೆಯೊಬ್ಬಳನ್ನು ಅಪಹರಿಸಿದ ಘಟನೆ ಹಳೇಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ. ರಾಜೇಶ್ವರಿ ವಿಠ್ಠಲ ಬೋರಕನವರ (19) ಎಂಬಾಕೆಯೇ ಅಪಹರಣಗೊಂಡಿದ್ದು, ಆಕೆಯ ಪತಿ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಸುಮಾರು 5 ಅಡಿ ಎತ್ತರದ ರಾಜೇಶ್ವರಿ ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಿದ್ದಳು. ಈಕೆಯ ಕುರಿತು ಮಾಹಿತಿ ದೊರೆತಲ್ಲಿ ದೂ: 0836 2233541 ಅಥವಾ 2233555ಗೆ ಸಂಪರ್ಕಿಸಲು ಕೋರಲಾಗಿದೆ.
ಸೀತಾಬಾಯಿ ನಿಧನ
ಧಾರವಾಡ: ನಗರದ ಸಿದ್ಧಾರ್ಥ ಕಾಲೋನಿ ನಿವಾಸಿ ಸೀತಾಬಾಯಿ ರಾಮಕೃಷ್ಣ ಗಡಕರ (73) ಬುಧವಾರ ನಿಧನರಾದರು. ಮೃತರಿಗೆ ಐವರು ಪುತ್ರರು, ಅಪಾರ ಬಂಧು-ಬಳಗ ಇದ್ದಾರೆ.