ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಆರೋಗ್ಯದ ಕುರಿತು ಕಾಳಜಿ ವಹಿಸಿ

Mainashree
Updated On : 9 Jun 2013, 11:58 am

ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 8
ಹವಾಮಾನದಲ್ಲಿನ ಬದಲಾವಣೆ, ಅದರಲ್ಲೂ ಬೇಸಿಗೆಯಿಂದ ಮಳೆಗಾಲಕ್ಕೆ ಬದಲಾಗುವ ಸಂದರ್ಭದಲ್ಲಿ ದೇಹದ ಆರೋಗ್ಯ ಕುರಿತು ಕಾಳಜಿ ಇರಬೇಕು. ಮನೆ ಹಾಗೂ ಸುತ್ತಲಿನ ಪರಿಸರ ಸ್ವಚ್ಚ ಇಲ್ಲದಿದ್ದರೆ ಸೊಳ್ಳೆಗಳಿಂದಾಗಿ ಡೆಂಘೀ, ಚಿಕೂನ್‌ಗುನ್ಯ ಮಲೇರಿಯಾಗಳಂತಹ ರೋಗಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಕೆ. ನಟರಾಜನ್ ಹೇಳಿದರು.
ಇಲ್ಲಿನ ಆಲೂರ್ ವೆಂಕಟ್‌ರಾವ್ ಸಭಾ ಭವನದಲ್ಲಿ ಏರ್ಪಡಿಸಿದ್ದ ಸಾಂಕ್ರಮಿಕ ರೋಗಗಳ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತ ಬಂದಿರುವುದು ಪ್ರಶಂಸನೀಯ. ನಗರ ಪ್ರದೇಶದ ಸ್ವಚ್ಛತೆ ಇನ್ನು ಜಾಸ್ತಿ ಗಮನ ನೀಡಬೇಕು. ಈ ನಿಟ್ಟಿನಲ್ಲಿ ಪಾಲಿಕೆ ಜೊತೆ ಆಯಾ ಬಡಾವಣೆಗಳ ಜನರೂ ಅಷ್ಟೇ ಜವಾಬ್ದಾರಿಯಿಂದ ಸ್ವಚ್ಛತಾ ನಿಯಮಗಳನ್ನು ಪಾಲಿಸಬೇಕೆಂದು ಹೇಳಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ. ಮೇಘಣ್ಣವರ ಮಾತನಾಡಿ, ಜಿಲ್ಲೆಯಲ್ಲಿ ಎಪ್ರಿಲ್ ತಿಂಗಳಿಂದಲೇ ಆರೋಗ್ಯ, ಮಹಿಳಾ ಇಲಾಖೆಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಹಾಗೂ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಡೆಂಘೀ, ಚಿಕೂನ್‌ಗುನ್ಯ ಹಾಗೂ ಇತರೆ ಸಾಂಕ್ರಾಮಿಕ ರೋಗ ತಡೆಗೆ ನಿರಂತರ ಜಾಗೃತಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಮಕ್ಕಳ ತಜ್ಞ ರಾಜನ್ ದೇಶಪಾಂಡೆ ಮಾತನಾಡಿ, ಜಿಲ್ಲಾಡಳಿತ ಅದರಲ್ಲೂ ಆರೋಗ್ಯ ಇಲಾಖೆ ಹಾಗೂ ಪಾಲಿಕೆ ಮುನ್ನೆಚ್ಚರಿಕೆ ಕುರಿತು ಜನಜಾಗೃತಿ ಹಾಗೂ ಕ್ರಮಗಳನ್ನು ಜಾರಿಗೊಳಿಸಿರುವುದು ಮೆಚ್ಚುಗೆಯ ಸಂಗತಿ. ಮಕ್ಕಳಿಗೆ ಬರುವ ಡೆಂಘೀ ತುಂಬ ಮಾರಕವಾದದ್ದು, ಪಾಲಕರು ಎಚ್ಚರಿಕೆಯಿಂದ ಅವರ ಆರೋಗ್ಯ ರಕ್ಷಣೆ ಮಾಡಬೇಕು. ಶಾಲೆಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಬೇಕು ಎಂದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎನ್.ಎಂ. ಅಂಗಡಿ ಮಾತನಾಡಿ, ಜಿಲ್ಲೆ ಶಂಕಿತ ಡೆಂಘೀ ಪ್ರಕರಣಗಳ ಸಂಖ್ಯೆ ಕುರಿತಂತೆ ಕಳೆದ ವರ್ಷ ರಾಜ್ಯದಲ್ಲೆ ಎರಡನೇ ಸ್ಥಾನದಲ್ಲಿತ್ತು. ಈಗ ಅದು 23ನೇ ಸ್ಥಾನಕ್ಕೆ ಬಂದಿದೆ. ಈ ವರ್ಷ ಇಲ್ಲಿವರೆಗೆ ಶಂಕಿತ 91 ಪ್ರಕರಣಗಳು ವರದಿಯಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ 3 ಹಾಗೂ ಹೆಬ್ಬಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಡೆಂಘೀ ಪ್ರಕರಣ ಖಚಿತವಾಗಿವೆ. ಜಿಲ್ಲೆಯಲ್ಲಿ ಚಿಕೂನ್‌ಗುನ್ಯದ 8 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿ ಆರೋಗ್ಯ ಹಾಗೂ ಮಹಿಳಾ ಇಲಾಖೆ ಸಿಬ್ಬಂದಿಗಳು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು.
ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕಾಮರೆಡ್ಡಿ, ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ತ್ರಿಶುಲಾ ಅಪ್ಪಣ್ಣವರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ನ್ಯಾಯಮೂರ್ತಿ ಹೊಸಮನಿ ಸಿದ್ದಪ್ಪ, ನ್ಯಾಯವಾದಿ ಬಿ.ಎಸ್. ಸಂಗಟಿ ಇದ್ದರು.  ನ್ಯಾಯವಾದಿ ವಿವೇಕ ಸ್ವಾಗತಿಸಿದರು. ವಸಂತ ಹೊಳೆನೂರು ವಂದಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪರಿಮಳಾ ಮುಗದ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement