ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಸಿಮೆಂಟ್ ಪ್ರೊಡಕ್ಷನ್‌ಗೆ ನುಗ್ಗಿ ದಾಂಧಲೆ

Mainashree
Updated On : 9 Jun 2013, 11:58 am

ಹುಬ್ಬಳ್ಳಿ: ಬೈರಿದೇವರಕೊಪ್ಪ ಬಳಿವಿರುವ ಧಾರವಾಡ ಸಿಮೆಂಟ್ ಪ್ರೊಡಕ್ಷನ್‌ಗೆ ನುಗ್ಗಿದ ಐದಾರು ಜನರ ತಂಡ ದಾಂಧಲೆ ನಡೆಸಿ ಅಲ್ಲಿದ್ದ ಸಿಬ್ಬಂದಿಗೆ ಥಳಿಸಿದ್ದಲ್ಲದೆ, ವ್ಯವಹಾರ ಮುಂದುವರೆಸಿಕೊಂಡು ಹೋಗಲು ರು. 10 ಲಕ್ಷ ನೀಡುವಂತೆ ಮಾಲೀಕನಿಗೆ ಬೆದರಿಕೆ ಹಾಕಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರೊಡಕ್ಷನ್ ಮಾಲೀಕ ಬಾಷಾಸಾಬ್ ಅಬ್ದುಲ್‌ರಸೀದ್ ಸಂಶಿ ಎಂಬುವರು ಎಪಿಎಂಸಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಕಳೆದ 8-10 ದಿನಗಳಿಂದ ಸಂಶಿಯವರಿಗೆ ಸ್ಥಳೀಯರಾದ ಫರ್ವೇಜ್ ಹಾಗೂ ತಾಡಪತ್ರಿ ಬಸ್ಯಾ ಮತ್ತು ಇವರುಗಳ ನಾಲ್ಕಾರು ಬೆಂಬಲಿಗರು ರು. 10 ಲಕ್ಷ ನೀಡುವಂತೆ ದೂರವಾಣಿ ಕರೆ ಮಾಡಿ ಬೆದರಿಕೆಯೊಡ್ಡಿದರು. ಇಷ್ಟು ಹಣ ನೀಡಲು ಆಗದೆ ಇದ್ದ ಪಕ್ಷದಲ್ಲಿ ಪ್ರೊಡಕ್ಷನ್ ನಡೆಸುತ್ತಿರುವ ಜಾಗೆಯನ್ನು ಖಾಲಿ ಮಾಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ.
ಘಟನೆಗೆ ಕಾರಣ: ಸಂಶಿ, 11 ವರ್ಷಗಳ ಹಿಂದೆ ಬೈರಿದೇವರಕೊಪ್ಪ ಬಳಿಯಿರುವ 3 ಎಕರೆ ಜಾಗೆಯನ್ನು ವೀರಪ್ಪ ರಾಜಪ್ಪ ಚಿನವಾಲರ್ ಎಂಬುವರಿಂದ ರು. 2.40 ಲಕ್ಷಕ್ಕೆ ಖರೀದಿಸಿ ಸಣ್ಣ ಕೈಗಾರಿಕಾ ಘಟಕ ಆರಂಭಿಸಿದ್ದರು.
ಆದರೆ, ಇತ್ತೀಚಿಗಷ್ಟೇ, ಫರ್ವೇಜ್ ಹಾಗೂ ತಾಡಪತ್ರಿ ಬಸ್ಯಾ ಮತ್ತು ಅವರುಗಳ ಬೆಂಬಲಿಗರು ಈ ಜಾಗೆ ತಮ್ಮಗೆ ಸೇರಿದ್ದು ರು. 10 ಲಕ್ಷ ನೀಡಿ ವ್ಯವಹಾರ ಮುಂದುವರೆಸಿಕೊಂಡು ಹೋಗುವಂತೆ ಬೆದರಿಕೆ ಹಾಕಲಾರಂಭಿಸಿದ್ದರು ಎಂದು ಸಂಶಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ಜಾಗೆ ಖರೀದಿಸಿರುವುದು ಸೇರಿದಂತೆ ಘಟಕ ಆರಂಭಿಸಿರುವುದಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ಸೂಕ್ತ ದಾಖಲೆಗಳಿದ್ದು, ಅವೆಲ್ಲವುಗಳನ್ನು ಎಪಿಎಂಸಿ ಠಾಣೆಗೆ ಸಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ದಾಖಲಿಸಿದ್ದೇವೆ ಎಂದೂ ಅವರು ತಿಳಿಸಿದರು. ಈ ಕುರಿತಂತೆ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement