ಸುದ್ದಿ ಸಂಕ್ಷೇಪ
ಇಂದು 'ನಾನೂ ಶಾಲೆಗೆ ಹೋಗುವೆ' ಚಿತ್ರ ಬಿಡುಗಡೆ
ಹುಬ್ಬಳ್ಳಿ: ಕರ್ನಾಟಕ ಟೆಲಿಫಿಲ್ಮಂಸ್ ನಿರ್ಮಿಸಿರುವ 'ನಾನೂ ಶಾಲೆಗೆ ಹೋಗುವೆ' ಮಕ್ಕಳಿಗಾಗಿರುವ ಶೈಕ್ಷಣಿಕ ಚಿತ್ರದ ಬಿಡುಗಡೆ ಸಮಾರಂಭ ಜೂ. 9ರಂದು ಸಂಜೆ 4ಕ್ಕೆ ಜೆ.ಸಿ. ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ನಡೆಯಲಿದೆ. ಶಾಸಕ ಪ್ರಸಾದ ಅಬ್ಬಯ್ಯ, ಪೊಲೀಸ್ ಆಯುಕ್ತ ಬಿ.ಎ. ಪದ್ಮನಯನ ಹಾಗೂ ಎಸಿಪಿ ಎ.ಆರ್. ಬಡಿಗೇರ ಉದ್ಘಾಟನೆ ನೆರವೇರಿಸಲಿದ್ದಾರೆ. ಶಿಕ್ಷಣದ ಅವಶ್ಯಕತೆ ಮತ್ತು ಮಹತ್ವ, ಎಲ್ಲ ಜಾತಿ ಮತಗಳ ಜನರೆಲ್ಲರೂ ಒಂದೇ ಎಂದು ಸಾರುವ ಹಾಗೂ ಗುರು ಹಿರಿಯರನ್ನು ಗೌರವಿಸುವುದನ್ನು ಈ ಚಿತ್ರದಲ್ಲಿ ತೋರಿಸಲಾಗಿದ್ದು, ಸೋಮವಾರದಿಂದ ರಾಜ್ಯಾದ್ಯಂತ ಎಲ್ಲ ಶಾಲೆಗಳಲ್ಲಿ ಈ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಫಿಲ್ಮಂಸ್ನ ಪ್ರಕಾಶ ಎನ್. ಅವರಾದಿ ತಿಳಿಸಿದ್ದಾರೆ. ಮುಖ್ಯ ಪಾತ್ರದಲ್ಲಿ ಬೇಬಿ ಪುಷ್ಪಾ, ರೇಣುಕಾ ಸಂಗನಾಳ, ಸುಮತಿಶ್ರೀ, ಚನ್ನಬಸಪ್ಪ ಕಾಳೆ, ಮಂಜುಳಾ, ಬೇಬಿ ಅಂಜಲಿ, ಬೇಬಿ ಭೂಮಿಕಾ, ಸಿದ್ದನಾಯ್ಕ ಪಾಟೀಲ ಮತ್ತಿತರರು ನಟಿಸಿದ್ದಾರೆ.
ಉದ್ಯೋಗ ಖಾತ್ರಿ ಕೂಲಿ ಪಾವತಿಗೆ ಕ್ರಮ
ಧಾರವಾಡ: ಕೊಟಬಾಗಿ ಗ್ರಾಪಂ ವ್ಯಾಪ್ತಿಯ ಉಪ್ಪಿನ ಬೇಟಗೇರಿ, ತಡಕೋಡ ಹಾಗೂ ಕೊಟಬಾಗಿ ಕೆಜಿವಿಬಿ ಬ್ಯಾಂಕಿನ ಖಾತೆಗಳ ಸಂಖ್ಯೆಯಲ್ಲಿನ ಗೊಂದಲದಿಂದಾಗಿ ಉದ್ಯೋಗ ಖಾತ್ರಿ ಯೋಜನೆಯಡಿ 148 ಜನರಿಗೆ ಕೂಲಿ ಹಣ ಜಮಾವಣೆ ವಿಳಂಬವಾಗಿತ್ತು. ಈಗ ಸಂಬಂಧಿತ ಖಾತೆ ಸಂಖ್ಯೆಗಳನ್ನು ಸರಿಪಡಿಸಿ ಉದ್ಯೋಗ ಖಾತ್ರಿ ಯೋಜನೆಯ ಅಂತರ್ಜಾಲದಲ್ಲಿ ಅಳವಡಿಸಿ ಅವರಿಗೆ ನೀಡಬೇಕಾಗಿರುವ ಒಟ್ಟು ರು. 1.34 ಲಕ್ಷ ಕೂಲಿ ಹಣವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಸ್. ಬಂಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭಿನಂದನಾ ಕಾರ್ಯಕ್ರಮ
ಧಾರವಾಡ: ಇಲ್ಲಿನ ಹಳಿಯಾಳ ರಸ್ತೆಯ ಬಳಿಯ ಆನಂದ ಕಲ್ಯಾಣ ಮಂಟಪದಲ್ಲಿ ಧಾರವಾಡ ವಿಧಾನಸಭಾ ಕ್ಷೇತ್ರದ ಶಾಸಕ ವಿನಯ ಕುಲಕರ್ಣಿ ಜೂ. 9ರಂದು ಬೆಳಗ್ಗೆ 11ಕ್ಕೆ ಮತದಾರರ ಬಾಂಧವರಿಗೆ ಹಾಗೂ ಅಭಿಮಾನಿಗಳಿಗೆ ಅಭಿನಂಧನಾ ಸಮಾರಂಭ ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕುಂದಗೋಳ ಶಾಸಕ ಸಿ.ಎಸ್. ಶಿವಳ್ಳಿ, ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ದೇವಕಿ ಯೋಗಾನಂದ, ರೇಣುಕಾ ಕಳ್ಳಿಮನಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.
15ರಿಂದ ತರಬೇತಿ ಕಾರ್ಯಾಗಾರ
ಧಾರವಾಡ: ಇಲ್ಲಿನ ಸಾಂಸ್ಕೃತಿಕ ಲೋಕ ಆರ್ಟ್ ಮತ್ತು ಕಲ್ಚರಲ್ ಅಕಾಡೆಮಿ ವತಿಯಿಂದ ಮಕ್ಕಳ ಹಾಗೂ ಯುವಕರ ವ್ಯಕ್ತಿತ್ವ ವಿಕಸನಕ್ಕಾಗಿ ಜೂ. 15ರಿಂದ ನಿರಂತರ ತರಗತಿ ನಡೆಸಲು ನೃತ್ಯ, ಸಂಗೀತ, ಯಕ್ಷಗಾನ, ಯೋಗ, ರಂಗ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದೆ. ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿ ತೋರುವ ಮಕ್ಕಳು ಮತ್ತು ಯುವಕರು ಪ್ರವೇಶ ಫಾರ್ಮನ್ನು ಪಡೆದು ಜೂ. 13ರೊಳಗಾಗಿ ಪಡೆದು ಸಪ್ತಾಪುರದಲ್ಲಿರುವ ಅಕಾಡೆಮಿಗೆ ತಲುಪಿಸಿಬೇಕು. ತರಬೇತಿಗೆ ಕೇವಲ 20 ವಿದ್ಯಾರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ಹೀಗೆಯೆ ಪ್ರತಿಯೊಂದು ವರ್ಗಕ್ಕೂ 20 ಮಕ್ಕಳನ್ನು ಸೀಮಿತಗೊಳಿಸಲಾಗಿದೆ. ಮಾಹಿತಿಗೆ ಮೊ. 8123499447, 7411988613ಗೆ ಸಂಪರ್ಕಿಸಿ.
ಮುಕ್ಕಲಗೆ ಹೆಚ್ಚುವರಿ ಬಸ್
ಧಾರವಾಡ: ಕಲಘಟಗಿಯಿಂದ ಮುಕ್ಕಲಗೆ ಸಾರ್ವಜನಿಕರ ಬೇಡಿಕೆ ಮೇರೆಗೆ ರಾತ್ರಿ 8ಕ್ಕೆ ಬಸ್ ಬಿಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಧಾರವಾಡ-ಹುಬ್ಬಳ್ಳಿ ನಡುವೆ ಓಡುವ ಮಹಿಳಾ ವಿಶೇಷ ಬಸ್ಗಳಲ್ಲಿ ಮಹಿಳೆ-ಕುಟುಂಬದವರಿಗೆ ಪ್ರಯಾಣಿಸಲು ಅನುಮತಿ ನೀಡಲು ಚಾಲನಾ ಸಿಬ್ಬಂದಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದ್ದು, ಈ ವಿಶೇಷ ಬಸ್ಗಳಿಗೆ ಮಹಿಳಾ ನಿರ್ವಾಹಕಿಯರನ್ನೇ ನಿಯೋಜಿಸಲಾಗಿದೆ. ಮಹಿಳಾ ಪ್ರಯಾಣಿಕರಿಂದ ಯಾವುದೇ ದೂರುಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಹೋಂಗಾರ್ಡ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಹುಬ್ಬಳ್ಳಿ ವಿಭಾಗದ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.