ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಅಭಿವೃದ್ಧಿ ಹೆಸರಲ್ಲಿ ನಾಶವಾದ ಕೆಂಚಗೇರಿ ಕೆರೆ

Vishwanath S
Updated On : 10 Jun 2013, 11:25 am

ಕನ್ನಡಪ್ರಭ ವಾರ್ತೆ, ಹೆಬ್ಬಳ್ಳಿ, ಜೂ. 9
ಅಂತರ್ಜಲಮಟ್ಟ ಹೆಚ್ಚಿಸಲು ಮತ್ತು ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಗ್ರಾಮೀಣ ಪ್ರದೇಶದ ಕೆರೆಗಳ ಅಭಿವೃದ್ಧಿಗೆ ಹತ್ತಾರು ಯೋಜನೆಗಳನ್ನು ರೂಪಿಸುತ್ತಿದೆ. ಆದರೂ, ಕೆರೆಗಳ ಅಭಿವೃದ್ಧಿ ಮಾತ್ರ ನೆನೆಗುದಿಗೆ ಬೀಳುತ್ತಿದ್ದು, ಇದಕ್ಕೆ ಉತ್ತಮ ನಿದರ್ಶನ ಹೆಬ್ಬಳ್ಳಿ ಕೆಂಚಗೇರಿ ಕೆರೆ.
ಹೌದು, ಗ್ರಾಮದ ಕೆಂಚಗೇರಿ ಕೆರೆ ಪುನಶ್ಚೇತನಗೊಳಿಸಲು ಈ ಹಿಂದಿನ ಬಿಜೆಪಿ ಸರ್ಕಾರ ಸುಮಾರು ರು. 13 ಲಕ್ಷ ಅನುದಾನ ನೀಡಿತ್ತು. ಆದರೆ, ಈ ಕೆರೆ ಅಭಿವೃದ್ಧಿ ಹಣ ಗುತ್ತಿಗೆದಾರರೊಬ್ಬರ ಪಾಲಾಗಿದ್ದು, ಅಭಿವೃದ್ಧಿ ಮಾತ್ರ ಸಾಧ್ಯವಾಗಿಲ್ಲ. ಶಾಸಕಿ ಸೀಮಾ ಮಸೂತಿ ಕೆರೆ ಪುನಶ್ಚೇತನಕ್ಕೆ ಗುತ್ತಿಗೆ ನೀಡಿದ್ದರು. ಆದರೆ, ಗುತ್ತಿಗೆದಾರ ಹಣ ನುಂಗಿ ನೀರು ಕುಡಿದ ಎಂಬುದು ಗ್ರಾಮಸ್ಥರ ಆರೋಪವಾಗಿದೆ.
ಸುಮಾರು ರು. 13 ಲಕ್ಷ ಅನುದಾನದಲ್ಲಿ ಈ ಕೆರೆ ಸಂಪೂರ್ಣ ಅಭಿವೃದ್ಧಿಗೊಳ್ಳಬೇಕಿತ್ತು. ಆದರೆ, ಈಗ ಈ ಕೆರೆಯ ಸುತ್ತಲಿನ ಭಾಗದಲ್ಲಿ ವ್ಯವಸ್ಥಿತವಾಗಿ ಕಲ್ಲುಗಳನ್ನು ಜೋಡಿಸಲಾಗಿದೆ. ಆದರೆ ಇದೆ ಕೆರೆಗೆ ಅಡೆತಡೆಯಾಗಿದೆ. ನೀರು ಬರದಂತೆ ಕಲ್ಲು ಜೋಡಿಸಲಾಗಿದೆ. ಎರಡ್ಮೂರು ವರ್ಷಗಳಿಂದ ಗುತ್ತಿಗೆದಾರನಾಗಲಿ ಹಾಗೂ ಈ ಹಿಂದಿನ ಶಾಸಕಿ ಇತ್ತ ಕಣ್ಣು ಹಾಯಿಸಲಿಲ್ಲ. ಹಾಗಾಗಿ ಈ ಕೆರೆ ಯಥಾಸ್ಥಿತಿಯಲ್ಲಿದೆ.
ತುಂಬಿರುತ್ತಿದ್ದ ಕೆರೆ: ಕೆಂಚಗೇರಿ ಕೆರೆ ಗ್ರಾಮದಲ್ಲಿಯೇ ಅತ್ಯಂತ ಉಪಯುಕ್ತ ಕೆರೆಯಾಗಿತ್ತು. ಕೇವಲ ಒಂದು ಉತ್ತಮ ಮಳೆಯಾದರೆ ಸಾಕು ಕೆರೆ ತುಂಬುತ್ತಿತ್ತು. ಸಾರ್ವಜನಿಕರು ಈ ಕೆರೆಯ ನೀರನ್ನು ದನ, ಕರುಗಳಿಗೆ ಹಾಗೂ ತಮ್ಮ ನಿತ್ಯದ ಬಳಕೆಗೆ ಬಳಸಿಕೊಳ್ಳುತ್ತಿದ್ದರು. ಆದರೀಗ ಕೆರೆ ನೀರು ಬರದಂತಾಗಿದೆ. ಮೂರು ವರ್ಷಗಳಿಂದ ನೀರಿಲ್ಲದಿರುವುದರಿಂದ ಗ್ರಾಮಸ್ಥರು ಕೆರೆಯಲ್ಲಿನ ಮಣ್ಣನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಅತ್ಯಂತ ಫಲವತ್ತಾದ ಮಣ್ಣು ಎಂದು ತಿಳಿದ ಗ್ರಾಮಸ್ಥರು ಟ್ರ್ಯಾಕ್ಟರ್ ಮೂಲಕ ಮಣ್ಣುನ್ನು ಎಗ್ಗಿಲ್ಲದೇ ತುಂಬಿಕೊಂಡು ಹೋಗಿ ತಮ್ಮ ಹೊಲಗಳಿಗೆ ಹಾಕಿಕೊಳ್ಳುತ್ತಿದ್ದಾರೆ. ಅಲ್ಲದೇ ಮನೆ ನಿರ್ಮಾಣಕ್ಕೂ ಬಳಸಿಕೊಳ್ಳುತ್ತಿದ್ದಾರೆ.
ಕ್ರಮ ಕೈಗೊಳ್ಳುವರೇ ಹಾಲಿ ಶಾಸಕರು?: ವಿಧಾನಸಭಾ ಚುನಾವಣೆ ಮುಗಿದು ಸಚಿವ ಸಂಪುಟ ರಚನೆಯಾಗುತ್ತಿದ್ದಂತೆ ಅಭಿವೃದ್ಧಿ ಮಾತುಗಳು ಕೇಳಿ ಬರುತ್ತಿವೆ. ಹಾಗೆಯೇ ಹೆಬ್ಬಳ್ಳಿಯ ಈ ಕೆರೆಯ ಅಭಿವೃದ್ಧಿಗಾಗಿ ಜನ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಎರಡನೇ ಬಾರಿಗೆ ಗ್ರಾಮೀಣ ಕ್ಷೇತ್ರದ ಶಾಸಕರಾಗಿ ಪುನರಾಯ್ಕೆಯಾಗಿರುವ ವಿನಯ ಕುಲಕರ್ಣಿ ಈ ಕೆರೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.

-ಹೊನ್ನಪ್ಪ ಲಕ್ಕಮ್ಮನವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement