ಕಿಮ್ಸ್ ನಿರ್ಲಕ್ಷ್ಯಕ್ಕೆಮತ್ತೊಂದು ಬಲಿ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 9
ಕಿಮ್ಸ್ ವೈದ್ಯರೊಬ್ಬರ ನಿರ್ಲಕ್ಷ್ಯದಿಂದಾಗಿ ಮತ್ತೊಂದು ಜೀವ ಬಲಿಯಾಗಿದೆ.
ಹೌದು, ಕಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದ ಪುಠಾಣಿ ಜೀವ ನೋಡ ನೋಡುತ್ತಲೇ ಸಾವಿನ ಮಡುವಿನಲ್ಲಿ ಮಲಗಿ ಬಿಟ್ಟಿದೆ. ಅಂದ ಹಾಗೆ, ಕಿಮ್ಸ್ ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿಗಳು ಇಲ್ಲಿ ಸಾವನ್ನಪ್ಪಿದ್ದ ಘಟನೆ ಇದೇ ಮೊದಲೇನಲ್ಲ. ಇಂತಹ ಅನೇಕ ಘಟನೆಗಳಿಗೆ ಇದೇ ಕಿಮ್ಸ್ ಸಾಕ್ಷಿಯಾಗಿದೆ.
ಡೆಂಘೀ ಶಂಕೆಯ ಮೇಲೆ ಕಿಮ್ಸ್‌ಗೆ ದಾಖಲಾಗಿದ್ದ ಮೇಘಾ(6)ಳಿಗೆ ಸರಿಯಾದ ಚಿಕಿತ್ಸೆ ಸಿಕ್ಕಿದ್ದೇ ಆದಲ್ಲಿ ಬದುಕುಳಿಯುತ್ತಿದ್ದಳೋ ಏನೋ? ಮಾರಣಾಂತಿಕ ಡೆಂಘೀ ಶಂಕೆಯಿಂದ ಮೇಘಾ ಆಸ್ಪತ್ರೆ ಸೇರಿದ್ದಾಳೆ ಎಂದಾದಲ್ಲಿ, ಆಕೆಯ ಬಗ್ಗೆ ವೈದ್ಯರು ಹೆಚ್ಚಿನ ಆರೈಕೆ, ಕಾಳಜಿ ತೆಗೆದುಕೊಳ್ಳಬೇಕಾಗಿತ್ತು. ಆದರೆ ಬಡ ಕುಟುಂಬಕ್ಕೆ ಸೇರಿದ ಮೇಘಾಳ ಬಗ್ಗೆ ವೈದ್ಯರು ನಿರ್ಲಕ್ಷ್ಯ ಧೋರಣೆ ತಾಳಿದ್ದೇ ಈ ಅವಘಡಕ್ಕೆ ಕಾರಣವಾಯಿತು. ಕಿಮ್ಸ್ ಬಡವರ ಪಾಲಿನ ಸಂಜೀವಿನಿ ಎಂದು ಕರೆಯಿಸಿಕೊಂಡಿದೆಯೇ ಹೊರತು ಬಡವರಿಗೆ ಹೇಳಿಕೊಳ್ಳುವ ಯಾವ ಆರೈಕೆಯೂ ಇಲ್ಲಿ ಸಿಗುವುದಿಲ್ಲ ಎಂಬುದು ಮೇಘಾಳ ಸಂಬಂಧಿಕರ ಉವಾಚ.
ಅಸಭ್ಯ ವರ್ತನೆ: ಕಿಮ್ಸ್ ವೈದ್ಯರು ಸೇರಿದಂತೆ ಇನ್ನಿತರ ವಿಭಾಗಗಳ ಸಿಬ್ಬಂದಿ ರೋಗಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಾರೆ ಎನ್ನುವ ದೂರು ಇದ್ದೇ ಇದೆ. ಇನ್ನು ದುಡ್ಡುಕೊಟ್ಟರೆ ಮಾತ್ರ ಇಲ್ಲಿ ರೋಗಿಗಳಿಗೆ ಉತ್ತಮ ಆರೈಕೆ ಸಿಗುತ್ತದೆ ಎನ್ನುವ ಆರೋಪಗಳೂ ಇವೆ. ವೈದ್ಯರು ಸೇರಿದಂತೆ ಇನ್ನಿತರ ಸಿಬ್ಬಂದಿ ಕಿರುಕುಳ ಮಿತಿ ಮೀರಿದಾಗ "ಬಡವನ ಸಿಟ್ಟು ದವಡೆಗೆ ಮೂಲ" ಎನ್ನುವಂತೆ ಶಾಸಕ ವಿನಯ ಕುಲಕರ್ಣಿ ವೈದ್ಯರಿಗೆ ಕಪಾಳಮೋಕ್ಷ ಮಾಡಿದಂತಹ ಘಟನೆಗಳು ನಡೆಯುತ್ತವೆ.
ಶಾಸಕರು ಮಾಡಿದ್ದು ತಪ್ಪಾ?: ಶಾಸಕ ವಿನಯ ಕುಲಕರ್ಣಿ ಸಂಯಮ ಕಳೆದುಕೊಂಡು ವೈದ್ಯರಿಗೆ ಕಪಾಳ ಮೋಕ್ಷ ಮಾಡುವಷ್ಟರ ಮಟ್ಟಿಗೆ ಮುಂದೆ ಹೋಗಿದ್ದು ತಪ್ಪು ಎಂದಾದರೂ ಅವರು ಸಂಯಮ ಕಳೆದುಕೊಳ್ಳಲು ಕಾರಣವೇನು? ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಬಡಪಾಯಿ ಅದರಲ್ಲೂ ಪುಟ್ಟ ಮಗು ವೈದ್ಯರ ನಿರ್ಲಕ್ಷ್ಯದಿಂದಾಗಿ ಅಸುನೀಗಿದೆ ಎಂದ ಮೇಲೆ ಎಂತಹ ಕಲ್ಲು ಹೃದಯವೂ ಮರಗುತ್ತದೆ. ಸುದ್ದಿ ತಿಳಿಯುತ್ತಲೇ ಶಾಸಕ ವಿನಯ ಧಾರವಾಡದಿಂದ ಹುಬ್ಬಳ್ಳಿಯ ಕಿಮ್ಸ್‌ಗೆ ಧಾವಿಸಿದ್ದಾರೆ. ಈ ಸಂದರ್ಭದಲ್ಲಿ ಮಗುವನ್ನು ಕಳೆದುಕೊಂಡ ನೋವಿನಲ್ಲಿ ಮೇಘಾಳ ಸಂಬಂಧಿಕರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿರಲಿಕ್ಕೂ ಸಾಕು. ಇದೇ ವೇಳೆ ಓರ್ವ ಜನಪ್ರತಿನಿಧಿಯಾಗಿ ವಿನಯ ಕುಲಕರ್ಣಿ ನಡೆದಿರುವ ಘಟನೆಯ ಬಗ್ಗೆ ವೈದ್ಯರನ್ನು ಪ್ರಶ್ನಿಸಿದ್ದು ಸಹಜ. ಇದಕ್ಕೆ ಪ್ರತಿಯಾಗಿ ವೈದ್ಯರು ಸರಿಯಾಗಿ ಉತ್ತರಿಸಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರಲಿಲ್ಲವೇನೋ? ವೈದ್ಯ ದೇವರಾಜ ರಾಯಚೂರ ಜನರೆದುರೇ ಶಾಸಕ ವಿನಯ ಅವರನ್ನು ಗೆಟ್‌ಔಟ್ ಎಂದಿದ್ದಾರೆ. ಇದು ವಿನಯ ಸಂಯಮ ಕಳೆದುಕೊಳ್ಳಲು ಕಾರಣವಾಯಿತು. ವೈದ್ಯ ರಾಯಚೂರ ಈ ರೀತಿಯಾಗಿ ನಡೆದುಕೊಂಡಿದ್ದು ಎಷ್ಟರ ಮಟ್ಟಿಗೆ ಸರಿ? ಜವಾಬ್ದಾರಿಯುತ ಹುದ್ದೆಯಲ್ಲಿದ್ದು ಜನಪ್ರತಿನಿಧಿಯೊಂದಿಗೇ ಅಸಭ್ಯವಾಗಿ ವೈದ್ಯರು ನಡೆದುಕೊಳ್ಳುತ್ತಾರೆಂದ ಮೇಲೆ ಜನಸಾಮಾನ್ಯರೊಂದಿಗೆ ವೈದ್ಯರು ಅದ್ಹೇಗೆ ವರ್ತಿಸಿಯಾರು? "ವೈದ್ಯೋಃ ನಾರಾಯಣೋ ಹರಿ" ಎಂದು ವೈದ್ಯರನ್ನು ಪೂಜಿಸುವ ಪರಿಪಾಠ ಸಮಾಜದಲ್ಲಿರುವಾಗ ಡಾ. ರಾಯಚೂರ ನಡೆದುಕೊಂಡಿದ್ದು ಸರಿಯೇ? ಡಾ. ರಾಯಚೂರ ಹದ್ದು ಮೀರಿ ವರ್ತಿಸಿದ್ದಕ್ಕೆ ಪ್ರತಿಯಾಗಿ ಶಾಸಕ ವಿನಯ ಮಾಡಿದ್ದು ತಪ್ಪಾ? ಎನ್ನುವ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ.
ಕಿಮ್ಸ್ ವೈದ್ಯರ ನಿರ್ಲಕ್ಷ್ಯಕ್ಕೆ ಮತ್ತೊಂದು ಜೀವ ಬಲಿಯಾಗಿದೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ರೋಗಿಗಳು ಸಾವಿನ ಮಡುವಿನಲ್ಲಿ ಮಲಗುತ್ತಿರುವ ಘಟನೆ ಕಿಮ್ಸ್‌ನಲ್ಲಿ ಮೇಲಿಂದ ಮೇಲೆ ನಡೆಯುತ್ತಿದೆ. ಕಿಮ್ಸ್ ಬಡವರ ಪಾಲಿನ ಸಂಜೀವಿನಿ ಎಂದು ಕರೆಯಿಸಿಕೊಂಡಿದೆಯೇ ಹೊರತು ಬಡವರಿಗೆ ಇಲ್ಲಿ ಕ್ಯಾರೇ ಎನ್ನುವುದಿಲ್ಲ. ವೈದ್ಯರ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಪ್ರತಿಭಟಿಸುವುದು ಇಲ್ಲಿ ಮಾಮೂಲಿ ಎಂಬಂತಾಗಿದೆ. ಶಾಸಕ ವಿನಯ ಕುಲಕರ್ಣಿ ಅವರೊಂದಿಗೆ ವೈದ್ಯ ಡಾ. ರಾಯಚೂರ ಅಸಭ್ಯವಾಗಿ ನಡೆದುಕೊಂಡು ಕಪಾಳಮೋಕ್ಷಕ್ಕೆ ಕಾರಣರಾಗಿದ್ದಾರೆ. ಡಾ. ರಾಯಚೂರ ಈ ಹಿಂದೆ ಸಚಿವರಾಗಿದ್ದ ರಾಮದಾಸ ಅವರೊಂದಿಗೂ ಅಸಭ್ಯವಾಗಿ ವರ್ತಿಸಿ ಆಕ್ರೋಶಕ್ಕೆ ಗುರಿಯಾಗಿದ್ದರು. ಇಂಥ ಅಸಭ್ಯ ವೈದ್ಯರೊಂದಿಗೆ ವಿನಯ ನಡೆದುಕೊಂಡ ರೀತಿ ತಪ್ಪಾ? ಎಂಬ ಚರ್ಚೆ ನಡೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಕಿಮ್ಸ್‌ನಲ್ಲಿ ರೋಗಿಗಳಿಗೆ ಸರಿಯಾದ ಉಪಚಾರ ಸಿಗುತ್ತಾ? ಕಿಮ್ಸ್‌ನಲ್ಲಿ ಏನೆಲ್ಲಾ ಕೊಳಕುಂಟು? ರೋಗಿಗಳ ಹೆಸರಲ್ಲಿ ಇಲ್ಲಿ ಏನೆಲ್ಲಾ ಅಕ್ರಮ ನಡೆಯುತ್ತಿದೆ? ಎಂಬ ಸಂಗತಿಯ ಮೇಲೆ 'ಕನ್ನಡಪ್ರಭ' ಬೆಳಕು ಚೆಲ್ಲಲಿದೆ.
ರಾದ್ಧಾಂತ ಇದೇ ಮೊದಲಲ್ಲ
ಕಿಮ್ಸ್‌ನಲ್ಲಿ ಡಾ. ದೇವರಾಜ ರಾಯಚೂರ ನಡೆಸಿದ ರಾದ್ಧಾಂತ ಇದೇ ಮೊದಲಲ್ಲ. ಸಚಿವರಾಗಿದ್ದ ರಾಮದಾಸ ಕಿಮ್ಸ್‌ಗೆ ಭೇಟಿ ನೀಡಿದ್ದ ಸಮಯದಲ್ಲಿ ಡಾ. ದೇವರಾಜ ರಾಯಚೂರ ಅಸಭ್ಯವಾಗಿ ವರ್ತಿಸಿ ರಾಮದಾಸ ಅವರ ಆಕ್ರೋಶಕ್ಕೆ ತುತ್ತಾಗಿದ್ದರು. ಇದಾದ ಬಳಿಕ ವಾಕರಾರಸಾ ಸಂಸ್ಥೆಯ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಸಾವಕಾರ ರೋಗಿಯೊಬ್ಬರ ಆರೋಗ್ಯ ವಿಚಾರಿಸಲು ಹೋದ ವೇಳೆಯಲ್ಲಿಯೂ ಡಾ. ರಾಯಚೂರ ಹದ್ದುಮೀರಿ ವರ್ತಿಸಿದ್ದರು. ಇದೀಗ ಶಾಸಕ ವಿನಯ ಅವರೊಂದಿಗೂ ಅಸಭ್ಯವಾಗಿ ನಡೆದುಕೊಂಡಿದ್ದಾರೆ.