ಬಿ. ಕೃಷ್ಣಪ್ಪ ಜೀವನ ಕ್ರಾಂತಿಕಾರಕ
ಹುಬ್ಬಳ್ಳಿ: ದಲಿತರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಟ್ಟ, ಶೋಷಣೆಯ ವಿಮೋಚನೆಗೆ ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದ ಬಿ. ಕೃಷ್ಣಪ್ಪ ಅವರದ್ದು ಕ್ರಾಂತಿಕಾರಕ ಜೀವನ ಎಂದು ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು. ಈಚೆಗೆ ಧಾರವಾಡ ಜಿಲ್ಲಾ ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕರ ಮತ್ತು ನೌಕರರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ದಲಿತ ಸಂಘರ್ಷ ಸಮಿತಿ ಸ್ಥಾಪಕ ಬಿ. ಕೃಷ್ಣಪ್ಪ ಅವರ 76ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಲಿತರ ಪರವಾಗಿ ಸುಮಾರು ಎರಡು ದಶಕಗಳ ಕಾಲ ಹೋರಾಡಿದ ಕೃಷ್ಣಪ್ಪ ಅವರು ಭೂರಹಿತ ಕೃಷಿ ಕಾರ್ಮಿಕರಿಗೆ 25 ಲಕ್ಷ ಎಕರೆ ಭೂಮಿಯನ್ನು ಸರ್ಕಾರದಿಂದ ಒದಗಿಸಿ ಕೃಷಿ ಕಾರ್ಮಿಕರಿಗೆ ಸ್ವಾಭಿಮಾನದ ಬದುಕು ನೀಡಿದರು ಎಂದು ಹೇಳಿದರು. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರನ್ನು ಕಾಯಂಗೊಳಿಸುವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಸ್ಮೃ ತಿ ಸಂಗೀತೋತ್ಸವ
ಧಾರವಾಡ: ಪರಿಸರ ದಿನ ಅಂಗವಾಗಿ ನಾಗರಿಕ ಪರಿಸರ ಸಮಿತಿ ಹಾಗೂ ಡಾ ಪುಟ್ಟರಾಜ ಗವಾಯಿ ಪ್ರತಿಷ್ಠಾನ ವತಿಯಿಂದ ಇಲ್ಲಿನ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಜೂ. 11ರಂದು ಪಂ. ಮುಂಜಿ ಅವರು ಸಂಗ್ರಹಿಸಿದ ಅಂಚೆ ಚೀಟಿಗಳ ಪ್ರದರ್ಶನ ಹಾಗೂ ಪಂ. ಪಂಚಾಕ್ಷರಿ ಗವಾಯಿಗಳ 69ನೇ ಸ್ಮೃತಿ ಸಂಗೀತೋತ್ಸವ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಅಂಚೆ ಚೀಟಿಗಳ ಪ್ರದರ್ಶನವನ್ನು ಡಾ ಸಂಜೀವ ಕುಲಕರ್ಣಿ ಉದ್ಘಾಟಿಸುವರು. ಪ್ರಕಾಶ ಉಡಕೇರಿ ಅಧ್ಯಕ್ಷತೆ ವಹಿಸುವರು. ಸಂಜೆ 6ಕ್ಕೆ ನಡೆಯುವ ಸ್ಮೃತಿ ಸಂಗೀತೋತ್ಸವದಲ್ಲಿ ಡಾ ರಾಚಯ್ಯ ಹಿರೇಮಠ ತಬಲಾ ವಾದನ ಮಾಡಲಿದ್ದಾರೆ. ಹರೀಶ ಹೆಗಡೆ ಗಾಯನ ಕಾರ್ಯಕ್ರಮ ನೀಡಲಿದ್ದಾರೆ. ಪ್ರತಿಷ್ಠಾನದ ಅಧ್ಯಕ್ಷ ಸದಾನಂದ ಕನವಳ್ಳಿ ಅಧ್ಯಕ್ಷತೆ ವಹಿಸುತ್ತಾರೆ.
ಮಹಾಂತಪ್ಪಗಳ ದತ್ತಿ ಉಪನ್ಯಾಸ
ಧಾರವಾಡ: ಜಿಲ್ಲಾ ಸಾಹಿತ್ಯ ಪರಿಷತ್ ಇಲ್ಲಿನ ಮುರಾಘಾಮಠದಲ್ಲಿ ಜೂ. 13ರಂದು ಸಂಜೆ 5.30ಕ್ಕೆ ಮುರಾಘಾಮಠದ ಮಹಾಂತಪ್ಪಗಳ ದತ್ತಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ. ಮುರಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಡಾ ವೀರಣ್ಣ ರಾಜೂರ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಶಾಸಕ ವಿನಯ ಕುಲಕರ್ಣಿ, ಮಹದೇವ ಹೊರಟ್ಟಿ ಭಾಗವಹಿಸಲಿದ್ದಾರೆ. ರಂಜಾನ್ ದರ್ಗಾ ವಿಶೇಷ ಉಪನ್ಯಾಸ ಮಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಮಹಿಳೆ ನಾಪತ್ತೆ
ಹುಬ್ಬಳ್ಳಿ: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಉಣಕಲ್ ಶ್ರೀನಗರ ನಿವಾಸಿ ಸುನೈನಾ ಅಲಿಯಾಸ ಪಾವನಾ ಸತ್ಯಬೋಧ ಕಟ್ಟಿ (33) ಎಂಬ ಮಹಿಳೆ ಕಾಣೆಯಾಗಿದ್ದಾಳೆ ಎಂದು ನವನಗರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಏಳು ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿರಿಸಿ ವಿಚ್ಛೇದಿತ ಪಡೆದಿದ್ದ ಸುನೈನಾ ಅವರು ತಮ್ಮ ತಾಯಿಯ ಮರಣದಿಂದ ಮಾನಸಿಕವಾಗಿ ವಿಚಲಿತರಾಗಿದ್ದರು. ಮಾನಸಿಕ ಅಸ್ವಸ್ಥತೆಗೆ ಚಿಕಿತ್ಸೆ ಪಡೆಯುತ್ತಿದ್ದಳು. ಈ ಕುರಿತು ಮಹಿಳೆಯ ಪತಿ ಸತ್ಯಬೋಧ ಕಟ್ಟಿ ಅವರು ದೂರು ನೀಡಿದ್ದಾರೆ.
ಮಹಿಳೆ ಕಾಣೆ: ದೂರು
ಹುಬ್ಬಳ್ಳಿ: ಸ್ಥಳೀಯ ಶ್ರೀನಗರದ ದರ್ಮಾಪುರಿ ಲೇಔಟ್ನಿಂದ ಮಹಿಳೆಯೊಬ್ಬರು ಕಾಣೆಯಾಗಿರುವ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುನೈನಾ (ಪಾವನಾ) ಸತ್ಯಬೋಧಕಟ್ಟಿ (33) ಎಂಬುವರೆ ಕಾಣೆಯಾಗಿರುವ ಮಹಿಳೆ. 5 ಫೂಟ್ 2 ಇಂಚು ಎತ್ತರವಿರುವ ಸುನೈನಾ, ದುಂಡು ಮುಖ, ಗೋದಿಗೆಂಪು ಮೈ ಬಣ್ಣ ಹೊಂದಿರುವ ಇವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ. ಕನ್ನಡ ಭಾಷೆ ಬಲ್ಲವಳಾದ ಈಕೆ ಮೈ ಮೇಲೆ ಚೂಡಿದಾರ ಧರಿಸಿದ್ದಾಳೆ. ಸುನೈನಾಳ ಬಗ್ಗೆ ಯಾರಿಗಾದರೂ ಸುಳಿವು ದೊರೆತಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ದೂ: (0836) 2233516 ಅಥವಾ ಪೊಲೀಸ್ ಕಂಟ್ರೋಲ್ ರೂಂ ದೂ: 2233555ಗೆ ಮಾಹಿತಿ ನೀಡುವಂತೆ ಕೋರಲಾಗಿದೆ.
ಪಾದಚಾರಿ ಸಾವು
ಹುಬ್ಬಳ್ಳಿ: ಸಾರಿಗೆ ಸಂಸ್ಥೆ ಬಸ್ ಹಾಯ್ದ ಪರಿಣಾಮ ಪಾದಚಾರಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಕುಂದಗೋಳ ಕ್ರಾಸ್ ಬಳಿ ಶನಿವಾರ ರಾತ್ರಿ ಸಂಭವಿಸಿದೆ. ಮೃತನನ್ನು ಬಿಹಾರ ಮೂಲದ ಬಿಂದು ಪಾಸ್ವಾನ್ (40) ಎಂದು ಗುರುತಿಸಲಾಗಿದ್ದು, ಈತ ವೃತ್ತಿಯಿಂದ ಹಮಾಲಿ ಕೆಲಸ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಶನಿವಾರ ರಾತ್ರಿ ರಸ್ತೆ ದಾಟುತ್ತಿರುವಾಗ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಈ ಕುರಿತಂತೆ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೊಬೈಲ್ ರಿಪೇರಿ: ಅರ್ಜಿ ಆಹ್ವಾನ
ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸಿಂಡ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಮೊಬೈಲ್ ಫೋನ್ ರಿಪೇರಿ ತರಬೇತಿಗೆ ಅರ್ಹ ನಿರುದ್ಯೋಗಿ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಉತ್ತರ ಕನ್ನಡ, ಧಾರವಾಡ ಮತ್ತು ಹುಬ್ಬಳ್ಳಿ ಭಾಗದ ನಿರುದ್ಯೋಗಿ ಯುವಕರು ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿ 18ರಿಂದ 45 ವಯಸ್ಸಿನವರಾಗಿರಬೇಕು. ಕನ್ನಡ ಓದಲು ಬರೆಯಲು ಬರಬೇಕು. ತರಬೇತಿಯು ಜೂನ್ 25ರಿಂದ ಜು. 24ರವರೆಗೆ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಂಡ್ಆರ್ಸೆಟಿ) ಕೈಗಾರಿಕಾ ವಸಾಹತು ಪ್ರದೇಶ, ಹೆಗಡೆ ರಸ್ತೆ ಕುಮಟಾ 581343 ಇಲ್ಲಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ 08386-220530ನ್ನು ಸಂಪರ್ಕಿಸಬಹುದು.
ಜುಲೈ 21ರಂದು ಎಂಬಿಎ, ಎಂಸಿಎ ಪ್ರವೇಶ ಪರೀಕ್ಷೆ
ಹುಬ್ಬಳ್ಳಿ: ಖಾಸಗಿ ಮಹಾವಿದ್ಯಾಲಯಗಳ ಮ್ಯಾನೇಜ್ಮೆಂಟ್ ಕೋಟಾದಡಿ ಸ್ನಾತಕೋತ್ತರ ವ್ಯವಹಾರ ಅಧ್ಯಯನ (ಎಂಬಿಎ) ಮತ್ತು ಸ್ನಾತಕೋತ್ತರ ಗಣಕಯಂತ್ರ ವಿಜ್ಞಾನ ಅಧ್ಯಯನ (ಎಂಸಿಎ) ಪ್ರವೇಶ ಪರೀಕ್ಷೆ ಜು. 21ರಂದು ನಡೆಯಲಿದೆ ಎಂದು ಐಬಿಎಂಆರ್ ಎಂಬಿಎ ಮಹಾವಿದ್ಯಾಲಯದ ಡೀನ್ ಮತ್ತು ಉತ್ತರ ಕರ್ನಾಟಕ ಖಾಸಗಿ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಗಳ ಸಂಘದ ಉಪಾಧ್ಯಕ್ಷ ಡಾ. ರಾಜೇಂದ್ರ ಮಾಳವದೆ ತಿಳಿಸಿದ್ದಾರೆ. ಅವರು ಈ ಕುರಿತು ಪ್ರಕಟಣೆ ನೀಡಿ, ಪರೀಕ್ಷೆಗೆ ಜು. 10ರೊಳಗೆ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಎಂಬಿಎ ಅಥವಾ ಎಂಸಿಎಗೆ ರು. 500 ಹಾಗೂ ಎಂಬಿಎ ಮತ್ತು ಎಂಸಿಎ ಎರಡೂ ಪರೀಕ್ಷೆ ಬರೆಯಲಿಚ್ಛಿಸುವವರು ರು. 600 ಮೊತ್ತದ ಡಿಮ್ಯಾಂಡ್ ಡ್ರಾಫ್ಟ್ನ್ನು ಕೆಮ್ಯಾಟ್-2013 ಹೆಸರಿನಲ್ಲಿ ಬೆಂಗಳೂರಲ್ಲಿ ಸಂದಾಯವಾಗುವಂತೆ ಪಡೆಯಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.