ಮತದಾರರ ವಿಶ್ವಾಸ ಉಳಿಸಿಕೊಳ್ಳುವೆ
ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 9
ಇಲ್ಲಿನ ಹಳಿಯಾಳ ರಸ್ತೆ ಬಳಿಯ ಆನಂದ ಕಲ್ಯಾಣಮಂಟಪದಲ್ಲಿ ಮತದಾರರಿಗೆ ಹಾಗೂ ಅಭಿಮಾನಿಗಳಿಗೆ ಶಾಸಕ ವಿನಯ ಕುಲಕರ್ಣಿ ಅವರು ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮ ಭಾನುವಾರ ಯಶಸ್ವಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿನಯ ಕುಲಕರ್ಣಿ, ಈ ಬಾರಿಯ ಚುನಾವಣೆಯಲ್ಲಿ ಮತದಾರರು ಅತ್ಯುತ್ತಮವಾಗಿ ಸ್ಪಂದಿಸುವ ಮೂಲಕ ಆಯ್ಕೆ ಮಾಡಿದ್ದಾರೆ. ಕ್ಷೇತ್ರದ ಗ್ರಾಮೀಣ ಪ್ರದೇಶದ ಸಾಕಷ್ಟು ಮತದಾರರೂ ಸ್ವ ಇಚ್ಛೆ ಹಾಗೂ ಸ್ವಂತ ಹಣದಲ್ಲಿ ಚುನಾವಣೆ ಮಾಡಿದ್ದಾರೆ. ಚುನಾವಣೆಯಲ್ಲಿ ಮತದಾರರೂ ಅನೇಕ ವಿಶ್ವಾಸ ಹಾಗೂ ಭರವಸೆಗಳನ್ನು ಇಟ್ಟುಕೊಂಡು ತಮ್ಮನ್ನು ಚುನಾಣೆಯಲ್ಲಿ ಆಯ್ಕೆ ಮಾಡಿದ್ದಾರೆ. ಅವರ ವಿಶ್ವಾಸವನ್ನು ಉಳಿಸಿಕೊಳ್ಳಲು ಶ್ರಮಿಸುವುದಾಗಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ಬಡಜನತೆಗಾಗಿ ಅನೇಕ ಯೋಜನೆಗಳನ್ನು ಘೋಷಣೆಗೊಳಿಸಿದ್ದಾರೆ. ಈ ಮೂಲಕ ಅವರೊಬ್ಬ ಕ್ರಿಯಾಶೀಲ ಮುಖ್ಯಮಂತ್ರಿ ಹಾಗೂ ಪ್ರಮಾಣ ವಚನ ಸ್ವೀಕರಿಸಿದ ಮರು ದಿನವೇ ಯೋಜನೆಗಳನ್ನು ಘೋಷಿಸಿದ ರಾಜ್ಯದ ಪ್ರಥಮ ಮುಖ್ಯಮಂತ್ರಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಅದರಂತೆ ತಾವುಗಳು ಮುಖ್ಯಮಂತ್ರಿಗಳ ಸಲಹೆ ಸೂಚನೆಗಳ ಮೂಲಕ ಯೋಜನೆಗಳನ್ನು ಸರಿಯಾಗಿ ಮುನ್ನಡೆಸಿಕೊಂಡು ಹೋಗಲು ಪ್ರಯತ್ನಿಸುತ್ತೇನೆ ಎಂದರು.
ಪ್ರಾಮಾಣಿಕ ಪ್ರಯತ್ನ: ಪ್ರಸ್ತುತ ಗ್ರಾಮೀಣ ಪ್ರದೇಶಗಳ ರಸ್ತೆಗಳು ಸುಧಾರಣೆಯಾಗಬೇಕಿದೆ. ಆದ್ದರಿಂದ ಎರಡ್ಮೂರು ತಿಂಗಳಲ್ಲಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಗ್ರಾಮೀಣ ಪ್ರದೇಶದ ರಸ್ತೆಗಳ ಅಗಲೀಕರಣ, ರೈತರು ಹೊಲಕ್ಕೆ ಹೋಗುವ ರಸ್ತೆಗಳನ್ನು ಸರಿಪಡಿಸುವ ಮತ್ತು ನವೀಕರಣಗೊಳಿಸುವ ಹಾಗೂ ಹಳ್ಳಿಗಳಿಗೆ ಹೋಗುವ ರಸ್ತೆಯಲ್ಲಿ ಇರುವ ಹಳ್ಳಗಳಿಗೆ ಸೇತುವೆಗಳನ್ನು ನಿರ್ಮಾಣ ಮಾಡುವ ಕಾಮಗಾರಿ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು. ಅಲ್ಲದೇ, ಮನೆ ಇಲ್ಲದ ಬಡ ಜನತೆಗೆ ಆಶ್ರಯ ಮನೆಗಳನ್ನು ನಿರ್ಮಾಣ ಮಾಡಿಕೊಡಲಾಗುವುದು. ಅದರಂತೆ ಧಾರವಾಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ವಾರ್ಡ್ಗಳ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಕ್ಷೇತ್ರ ಜನತೆ ಹೂಗುಚ್ಛ ನೀಡುವ ಮೂಲಕ ಶಾಸಕ ವಿನಯ ಕುಲಕರ್ಣಿ ಅವರನ್ನು ಅಭಿನಂದಿಸಿದರು. ಸಮಾರಂಭದಲ್ಲಿ ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ವಿಧಾನಪರಿಷತ್ ಸದಸ್ಯ ವೀರಣ್ಣ ಮತ್ತಿಕಟ್ಟಿ, ಮುಖಂಡರಾದ ಎಚ್.ಎಫ್. ಜಕ್ಕಪ್ಪನವರ, ಹನುಮವ್ವ ಬಿಂಗಿ, ಎಸ್.ಎಚ್. ಫಿರಜಾಧೆ, ಸುಭಾಸ ಶಿಂದೆ, ಬಾಪುಗೌಡ ಪಾಟೀಲ, ಪ್ರಭು ಕೇಶಗೊಂಡ, ಆನಂದ ಕೇಶಗೊಂಡ, ಮುಕ್ತಿಯಾರ ಪಠಾಣ, ರೇಣುಕಾ ಕಳ್ಳಿಮನಿ, ದೇವಕಿ ಯೋಗಾನಂದ, ಶಿವಶಂಕರ ಹಂಪಣ್ಣವರ, ಪಾರ್ಶ್ವನಾಥ ಪತ್ರಾವಳಿ, ನಿಜಾಮುದ್ಧಿನ ಶೇಖ್, ಮೀನಾಕ್ಷಿ ಸಂತೋಬಾ, ಬಸವರಾಜ ರೋಣದ, ಡಾ. ರಾಮನಗೌಡರ ಇದ್ದರು.