ಮಹಾರಾಷ್ಟ್ರಕ್ಕೆ ಬೆಳಗಾವಿ ಸೇರಬೇಕು ವಾದಕ್ಕೆ ಅರ್ಥವಿಲ್ಲ
ಧಾರವಾಡ: ಬೆಳಗಾವಿ ನಗರದ ಬಗ್ಗೆ ಇಲ್ಲವೇ ಆ ಜಿಲ್ಲೆಯ ಬಗ್ಗೆ ಇಲ್ಲಸಲ್ಲದ ಕಿತಾಪತಿ ಎಬ್ಬಿಸುತ್ತಿರುವ ಮರಾಠಿಗರ ವಾದಕ್ಕೆ ಕಿಂಚಿತ್ ಅರ್ಥವಿಲ್ಲ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಕಿಡಿಕಾರಿದ್ದಾರೆ.
ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡರಲ್ಲಿ ಎಂಇಎಸ್ ಗೆಲವು ಸಾಧಿಸಿದೆ. ಇದರಿಂದ ಬೆಳಗಾವಿ ಜಿಲ್ಲೆ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಅವರ ಹಾಸ್ಯಾಸ್ಪದ ಹೇಳಿಕೆಗೆ ಪಾಟೀಲ ಪುಟ್ಟಪ್ಪ ಸೋಮವಾರ ಪತ್ರಿಕಾ ಪ್ರಕಟಣೆ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬೈ ನಗರದ ದಾದರದಿಂದ ಒಬ್ಬ ಕನ್ನಡಿಗ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗಿ ಬರುತ್ತಿದ್ದು, ಹಾಗೆಂದ ಮಾತ್ರಕ್ಕೆ ದಾದರ ಕರ್ನಾಟಕಕ್ಕೆ ಬರಬೇಕೇನು ಎಂದು ಪ್ರಶ್ನಿಸಿರುವ ಅವರು, ಈಗ ಬಿಹಾರದಲ್ಲಿ ಜಮ್ಷಡ್ಪುರ ಇದೆ. ಅಲ್ಲಿ ಬಿಹಾರಿಗಳಲ್ಲದ ಜನರು ಅಧಿಕ ಸಂಖ್ಯೆಯಲ್ಲಿದ್ದಾರೆ ಮತ್ತು ಬಿಹಾರಿ ಅಲ್ಲದವನು ಬಿಹಾರ ವಿಧಾನಸಭೆಗೆ ಅಲ್ಲಿಂದ ಆಯ್ಕೆಯಾಗಿ ಬರುತ್ತಾನೆ. ಬಿಹಾರಿ ಅಲ್ಲದವನು ಆಯ್ಕೆಯಾಗಿ ಬರುತ್ತಾನೆ ಎಂದು ಜಮ್ಷಡ್ಪುರ ಬಿಹಾರ ಬಿಟ್ಟು ಹೋಗಲಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬರು ಸೋಲುತ್ತಾರೆ, ಒಬ್ಬರು ಗೆಲ್ಲುತ್ತಾರೆ. ಈ ಹಾಸ್ಯಾಸ್ಪದ ವಾದವನ್ನು ಮಹಾರಾಷ್ಟ್ರದವರು ನಿಲ್ಲಿಸಬೇಕೆಂದು ಪಾಪು ಅಸಮಾಧಾನ ವ್ಯಕ್ತಪಡಿಸಿದ್ದಾರೆ.