ಪರಿಸರ ಬಗ್ಗೆ ಮಕ್ಕಳಲ್ಲಿ ಜಾಗೃತಿ ಅವಶ್ಯ
ನರಗುಂದ: ಇಂದಿನ ಮಕ್ಕಳಿಗೆ ಪರಿಸರದ ಬಗ್ಗೆ ಮಾಹಿತಿ ನೀಡಿ ಅವರನ್ನು ಜಾಗೃತರನ್ನಾಗಿ ಮಾಡುವುದು ಅತ್ಯವಶ್ಯಕವಾಗಿದೆ. ಈಗಿನಿಂದಲೇ ಮಕ್ಕಳಲ್ಲಿ ಪರಿಸರ ಜ್ಞಾನ ಮೂಡಿಸಿದರೆ ಪರಿಸರ ಸಮೃದ್ಧವಾಗಿರಲು ಸಾಧ್ಯವಾಗುತ್ತದೆ ಎಂದು ಲೈನ್ಸ್ ಕಾಲೇಜಿನ ಪ್ರಾಚಾರ್ಯ ಎಸ್.ಜಿ. ಜಕ್ಕಲಿ ಹೇಳಿದರು.
ಈಚೆಗೆ ಅವರು ಪಟ್ಟಣದ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ಸಪ್ತಾಹ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂದು ಪರಿಸರವು ಸಂಪೂರ್ಣವಾಗಿ ಹಾಳಾಗುತ್ತಿರುವುದು ನೋವಿನ ಸಂಗತಿ. ಮನುಷ್ಯ ತನ್ನ ಸ್ವಾರ್ಥಕ್ಕೆ ಪರಿಸರವನ್ನು ನಾಶಮಾಡುವ ಮೂಲಕ ವಿನಾಶದತ್ತ ಸಾಗುತ್ತಿದ್ದಾನೆ. ಇದರಿಂದ ಇಂದು ವಾತಾವರಣದಲ್ಲಿ ಹಲವಾರು ಬದಲಾವಣೆಗಳಾಗುತ್ತಿರುವ ಹಿನ್ನೆಲೆಯಲ್ಲಿ ಸಮರ್ಪಕ ಮಳೆ ಕೊರತೆಯಿಂದಾಗಿ ಬರಗಾಲದ ಛಾಯೆ ಎಲ್ಲೆಡೆ ಆವರಿಸುತ್ತಿವೆ. ವಿವಿಧ ರೀತಿಯ ರೋಗಗಳು ಪ್ರಾರಂಭವಾಗಿದೆ. ಅದಕ್ಕೆ ನಾವು ಇಂದು ವಿದ್ಯಾರ್ಥಿಗಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರೆ ಮುಂದಿನ ದಿನಗಳಲ್ಲಿ ಪರಿಸರ ಉಳಿಯಲು ಸಹಕಾರಿಯಾಗುವುದು. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಕರು ತಪ್ಪದೆ ಅವರಿಗೆ ಪರಿಸರ ಜಾಗೃತಿ ಮೂಡಿಸುವಂತೆ ಕೋರಿದರು.
ವಸತಿ ಶಾಲೆಯ ಪ್ರಭಾರಿ ಪಾಚಾರ್ಯ ಎಂ.ಜಿ. ಅಲ್ಲಿಬಾಯಿ, ಪರಿಸರ ಸಂರಕ್ಷಣೆ ಪ್ರತಿಯೊಬ್ಬನ ಆದ್ಯ ಕರ್ತವ್ಯ. ಪ್ರತಿದಿನ ಪರಿಸರ ದಿನವಾದಾಗ ಪರಿಸರವನ್ನು ಸಂರಕ್ಷಿಸುವಲ್ಲಿ ಸಹಕಾರಿಯಾಗಲಿದೆ ಎಂದರು. ಶಿಕ್ಷಕಿ ಅಶ್ವಿನಿ ಹೂಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಶಿಕ್ಷಕ ಎಸ್.ಐ. ಬ್ಯಾಕೋಡ, ಯು.ಎಸ್. ಅವರಾಧಿ, ಎಸ್.ಎಸ್. ಮಾದರ, ಶಿವಲೀಲಾ ಮದಗುಣಕಿ, ಶಶಿಕಲಾ ಅಮ್ಮಗೋಳ ಇದ್ದರು. ಶಾರದಾ ಗುಡಸಲಿ ಸ್ವಾಗಿತಿಸಿದರು. ಶೋಭಾ ಗದುಗಿನ ನಿರೂಪಿಸಿದರು. ಅಶೋಕ ತಡಹಾಳ ವಂದಿಸಿದರು.