ಹರ್ಲಾಪುರಗೆ ಶಿಕ್ಷಣರತ್ನ ಪ್ರಶಸ್ತಿ
ಅಣ್ಣಿಗೇರಿ: ಪ್ರಾಚಾರ್ಯ ಎಸ್.ಎಸ್. ಹರ್ಲಾಪುರಗೆ ಶಿಕ್ಷಣರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜೂ. 27ರ ಸಂಜೆ 5ಕ್ಕೆ ಸುವರ್ಣ ಕರ್ನಾಟಕ ಕಲ್ಚರಲ್ ಅಕಾಡೆಮಿ (ರಿ) ತನ್ನ 10ನೇ ವಾರ್ಷಿಕೋತ್ಸವ ವೇಳೆ ಈ ಪ್ರಶಸ್ತಿ ನೀಡಿ ಗೌರವಿಸಲಿದೆ. ಅಣ್ಮಿಗೇರಿ ನಿಂಗಮ್ಮ ಎಸ್. ಹೂಗಾರ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎಸ್. ಹರ್ಲಾಪುರ ಅವರ ಶೈಕ್ಷಣಿಕ ಸೇವೆ, ಕ್ರಿಯಾಶೀಲತೆ, ರಚನಾತ್ಮಕ ಕೆಲಸ, ಕಾಲ ಬದ್ಧತೆ, ಹೋರಾಟ, ಜನಪರ ಕಾಳಜಿ ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಗಣ್ಯರು, ಸಚಿವರು, ನಟರು, ಸ್ವಾಮೀಜಿಗಳು ಭಾಗವಹಿಸುವರು.
--
16ರಂದು ಸಂಘದ ಉದ್ಘಾಟನೆ ಕಾರ್ಯಕ್ರಮ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಸಮಗ್ರ ಅಭಿವೃದ್ಧಿ ಸಂಘದ ಉದ್ಘಾಟನೆ ಜೂ. 16ರ ಸಂಜೆ 4ಕ್ಕೆ ಧಾರವಾಡದ ನಾಡೋಜ ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ನಡೆಯಲಿದೆ. ಕಾರ್ಮಿಕ ಮುಖಂಡ, ಪುರೋಗಾಮಿ ಚಿಂತಕ ಡಾ. ಕೆ.ಎಸ್. ಶರ್ಮಾ ಅಧ್ಯಕ್ಷತೆ ವಹಿಸುವರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಾರ್ತಾ ಮತ್ತು ಪ್ರಚಾರ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಶಿ, ಮಾಜಿ ಸಚಿವ ಬಸವರಾಜ ಹೊರಟ್ಟಿ ಸೇರಿದಂತೆ ಇನ್ನಿತರ ಗಣ್ಯರು ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.