ಅಭಯಚಂದ್ರ ಜೈನ್ ಖಾತೆ ಬದಲಿಸಿ: ಗುಣಧರನಂದಿ ಮಹಾರಾಜ
ಹುಬ್ಬಳ್ಳಿ: ಸಚಿವ ಅಭಯಚಂದ್ರ ಜೈನ್ ಅವರಿಗೆ ಮೀನುಗಾರಿಕೆ ಖಾತೆ ನೀಡಿರುವುದಕ್ಕೆ ಜೈನ ಮುನಿಗಳು ಅಪಸ್ವರವೆತ್ತಿದ್ದಾರೆ. ಜೈನ್ ಅವರಿಗೆ ನೀಡಿರುವ ಖಾತೆ ಬದಲಾಯಿಸಬೇಕೆಂದು ಮುಖ್ಯಮಂತ್ರಿಯನ್ನು ಒತ್ತಾಯಿಸುವ ನಿಟ್ಟಿನಲ್ಲಿ ರಾಜ್ಯದ ಜೈನ ಮುನಿಗಳು ಜೂ.30ರಂದು ವರೂರಿನಲ್ಲಿ ಸಭೆ ಸೇರಿಲಿದ್ದಾರೆಂದು ಜೈನ ಮುನಿ ಗುಣಧರನಂದಿ ಮಹಾರಾಜರು ತಿಳಿಸಿದರು.
ವರೂರನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, 'ಜೈನ ಸಮಾಜದವರು ಅಹಿಂಸಾವಾದಿಗಳು. ಹೀಗಿರುವಾಗ ಜೈನ್ ಅವರಿಗೆ ಮೀನುಗಾರಿಕೆ ಖಾತೆ ನೀಡಿದರೆ ಅವರು ಆ ಖಾತೆಯನ್ನು ನಿಭಾಯಿಸುವುದು ಅಸಾಧ್ಯ. ಆ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವೇ?' ಎಂದು ಪ್ರಶ್ನಿಸಿದರು. ಕಳೆದ ಮೇ 26ರಂದು ಕುಂತುಗಿರಿಯಲ್ಲಿ ಸಭೆ ಸೇರಿದ್ದ 150ಕ್ಕೂ ಹೆಚ್ಚು ಜೈನ ಮುನಿಗಳು ಅಭಯಚಂದ್ರ ಅವರಿಗೆ ಮೀನುಗಾರಿಕೆ ಖಾತೆ ನೀಡಿರುವ ಬಗ್ಗೆ ಸಾರ್ವತ್ರಿಕವಾಗಿ ಅಸಮಾಧಾನ ವ್ಯಕ್ತಪಡಿಸಿದರಲ್ಲದೇ ಸರ್ಕಾರದ ಕ್ರಮವನ್ನು ಖಂಡಿಸಿದ್ದರು. ಆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅಭಯಚಂದ್ರ ಅವರಿಗೆ ನೀಡಿರುವ ಖಾತೆ ಬದಲಾಯಿಸಬೇಕೆಂದು ಮನವಿ ಮಾಡಲಾಗಿತ್ತು. ಆದರೆ ಸಿಎಂ ಯಾವುದೇ ನಿರ್ಧಾರ ಪ್ರಕಟಿಸದಿರುವ ಹಿನ್ನೆಲೆಯಲ್ಲಿ ಜೂ. 30 ರಂದು ಪುನಾ ಜೈನ ಮುನಿಗಳು ಹಾಗೂ ಸಮಾಜದ ಮುಖಂಡರು ಸಭೆ ಸೇರಿ ಮುಖ್ಯಮಂತ್ರಿಗಳ ಬಳಿ ನಿಯೋಗ ಕೊಂಡೊಯ್ಯುವ ಬಗ್ಗೆ ನಿರ್ಧರಿಸಲಾಗುವುದು ಎಂದರು.