ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ಧಾರವಾಡ: ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ

Vishwanath S
Updated On : 18 Jun 2013, 11:03 am

ಧಾರವಾಡ:  ಸಾರಿಗೆ ಬಸ್ ದರ, ಪೆಟ್ರೋಲ್ ದರ ಏರಿಕೆ ಖಂಡಿಸಿ ರಾಜ್ಯಾದ್ಯಂತ ಧರಣಿ, ಪ್ರತಿಭಟನೆಗಳು ನಡೆಯುತ್ತಿದ್ದು ಇದಕ್ಕೆ ಧಾರವಾಡ ಹೊರತಾಗಿಲ್ಲ.
ಸೋಮವಾರ ನಗರದಲ್ಲಿ ಬಿಜೆಪಿ ಮುಖಂಡರು ಸೇರಿದಂತೆ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ಹಾಗೂ ಭಾರತ ಕಮ್ಯೂನಿಷ್ಟ ಪಕ್ಷದ (ಮಾರ್ಕ್ಸ್‌ಣವಾದಿ) ಕಾರ್ಯಕರ್ತರು ಸಹ ಬೆಲೆ ಏರಿಕೆ ವಿರೋಧಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬಿಜೆಪಿ ಜನಪರ ಯೋಜನೆ ಜಾರಿ ಮಾಡುವುದಾಗಿ ಸುಳ್ಳು ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ಸರ್ಕಾರ ಸುಗ್ರಿವಾಜ್ಞೆ ರೀತಿಯಲ್ಲಿ ಬೆಲೆಗಳನ್ನು ಹೆಚ್ಚಳ ಮಾಡುತ್ತಿದೆ. ಈ ರೀತಿಯ ನಿರ್ಧಾರದಿಂದ ಶ್ರೀಸಾಮಾನ್ಯರ ಬದುಕಿಗೆ ತೀವ್ರ ತೊಂದರೆಯಾಗುತ್ತಿದೆ. ಪೆಟ್ರೋಲ್ ಬೆಲೆ ಮತ್ತು ಬಸ್ ದರಗಳನ್ನು ಏರಿಸುವಾಗ ಯಾವುದೇ ಚರ್ಚೆ ಮಾಡದೇ ಜನರಿಗೆ ಅನ್ಯಾಯ ಮಾಡುತ್ತಿದೆ. ತಕ್ಷಣ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿ ಬೆಲೆ ಏರಿಕೆ ಕ್ರಮವನ್ನು ಕೂಡಲೇ ಕೈಬಿಡುವಂತೆ ಮಾಡಬೇಕು ಎಂದು ಒತ್ತಾಯಿಸಿದರು. ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕಿ ಸೀಮಾ ಮಸೂತಿ, ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಸಂಜಯ ಕಪಟಕರ, ಶಂಕರ ಶೇಳಕೆ, ಶಿವಣ್ಣ ಬಡವಣ್ಣವರ, ಜಿಪಂ ಸದಸ್ಯೆ ಪ್ರೇಮಾ ದೇಸಾಯಿ, ತಾಪಂ ಅಧ್ಯಕ್ಷೆ ಸುಮಂಗಲಾ ಕೌದೆಣ್ಣವರ, ಈರೇಶ ಅಂಚಟಗೇರಿ, ಈರಣ್ಣ ಹಪ್ಪಳಿ, ಚಿದಂಬರ ನಾಡಗೌಡ, ಭೀಮಪ್ಪ ಕಾಸಾಯಿ, ಅಶೋಕ ನಾವಳ್ಳಿ, ಸಹದೇವ ಹಾವೇರಿ, ಮಲ್ಲನಗೌಡ ಪಾಟೀಲ, ಬಸಲಿಂಗಯ್ಯ ಹಿರೇಮಠ, ನಾಗಪ್ಪ ತಿರ್ಲಾಪೂರ ಇದ್ದರು.
ಅಳ್ನಾವರ: ತಾಲೂಕಿನ ಅಳ್ನಾವರ ಪಟ್ಟಣ ಪಂಚಾಯ್ತಿ ಎದುರು ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಮುಖಂಡರಾದ ಎಸ್.ಆರ್. ಅಂಬಡಗಟ್ಟಿ, ನಾರಾಯಣ ಮೋರೆ, ಎಂ.ಎಸ್. ಹಿರೇಮಠ, ಜಯವಂತ ವಾಗ್ಮೋಡೆ, ಮಲ್ಲನಗೌಡ ಪಾಟೀಲ, ಶಿವಾಜಿ ಡೊಳ್ಳಿನ ಪ್ರತಿಭಟನೆ ನಡೆಸಿ ಪಟ್ಟಣ ಪಂಚಾಯ್ತಿ ಅಧಿಕಾರಿ ಸರೋಜಾ ಪೂಜಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಎಸ್‌ಯುಸಿಐ: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಸವಳಿದ ಬಡ ಜನತೆಯ ಮೇಲೆ ಕಾಂಗ್ರೆಸ್ ಸರ್ಕಾರವು ಭಾರೀ ಪ್ರಮಾಣದಲ್ಲಿ ಬಸ್ ಪ್ರಯಾಣ ದರ ಏರಿಸಿ ಬರೆ ಎಳೆದಿರುವುದನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ಕಾರ್ಯಕರ್ತರು ಧಾರವಾಡದ ಹಳೆ ಬಸ್ ನಿಲ್ದಾಣದಲ್ಲಿ ಪ್ರತಿಭಟಿಸಿದರು. ಡೀಸೆಲ್ ದರ ಏರಿಕೆ ಹಾಗೂ ನಿರ್ವಹಣಾ ವೆಚ್ಚ ಹೆಚ್ಚಳದ ಕಾರಣ ನೀಡಿ ಪ್ರಯಾಣ ದರ ಏರಿಸಿರುವುದು ಅತ್ಯಂತ ಅಸಮರ್ಥನೀಯ. ಸರ್ಕಾರವು ಸಾರಿಗೆ ಸಂಸ್ಥೆಗಳ ಲೆಕ್ಕ ಪತ್ರವನ್ನು ಸಾರ್ವಜನಿಕವಾಗಿ ತೆರೆದಿಡಬೇಕು. ಒಂದು ವೇಳೆ ಅದಾಯದಲ್ಲಿ ಕೊರತೆವುಂಟಾದರೆ ಬಸ್ ಪ್ರಯಾಣವು ಅಗತ್ಯ ಸೇವೆಯಾಗಿರುವುದರಿಂದ ಸರ್ಕಾರವು ಸಹಾಯಧನ ನೀಡಿ ಭರಿಸಬೇಕೇ ಹೊರತು ಅದನ್ನು ಸಾರ್ವಜನಿಕರ ಹೆಗಲಿಗೆ ವರ್ಗಾಯಿಸಬಾರದು ಎಂದು ಪಕ್ಷದ ಜಿಲ್ಲಾ ಸಂಘಟನಾ ಸಮಿತಿ ಸದಸ್ಯ ಎಚ್.ಜಿ. ದೇಸಾಯಿ ಒತ್ತಾಯಿಸಿದರು. ಗಂಗಾಧರ ಬಡಿಗೇರ, ಲಕ್ಷ್ಮಣ ಜಡಗನ್ನವರ ಇದ್ದರು.
ಭಾರತ ಕಮ್ಯೂನಿಷ್ಟ: ರಾಜ್ಯ ಸಾರಿಗೆ ಸಂಸ್ಥೆ ಬಸ್ ಪ್ರಯಾಣ ದರ ಏರಿಕೆ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಭಾರತ ಕಮ್ಯೂನಿಷ್ಟ ಪಕ್ಷದ (ಮಾರ್ಕ್ಸ್‌ವಾದಿ) ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಕಳೆದ ಮೂರು ನಾಲ್ಕು ವರ್ಷದಿಂದ ರಾಜ್ಯದಲ್ಲಿ ಬರಗಾಲ ಬಿದ್ದಿದ್ದು, ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಯಾಣ ದರ ಏರಿಕೆ ಜನರ ಮೇಲೆ ಹೊರೆಯಾಗಿದ್ದು, ಜನಪರವಾದ ಸರ್ಕಾರ ಜನರ ವಿರೋಧಿ ಕ್ರಮಗಳನ್ನು ಕೈಗೊಳ್ಳಬಾರದು ಎಂದು ದೂರಿದರು. ಹಿಂದಿನ ಬಿಜೆಪಿ ಸರ್ಕಾರ ಪ್ರಯಾಣದ ದರ ಮತ್ತು ಪೆಟ್ರೋಲ್ ದರಗಳನ್ನು ಏರಿಸಿದಾಗಲೆಲ್ಲ ಕಾಂಗ್ರೆಸ್ ಸರ್ಕಾರ ಬೀದಿಗಿಳಿದು ಹೋರಾಟ ನಡೆಸುತ್ತಿತ್ತು. ಆದರೆ, ಇಂದು ರಾಜ್ಯದಲ್ಲಿ ಇರುವ ಕಾಂಗ್ರೆಸ್ ಸರ್ಕಾರವೇ ಜನವಿರೋಧಿ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಬಿಜೆಪಿ ಸರ್ಕಾರಕ್ಕಿಂತ ಭಿನ್ನವಲ್ಲ ಎಂಬುದನ್ನು ಜನತೆಗೆ ಪ್ರದರ್ಶಿಸುತ್ತಿದೆ. ಇದನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪಕ್ಷದ ಬಿ.ಎಸ್. ಸೊಪ್ಪಿನ, ಶಿವಯೋಗಿ ಪ್ಯಾಟಿಶೆಟ್ಟರ, ಮಹೇಶ ಪತ್ತಾರ, ಆರ್.ಎಚ್. ಆಯಿ, ಬಿ.ಎನ್. ಪೂಜಾರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement