ರೋಗಿಗಳಿಗೆ ಸಮರ್ಪಕ ಸೇವೆ ನೀಡಿ
ಹುಬ್ಬಳ್ಳಿ: ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುವಂತೆ ಕಿಮ್ಸ್ನಲ್ಲಿ ಎಲ್ಲ ಅತ್ಯಾಧುನಿಕ ಸೌಲಭ್ಯ ಒದಗಿಸುವ ಮೂಲಕ ರೋಗಿಗಳಿಗೆ ಸಮರ್ಪಕ ಸೇವೆ ನೀಡಬೇಕು ಎಂದು ಸಮತಾ ಸೇನಾ ಆಗ್ರಹಿಸಿದೆ. ಕಿಮ್ಸ್ ಸುಧಾರಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ವಹಿಸಿರುವ ಮುತುವರ್ಜಿ ಸ್ವಾಗತಿಸಿರುವ ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ, ಕರ್ತವ್ಯದ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಕಿಮ್ಸ್ ವೈದ್ಯರ ನಡವಳಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ರೋಗ ನಿವಾರಣೆ ಮಾಡಬೇಕಾದ ಕಿಮ್ಸ್ನಲ್ಲಿ ಹೆಚ್ಚುತ್ತಿರುವ ಗಲೀಜಿನಿಂದಾಗಿ ಅಲ್ಲಿಯ ರೋಗಿಗಳಿಗೆ ಮತ್ತಷ್ಟು ರೋಗಗಳು ತಗಲುವ ಸಾಧ್ಯತೆ ಇದೆ. ಇಲ್ಲಿಯ ವೈದ್ಯರು ಹೊರಗಿನ ಔಷಧಿ ಅಂಗಡಿಗಳೊಂದಿಗೆ ವ್ಯವಹಾರ ಇಟ್ಟುಕೊಂಡಿರುವ ಶಂಕೆ ಇದೆ ಎಂದು ಉಳ್ಳಿಕಾಶಿ ಆರೋಪಿಸಿದ್ದಾರೆ.ಕಿಮ್ಸ್ನಲ್ಲಿ ಅತ್ಯಾಧುನಿಕ ಸೌಲಭ್ಯ ಅಳವಡಿಕೆಗೆ ಸರ್ಕಾರ ಈಗಾಗಲೇ ಸಾಕಷ್ಟು ಅನುದಾನ ನೀಡಿದೆ. ಮತ್ತಷ್ಟು ಅನುದಾನ ಪಡೆದುಕೊಂಡು ಕಿಮ್ಸ್ನ್ನು ಎಲ್ಲ ರೀತಿಯಿಂದ ಅಭಿವೃದ್ಧಿಪಡಿಸಬೇಕು ಎಂದು ಅಶೋಕ ಕಾಶೆಪ್ಪನವರ, ಸೋಮಶೇಖರ ಚಲವಾದಿ, ಮಂಜುನಾಥ ಸಣ್ಣಕ್ಕಿ, ಹನಮಂತ ತಳವಾರ, ದೇವೇಂದ್ರಪ್ಪ ಇಟಗಿ, ದೃವ ಗಾಮನಗಟ್ಟಿ ಮತ್ತಿತರರು ಆಗ್ರಹಿಸಿದ್ದಾರೆ.