23ರಂದು ವಿಜ್ಞಾನಿ ಭೂಸನೂರಮಠ ಅಭಿನಂದನಾ ಸಮಾರಂಭ
ಕನ್ನಡಪ್ರಭ ವಾರ್ತೆ, ಧಾರವಾಡ, ಜೂ. 18
ಹಿರಿಯ ವಿಜ್ಞಾನಿ, ಸಾಹಿತಿ, ಚಿಂತಕ ಡಾ. ರಾಜಶೇಖರ ಭೂಸನೂರಮಠ ಅವರಿಗೆ 75 ವಸಂತಗಳು ಪೂರ್ಣಗೊಂಡ ಸಂದರ್ಭದಲ್ಲಿ ಜೂ. 23ರ ಬೆಳಗ್ಗೆ 10ಕ್ಕೆ ಇಲ್ಲಿನ ಕರ್ನಾಟಕ ಕಾಲೇಜು ಆವರಣದಲ್ಲಿರುವ ಸೃಜನಾ ರಂಗ ಮಂದಿರದಲ್ಲಿ ಅಭಿನಂದನಾ ಸಮಾರಂಭ ಜರುಗಲಿದೆ.
ಅಭಿನಂದನಾ ಸಮಿತಿಯ ಕಾರ್ಯಾಧ್ಯಕ್ಷ ಡಾ. ಎಸ್.ಎಂ. ವೃಷಭೇಂದ್ರಸ್ವಾಮಿ, ಹಿರಿಯ ಸಂಶೋಧಕ ಡಾ. ಸಂಗಮೇಶ ಸವದತ್ತಿಮಠ ಹಾಗೂ ಸಮಿತಿಯ ಸಂಯೋಜಕ ಶಿವಶಂಕರ ಹಿರೇಮಠ ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಡಾ. ರಾಜಶೇಖರ ಭೂಸನೂರಮಠ ಅವರು ತಮ್ಮ ಬೋಧನೆಯೊಂದಿಗೆ ಕನ್ನಡದಲ್ಲಿ ವೈಜ್ಞಾನಿಕ ಕಥಾ ಸಾಹಿತ್ಯದ ಮೂಲಕ ಅನೇಕ ಮೌಲಿಕ ಕೃತಿಗಳನ್ನು ಕನ್ನಡಿಗರಿಗೆ ಪರಿಚಯಿಸಿದ್ದಾರೆ. ಪ್ರಾಚಾರ್ಯರ ಹುದ್ದೆಯಿಂದ ನಿವೃತ್ತರಾದ ನಂತರ ವೈಭವಿ ಜ್ಞಾನ ಮಂದಿರ ಸಂಸ್ಥೆ ಸ್ಥಾಪಿಸಿ ಆರೋಗ್ಯ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ತಮ್ಮ ಅಮೂಲ್ಯ ಸೇವೆಯನ್ನು ಮುಂದುವರೆಸಿದ್ದಾರೆ. ಅಖಿಲ ಭಾರತ ವೈಜ್ಞಾನಿಕ ಕಥಾ ರಚನಾ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಹಾಗೂ ಆಂಗ್ಲ ಭಾಷೆಯಲ್ಲಿ ಒಟ್ಟು 100ಕ್ಕೂ ಹೆಚ್ಚು ಕೃತಿಗಳು ಇವರಿಂದ ರಚನೆಯಾಗಿವೆ ಎಂದವರು ಹೇಳಿದರು. ಹೊಸಪೇಟೆಯ ಕೊಟ್ಟೂರು ಸ್ವಾಮಿ ಸಂಸ್ಥಾನಮಠದ ಶ್ರೀಜಗದ್ಗುರು ಸಂಗನಬಸವ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗುವ ಈ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪ ವಹಿಸುವರು. ಕವಿ, ನಾಡೋಜ ಡಾ. ಚನ್ನವೀರ ಕಣವಿ ಆಶಯ ನುಡಿ ಹೇಳುವರು.
ಅಭಿನಂದನ ಗ್ರಂಥ: ಡಾ. ರಾಜಶೇಖರ ಭೂಸನೂರಮಠ ಅವರ ಬದುಕು-ಬರಹ-ಸಾಧನೆಯನ್ನು ಒಳಗೊಂಡ ವಿಭಿನ್ನ ಲೇಖನಗಳ ವೈಭವಿ ಅಭಿನಂದನ ಗ್ರಂಥವನ್ನು ಹಿರಿಯ ಭೌತವಿಜ್ಞಾನಿ ಹಾಗೂ ಮಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ. ಎಂ.ಐ. ಸವದತ್ತಿ ಬಿಡುಗಡೆಗೊಳಿಸುವರು. ಅವರು ಬರೆದ ಹೊಸ ಕೃತಿಗಳನ್ನು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಬಿಡುಗಡೆ ಮಾಡುವರು. ಹಿರಿಯ ವಿದ್ವಾಂಸ ಡಾ. ಎಸ್.ಎಂ. ವೃಷಭೇಂದ್ರಸ್ವಾಮಿ ಅಭಿನಂದನ ಪರ ಮಾತನಾಡುವರು. ವೈಭವಿ ಅಭಿನಂದನ ಗ್ರಂಥದ ಸಂಪಾದಕ, ಹಿರಿಯ ಭಾಷಾ ವಿಜ್ಞಾನಿ ಡಾ. ಸಂಗಮೇಶ ಸವದತ್ತಿಮಠ ಕೃತಿ ಕುರಿತು ಮಾತನಾಡುವರು. ಈ ಸಂದರ್ಭದಲ್ಲಿ ಭೂಸನೂರಮಠ ಅವರು ಬರೆದ ಎಲ್ಲ ಕೃತಿಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಲಿದೆ ಎಂದರು.
ವಿಜ್ಞಾನ ಕಥಾ ರಚನಾ ಕಮ್ಮಟ: ಕನ್ನಡದ ವಿಜ್ಞಾನ ಕಥಾ ಸಾಹಿತ್ಯದ ಜನಕರಾದ ರಾಭೂ ಹೆಸರಿನಲ್ಲಿ ಪ್ರತೀ ವರ್ಷವೂ ವಿಜ್ಞಾನ ಕಥಾ ರಚನಾ ಕಮ್ಮಟವನ್ನು ಧಾರವಾಡದಲ್ಲಿ ಸಂಘಟಿಸುವುದು ಹಾಗೂ ಭೂಸನೂರಮಠ ಅವರು ಪ್ರತಿಷ್ಠಾಪಿಸಿರುವ ವೈಭವಿ ಜ್ಞಾನ ಮಂದಿರವನ್ನು ಸುವ್ಯವಸ್ಥಿತವಾಗಿ ಮುನ್ನಡೆಸುವಲ್ಲಿ ಜನತೆ ಸಹಾಯ-ಸಹಕಾರ ನೀಡಬೇಕೆಂದು ಸಮಿತಿ ವಿನಂತಿಸುತ್ತದೆ ಎಂದು ಡಾ. ಎಸ್.ಎಂ. ವೃಷಭೇಂದ್ರಸ್ವಾಮಿ ಹೇಳಿದರು. ರಾಭೂ ಅಭಿನಂದನಾ ಸಮಿತಿ ಸದಸ್ಯರಾದ ಕವಿ ಚನ್ನಪ್ಪ ಅಂಗಡಿ, ಜಾನಪದ ಗಾಯಕಿ ವಿಶ್ವೇಶ್ವರಿ ಹಿರೇಮಠ, ಜೀವನ ಶಿಕ್ಷಣ ಮಾಸಪತ್ರಿಕೆ ಸಹ ಸಂಪಾದಕ ಗುರುಮೂರ್ತಿ ಯರಗಂಬಳಿಮಠ, ಕಾಶಿನಾಥ ಭೂಸನೂರಮಠ ಸುದ್ದಿಗೋಷ್ಠಿಯಲ್ಲಿ ಇದ್ದರು.