ಶ್ರಮದಿಂದ ಯಶಸ್ವಿ ಕೈಗಾರಿಕೋದ್ಯಮಿಯಾಗಲು ಸಾಧ್ಯ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 18
ಕೈಗಾರಿಕೋದ್ಯಮ ಅಂದುಕೊಂಡಷ್ಟು ಸುಲಭವಲ್ಲ. ಈ ಕ್ಷೇತ್ರದಲ್ಲಿ ಎದುರಾಗುವ ಅಡೆತಡೆಗಳು ಸಾಕಷ್ಟು. ಎದೆಗುಂದದೇ ಮುನ್ನುಗ್ಗಿ ಎಲ್ಲ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಮಾತ್ರ ಯಶಸ್ವಿ ಉದ್ಯಮಿಯಾಗಲು ಸಾಧ್ಯ ಎಂದು ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಮಾಲತೇಶ ಜೀವಣ್ಣವರ ಹೇಳಿದರು.
ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ 'ಕಲ್ಪತರು ಸ್ಮಾರ್ಟ್ ಕೋಟಿಂಗ್' ಕೈಗಾರಿಕೆಯನ್ನು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಮಸ್ಯೆಗಳ ಮುಂದೆ ನಾವೆಂದೂ ಕುಬ್ಜರಾಗಬಾರದು ಬದಲಿಗೆ ಸಮಸ್ಯೆಯನ್ನು ಕುಬ್ಜವಾಗಿಸಬೇಕು. ಯಾರೂ ಶ್ರಮ ಪಡದೇ ಯಶಸ್ವಿ ಉದ್ಯಮಿಗಳಾಗಿಲ್ಲ. ಅವಿರತ ಪರಿಶ್ರಮ ಹಾಗೂ ಎದುರಾಗುವ ಸಮಸ್ಯೆಗಳಿಗೆ ಉತ್ತರ ಕಂಡುಕೊಂಡವರು ಮಾತ್ರ ಯಶಸ್ಸು ಕಾಣಲು ಸಾಧ್ಯ. ಕೈಗಾರಿಕೆಯನ್ನು ಹೆತ್ತ ಮಗುವಿನಂತೆ ಪ್ರೀತಿಯಿಂದ ಬೆಳೆಸಿದರೆ ಅದು ನಮ್ಮ ವಂಶವನ್ನೇ ಪೋಷಿಸುತ್ತದೆ ಎಂದರು.
ವಾಣಿಜ್ಯ ತೆರಿಗೆ ಇಲಾಖೆಯ ಉಪಆಯುಕ್ತ ಜಿ.ಬಿ. ಗೌಡಪ್ಪಗೋಳ ಮಾತನಾಡಿ, ಕೈಗಾರಿಕೆ ಸ್ಥಾಪನೆ ಮಾಡುವುದು ಸುಲಭದ ಕೆಲಸ. ಆದರೆ, ಅದನ್ನು ನಡೆಸಿಕೊಂಡು ಹೋಗುವುದು ಅಷ್ಟು ಸರಳವಲ್ಲ. ಕೈಗಾರಿಕೆಯಲ್ಲಿ ಉತ್ಪಾದನೆಯಾಗುವ ಉತ್ಪನ್ನದ ಗುಣಮಟ್ಟ ಕಾಯ್ದುಕೊಳ್ಳುವುದು ಅತ್ಯಂತ ಪ್ರಮುಖ ಸಂಗತಿ. ರವಿ ಹಾಗೂ ಸಂಜೀವ ಹುಲಗಿಯವರು ಉತ್ತರ ಕರ್ನಾಟಕದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಫೌಡರ್ ಕೋಟಿಂಗ್ ಕೈಗಾರಿಕೆಯನ್ನು ಆರಂಭಿಸಿರುವುದು ಪ್ರಶಂಸನೀಯ ಎಂದರು.
ಇಂಡಿಯನ್ ಓವರ್ಸಿಸ್ ಬ್ಯಾಂಕ್ನ ಸ್ಥಾನಿಕ ವ್ಯವಸ್ಥಾಪಕ ಮಂಜುನಾಥನ್, ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇವೆ. ಕೈಗಾರಿಕೋದ್ಯಮಿಗಳು ಕಾಲಕ್ಕೆ ತಕ್ಕಂತೆ ಹೊಸ ಬಗೆಯ ಉಪಕರಣಗಳನ್ನು ಬಳಸಬೇಕು. ತನ್ಮೂಲಕ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಗೂ ಹೊಸ ನಮೂನೆಯ ಉತ್ಪನ್ನ ನೀಡಲು ಮುಂದಾಗಬೇಕೆಂದು ಹೇಳಿದರು. ದೇವಕಿ ಯೋಗಾನಂದ, ಗ್ರಾಹಕರಿಗೆ ಸಕಾಲಕ್ಕೆ ಉತ್ಪನ್ನ ಪೂರೈಸುವ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವುದು ಕೈಗಾರಿಕೋದ್ಯಮಿಯ ಮುಖ್ಯ ಜವಾಬ್ದಾರಿ. ಈ ಎರಡು ಸೇವೆ ಸರಿಯಾಗಿದ್ದಲ್ಲಿ ಉದ್ಯಮ ಯಶಸ್ಸು ಕಾಣಲು ಸಾಧ್ಯ ಎಂದರು.
ರಾಜಾ ದೇಸಾಯಿ ಮಾತನಾಡಿ, ಉತ್ತರ ಕರ್ನಾಟಕದವರು ಫೌಡರ್ ಕೋಟಿಂಗ್ಗಾಗಿ ಬೆಂಗಳೂರು, ಗೋವಾ ಅಲೆಯಬೇಕಿತ್ತು. ಆದರೀಗ ಹುಬ್ಬಳ್ಳಿಯಲ್ಲಿಯೇ ಈ ಕೈಗಾರಿಕೆಯನ್ನು ಹುಲಗಿ ಸಹೋದರರು ಆರಂಭಿಸಿರುವುದು ಈ ಭಾಗದವರಿಗೆ ಅನುಕೂಲ ಕಲ್ಪಿಸಿಕೊಟ್ಟಿದೆ. ಮಂತ್ರಾಲಯ ಮಠದ ಆಪ್ತ ಕಾರ್ಯದರ್ಶಿ ರಾಜಾ ರಾಜಗೋಪಾಲಾಚಾರ್ಯರು ಆಶೀರ್ವಚನ ನೀಡಿ, ಹುಲಗಿ ಸಹೋದರರು ಜೀವನದಲ್ಲಿ ಸಾಕಷ್ಟು ಸವಾಲು ಎದುರಿಸಿದರು. ಗುರುರಾಯರಲ್ಲಿದ್ದ ಭಕ್ತಿ, ಸತ್ಯ, ಪ್ರಾಮಾಣಿಕ ಕಾಯಕ ಅವರಿಗೆ ಶ್ರೀರಕ್ಷೆ ನೀಡಿತು. ಹುಬ್ಬಳ್ಳಿಯ ರಾಯರ ಮಠದ ಭವನ ನಿರ್ಮಾಣವಾಗುವಲ್ಲಿ ಹುಲಗಿ ಸಹೋದರರ ಶ್ರಮ ಸ್ಮರಣೀಯ ಎಂದರು.
ಕೈಗಾರಿಕೋದ್ಯಮಿ ನಿಲೇಶ ಹೊನ್ನಳ್ಳಿ, ಶಂಕರಮೂರ್ತಿ, ವಿ.ಎಂ. ದೇಶಪಾಂಡೆ, ರವಿ ಹುಲಗಿ, ಸಂಜೀವ ಹುಲಗಿ ಮತ್ತಿತರರು ಪಾಲ್ಗೊಂಡಿದ್ದರು.