ಹುಬ್ಬಳ್ಳಿಯಲ್ಲಿ 104 ಆರೋಗ್ಯವಾಣಿ ಕೇಂದ್ರಕ್ಕೆ ಚಾಲನೆ
ಕ.ಪ್ರ.ವಾರ್ತೆ ಹುಬ್ಬಳ್ಳಿ ಜೂ. 19
ಆರೋಗ್ಯ ಸೇವಾ ಮಾಹಿತಿಗಾಗಿ ಸ್ಥಾಪಿಸಿರುವ '104-ಆರೋಗ್ಯವಾಣಿ'ಯಿಂದ ಸಮಾಜದ ಕಟ್ಟಕಡೆಯ ಜನರಿಗೂ ಆರೋಗ್ಯ ಸೇವೆ ಒದಗಿಸಲು ಸಾಧ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಹೇಳಿದರು.
ಹೆಲ್ತ್ ಮ್ಯಾನೇಜಮೆಂಟ್ ಆ್ಯಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ಸಹಯೋಗದೊಂದಿಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹುಬ್ಬಳ್ಳಿಯಲ್ಲಿ ಸ್ಥಾಪಿಸಿರುವ '104-ಆರೋಗ್ಯವಾಣಿ' ಕಾಲ್ಸೆಂಟರ್ನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರು ತಮಗಿರುವ ರೋಗದ ಲಕ್ಷಣಗಳ ಮಾಹಿತಿಯನ್ನು ಆರೋಗ್ಯವಾಣಿ ಮೂಲಕ ನೀಡಿದಲ್ಲಿ ಪ್ರಾರಂಭದ ಹಂತದಲ್ಲಿಯೇ ರೋಗ ಪತ್ತೆ ಮಾಡಿ, ಗುಣಪಡಿಸಬಹುದು. ಕೊನೆಗಳಿಗೆಯಲ್ಲಿ ರೋಗ ಪತ್ತೆಯಾಗಿ ಭೀಕರ ಹಂತಕ್ಕೆ ತಲುಪುವುದು ಇದರಿಂದ ತಪ್ಪುತ್ತದೆ ಎಂದರು.
ಪ್ರತಿ ಜಿಲ್ಲೆಯಲ್ಲಿ ಹೆಚ್ಚಾಗಿರುವ ರೋಗಗಳ ಮಾಹಿತಿ ಪಡೆದುಕೊಂಡು, ರೋಗಗಳ ನಿವಾರಣೆಗೆ ಆರೋಗ್ಯವಾಣಿ ಸಹಾಯಕರ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಸಮರ್ಪಕ ಸೇವೆ ಲಭ್ಯವಾಗದಿದ್ದರೆ ಅಥವಾ ರೋಗಿಗಳನ್ನು ತಪಾಸಣೆ ಮಾಡುವ ಉಪಕರಣಗಳು ಕೆಟ್ಟಿದ್ದರೆ ರೋಗಿಗಳು ಈ ಕರೆ ಮೂಲಕ ದೂರು ಸಲ್ಲಿಸಬಹುದು ಎಂದು ತಿಳಿಸಿದರು. ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ವಾರ್ತಾ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿದರು.