ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

ವಿಜ್ಞಾನದ ಸೃಜನಶೀಲ ಪ್ರತಿಭೆ ರಾಭೂ: ಕಣವಿ

Mainashree
Updated On : 24 Jun 2013, 12:27 pm

ಕ.ಪ್ರ.ವಾರ್ತೆ  ಧಾರವಾಡ  ಜೂ. 23
ಸಮಕಾಲೀನ ವಿಜ್ಞಾನ ಪ್ರಜ್ಞೆಯನ್ನು ಸಮಾಜಕ್ಕೆ ಮುಂಚೆಯೇ ನೀಡಿದ ಸಾಹಿತಿ ಪ್ರೊ. ರಾಜಶೇಖರ ಭೂಸನೂರಮಠ ಅವರು ವಿಜ್ಞಾನದ ಅಪೂರ್ವ, ಸೃಜನಶೀಲ ಪ್ರತಿಭೆ ಎಂದು ನಾಡೋಜ ಡಾ. ಚನ್ನವೀರ ಕಣವಿ ಅಭಿನಂದಿಸಿದರು.
ರಾಜಶೇಖರ ಭೂಸನೂರಮಠ ಅಭಿನಂದನಾ ಸಮಿತಿ ಭಾನುವಾರ ನಗರದ ಸೃಜನಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಆಶಯ ನುಡಿಗಳನ್ನಾಡಿದ ಕಣವಿ, ಸಕ್ರಿಯ ಜೀವನ ನಡೆಸುತ್ತಾ ಮನುಷ್ಯ 100 ವರ್ಷ ಬದುಕಲು ಬಯಸಬೇಕು. ಈ ಭಾಗ್ಯವನ್ನು ಪ್ರೊ. ಭೂಸನೂರಮಠ ಅವರಿಗೆ ದೇವರು ಕರುಣಿಸಲಿ ಎಂದು ಹಾರೈಸಿದರು.
ಬದುಕು, ಬರಹ ಹಾಗೂ ಸಾಧನೆ ಮೂಲಕ 75 ವಸಂತಗಳನ್ನು ಸಾರ್ಥಕವಾಗಿ ಇವರು ಪೂರೈಸಿದ್ದಾರೆ. ಕನ್ನಡದ ಕಥಾ ಸಾಹಿತ್ಯದ ಜನಕರೆಂದೇ ಹೆಸರು ಪಡೆದಿದ್ದಾರೆ. ಇವರ ಜ್ಞಾನದ ಕ್ಷಿತಿಜ ಹೆಚ್ಚುವಂತೆ ಮಾಡಿದವರು ತಂದೆ ಸಂಶಿ ಭೂಸನೂರಮಠ. 1975ರಿಂದ ಬರವಣಿಗೆ ಆರಂಭಿಸಿದ ಇವರು ವಿವಿಧ ಮಾಧ್ಯಮಗಳ ಮೂಲಕ ವಿಜ್ಞಾನವನ್ನು ಜನಪ್ರಿಯಗೊಳಿಸುವ ಹೊಣೆ ಹೊತ್ತರು. ಇವರ ವೈಜ್ಞಾನಿಕ ಕಥಾ ಸಾಹಿತ್ಯ, ಜನಪ್ರಿಯ ವಿಜ್ಞಾನ ಕುರಿತ ಬರವಣಿಗೆ ಕನ್ನಡಕ್ಕೆ ಸಾಕಷ್ಟು ಕೊಡುಗೆ ನೀಡಿದೆ. ಮಾಧ್ಯಮಿಕ ಶಾಲೆಯಲ್ಲಿ ಕನ್ನಡದಲ್ಲಿ ವಿಜ್ಞಾನ ಬೋಧನೆ ಸಂದರ್ಭದಲ್ಲಿ ಇವರ ಪಾತ್ರ ಅಪಾರ. ಸಾಹಿತ್ಯ ಹಾಗೂ ವಿಜ್ಞಾನದ ಅಂತರವನ್ನು ಅಳಿಸಿ ಹಾಕಿದ ವ್ಯಕ್ತಿಗಳಲ್ಲಿ ಇವರೂ ಪ್ರಮುಖರು ಎಂದರು.
ದಂಪತಿಗೆ ಅಭಿನಂದನೆ: ಹೊಸಪೇಟೆ ಕೊಟ್ಟೂರು ಸ್ವಾಮಿ ಸಂಸ್ಥಾನಮಠದ ಸಂಗನಬಸವ ಸ್ವಾಮಿಗಳು ಪ್ರೊ. ರಾಜಶೇಖರ ಭೂಸನೂರಮಠ ದಂಪತಿಗೆ ಅಭಿನಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವೈಭವಿ ಅಭಿನಂದನಾ ಗ್ರಂಥವನ್ನು ವಿಶ್ರಾಂತ ಕುಲಪತಿ ಡಾ. ಎಂ.ಐ. ಸವದತ್ತಿ ಬಿಡುಗಡೆ ಮಾಡಿದರು. ಈ ಗ್ರಂಥ ಕುರಿತು ಮಾತನಾಡಿದ ಡಾ. ಸಂಗಮೇಶ ಸವದತ್ತಿಮಠ, ವಿಷಯಾಧಾರಿತ ಲೇಖನಗಳು, ರಾಭೂ ಅವರ ಕೃತಿ ಸಮೀಕ್ಷೆ, ಅವರೊಂದಿಗೆ ಇರುವ ಜನರ ಒಟನಾಟದ ಲೇಖನಗಳು, ಅವರ ಜೀವನ ಚರಿತ್ರೆ ಹೇಳುವ 'ನನ್ನ ನಾ ಕಂಡಂತೆ' ಹಾಗೂ ಅವರ ಪರಿಚಯ ಮತ್ತು ಕೃತಿಗಳ ಪಟ್ಟಿ ಹೊಂದಿರುವ ಅನುಬಂಧವೆಂದು ಗ್ರಂಥವನ್ನು ಐದು ಭಾಗಗಳಾಗಿ ಸಿದ್ಧಪಡಿಸಲಾಗಿದೆ ಎಂದರು. ಭೂಸನೂರಮಠರ ಮನ್ವಂತರ ಎಂಬ ಮರು ಮುದ್ರಿತ ಕಾದಂಬರಿಯನ್ನು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಬಿಡುಗಡೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement