ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಧಾರವಾಡ

3 ತಿಂಗಳ ಮಗುವಿನ ಹೃದಯದ ಶಸ್ತ್ರ ಚಿಕಿತ್ಸೆ

Lingaraj Badiger
Updated On : 25 Jun 2013, 10:46 am

ಧಾರವಾಡ: ಇಲ್ಲಿನ ಎಸ್‌ಡಿಎಂ ಆಸ್ಪತ್ರೆಯಲ್ಲಿರುವ ನಾರಾಯಣ ಹೃದಯಾಲಯ ಹಾರ್ಟ್ ಸೆಂಟರ್‌ನಲ್ಲಿ ಮೂರು ತಿಂಗಳ ಮಗುವಿನ ಅಪರೂಪದ ಹೃದಯ ಶಸ್ತ್ರ ಚಿಕಿತ್ಸೆಯನ್ನು ಇತ್ತೀಚೆಗೆ ಮಾಡಲಾಯಿತು.
3.5 ಕೆ.ಜಿ. ತೂಕದ ಮಗುವಿಗೆ ಹೃದಯದಲ್ಲಿ ರಂಧ್ರವಿದ್ದ ಕಾರಣ (ವೆಂಟ್ರಿಕ್ಯುಲಾರ್ ಸೆಪ್ಟಲ್ ಡಿಫೆಕ್ಟ್) ಅತಿಯಾದ ಶ್ವಾಸಕೋಶದ ರಕ್ತದ ಒತ್ತಡ ಮತ್ತು ನ್ಯುಮೋನಿಯಾದಿಂದ ಮಗು ಬಳಲುತ್ತಿತ್ತು. ಈ ಮಗುವನ್ನು ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದಾಗ ಅತಿ ವಿರಳವಾದ ಮತ್ತೊಂದು ನ್ಯೂನತೆ ಪತ್ತೆಯಾಯಿತು. ಇದಕ್ಕೆ ಅನಾಮಲಸ್ ಸಿಂಗಲ್ ಕೊರೊನರಿ ಆರ್ಟರಿ ಫ್ರೆಮ್ ಪಲ್ಮನರಿ ಆರ್ಟರಿ ಎನ್ನುತ್ತಾರೆ.
ಈ ನೂನ್ಯತೆಯಲ್ಲಿ ಹೃದಯಕ್ಕೆ ರಕ್ತ-ಆಹಾರಕೊಡುವ ಕೊರೋನರಿ ಆರ್ಟರಿಗಳು ಶುದ್ಧ ರಕ್ತನಾಳದಿಂದ ಹೊಮ್ಮುವ ಬದಲು ಅಶುದ್ಧ ರಕ್ತನಾಳದಿಂದ ಪಲ್ಮನರಿ ಆರ್ಟರಿಯಿಂದ ಹೊಮ್ಮಿ ಹೃದಯಕ್ಕೆ ಅಶುದ್ಧ ರಕ್ತವನ್ನು ಕೊಡುತ್ತದೆ. ಇದರಿಂದ ಹುಟ್ಟಿದ ಮಗುವಿಗೆ ಹೃದಯಾಘಾತವಾಗಿ ಪ್ರಾಣ ಹಾನಿಯಾಗುತ್ತದೆ ಎನ್ನುತ್ತಾರೆ ಶಸ್ತ್ರ ಚಿಕಿತ್ಸೆ ಮಾಡಿದ ಹೃದಯ ಶಸ್ತ್ರ ಚಿಕಿತ್ಸಾ ತಜ್ಞ ಡಾ. ರವಿಶಂಕರ ಶೆಟ್ಟಿ.
ಭಾರತದಲ್ಲಿ ಈ ಕಾಯಿಲೆಯಿಂದ ಗುಣವಾಗಿರುವ ಮೊದಲ ಮಗು ಇದಾಗಿದ್ದು, ವಿಶ್ವದಲ್ಲಿ ಕೇವಲ ಬೆರಳಣಿಕೆಯಷ್ಟು ಮಕ್ಕಳು ಬದುಕಿ ಗುಣಮುಖರಾಗಿದ್ದಾರೆ. ಈ ಮಗುವಿನಲ್ಲಿ ಹೃದಯ ರಂಧ್ರವನ್ನು ಮುಚ್ಚಿ ಕೊರನರಿ ರಕ್ತನಾಳವನ್ನು ಪಲ್ಮನರಿ ಆರ್ಟರಿಯಿಂದ ತೆಗೆದು ಅಯೋರ್ಟಾಗೆ ಹೊಲಿಯಲಾಯಿತು. ಅದರಿಂದ ಹೃದಯಕ್ಕೆ ಶುದ್ಧ ರಕ್ತ ಸಂಚಾರವಾಯಿತು ಎಂದು ಡಾ. ರವಿ ಹೇಳಿದರು.  ಈ ಮಗುವಿನ ತಂದೆ-ತಾಯಿ ಪಶ್ಚಿಮ ಬಂಗಾಳದಿಂದ ಬಂದವರಾಗಿದ್ದು, ಮಗು ಶಸ್ತ್ರ ಚಿಕಿತ್ಸೆ ಮೂಲಕ ಮರುಜೀವ ಪಡೆದ ಕಾರಣ ವೈದ್ಯರಿಗೆ ಅಭಿನಂದನೆ ಸಲ್ಲಿಸಿದರು. ಎಸ್‌ಡಿಎಂ ಆಸ್ಪತ್ರೆಯ ನಿರ್ದೇಶಕ ಡಾ. ನಿರಂಜನ ಕುಮಾರ ಮಾತನಾಡಿ, ನೂತನವಾಗಿ ಆರಂಭವಾಗುತ್ತಿರುವ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ಹೃದಯ ಶಸ್ತ್ರ ಚಿಕಿತ್ಸೆಗಾಗಿಯೇ ಒಂದು ವಿಭಾಗ ಮೀಸಲಿಡುತ್ತೇವೆ. ಇದರಿಂದ ಉತ್ತರ ಕರ್ನಾಟಕದ ಜನತೆಗೆ ಮತ್ತು ಹೃದ್ರೋಗವಿರುವ ಮಕ್ಕಳಿಗೆ ಬಹಳಷ್ಟು ಸಹಾಯವಾಗುತ್ತದೆ. ಚಿಕಿತ್ಸೆಗಾಗಿ ಅತಿ ದೂರ ಪಯಣ ಮತ್ತು ಅಪಾರ ಖರ್ಚು ಮಾಡುವುದು ತಪ್ಪುತ್ತದೆ ಎಂದರು.  ಎಸ್‌ಡಿಎಂ ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ. ಷಣ್ಮುಖ ಹಿರೇಮಠ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement