ಅರ್ಹ ಫಲಾನುಭವಿಗಳಿಗೆ ಸಿಗದ ಸೂರು
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಜೂ. 24
ಆಶ್ರಯ ಮನೆಗಳ ಮಾರಾಟ ಕೇವಲ ಒಳ ವ್ಯವಹಾರವಾಗಿ ಉಳಿಯದೇ ಮಾಫಿಯಾ ಜಾಲದಂತೆ ಹಬ್ಬಿದೆ.
ರಾಮನಗರದಲ್ಲಿನ ಆಶ್ರಯ ಮನೆಗಳ ಅವ್ಯವಹಾರ ಕುರಿತು 'ಕನ್ನಡ ಪ್ರಭ' ಬೆಳಕು ಚೆಲ್ಲಿರುವುದರ ಹಿಂದೆಯೇ ಜಗದೀಶ ನಗರ ಹಾಗೂ ವಾಜಪೇಯಿ ನಗರಕ್ಕೂ ಮಾಫಿಯಾ ತನ್ನ ಕಬಂಧ ಬಾಹು ವಿಸ್ತರಿಸಿರುವುದು ಬೆಳಕಿಗೆ ಬಂದಿದೆ.
ಸೂರಿಲ್ಲದ ಫಲಾನುಭವಿಗಳಿಗೆ ಆಶ್ರಯ ಮನೆ ವಿತರಿಸಬೇಕೆಂಬ ನಿಯಮವನ್ನು ಸ್ವತಃ ಫಲಾನುಭವಿಗಳೇ ಗಾಳಿಗೆ ತೂರುತ್ತಿದ್ದಾರೆ. ಕೆಲವರಂತೂ ಆಶ್ರಯ ಮನೆಗಳನ್ನು ಬಾಡಿಗೆಗೆ ನೀಡಿ, ನಗರದಲ್ಲಿರುವ ತಮ್ಮ ಮತ್ತೊಂದು ಮನೆಯಲ್ಲಿ ವಾಸಿಸುತ್ತಿದ್ದಾರೆ. ಅರ್ಹ ಬಡ ಫಲಾನುಭವಿಗಳು ಮಾತ್ರ ಹಲವಾರು ಸೌಲಭ್ಯಗಳ ಕೊರತೆಯ ಮಧ್ಯೆಯೂ ಈ ಆಶ್ರಯ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ ಖೊಟ್ಟಿ ದಾಖಲೆ ನೀಡಿ ಆಶ್ರಯ ಮನೆಗಳನ್ನು ಪಡೆದುಕೊಂಡಿರುವ ಅನೇಕರು ಆ ಮನೆಗಳ ಮಾರಾಟ ಅಥವಾ ಬಾಡಿಗೆ ನೀಡುವಲ್ಲಿ ತೊಡಗಿದ್ದಾರೆ.
ಅರ್ಧಕ್ಕಿಂತ ಹೆಚ್ಚು: 11 ವರ್ಷಗಳ ಹಿಂದೆ ನಿರ್ಮಿಸಿದ ಆಶ್ರಯ ಮನೆಗಳಲ್ಲಿ ಇಂದಿಗೂ ಕೂಡ ಅರ್ಧಕ್ಕಿಂತ ಹೆಚ್ಚು ಕುಟುಂಬಗಳು ವಾಸಿಸುತ್ತಿಲ್ಲ. ಈಗಾಗಲೇ ಅಲ್ಲಿಯೂ ಕೂಡ ಮನೆಗಳನ್ನು ಮಾರಾಟ ಮಾಡುವ ಕೆಲಸ ಸದ್ದಿಲ್ಲದೇ ಸಾಗಿದೆ. ಹೌದು! ಸುಮಾರು 11 ವರ್ಷಗಳ ಹಿಂದೆ ಆಶ್ರಯ ಯೋಜನೆಯಡಿ 612 ಮನೆಗಳನ್ನು ನಿರ್ಮಿಸಿ ಅಂದು ಈ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ನೆನಪಿಗಾಗಿ ಜಗದೀಶ ನಗರ ಎಂದು ನಾಮಕರಣ ಮಾಡಲಾಗಿತ್ತು. ಇಲ್ಲಿನ ಆಶ್ರಯ ಮನೆಗಳ ದರ ರು. 80 ರಿಂದ ಒಂದು ಲಕ್ಷ ರು. 'ಕನ್ನಡಪ್ರಭ' ಪ್ರತಿನಿಧಿ ಭೇಟಿ ನೀಡಿದ ಸಂದರ್ಭದಲ್ಲಿ ಮಾಲಾ ಎನ್ನುವ ಮಹಿಳೆಯೊಬ್ಬಳು, ಈಗಾಗಲೇ ಜಗದೀಶ ನಗರದಲ್ಲಿನ ಮನೆಯೊಂದನ್ನು ಖರೀದಿಸುವ ಯತ್ನದಲ್ಲಿದ್ದರು. ಅವರ ಮಾತಿನಲ್ಲೇ ಹೇಳಬೇಕು ಎಂದರೆ, ಇನ್ನೂ ವ್ಯವಹಾರ ಮುಗಿದಿಲ್ಲ. ಬಾಂಡ್ ನೋಡಿದ್ ಮ್ಯಾಲ ನಮ್ಮ ಮನೆಯವರು ವ್ಯವಹಾರ ಮುಗುಸೋಣು ಅಂತಾ ಹೇಳ್ಯಾರಿ ಎನ್ನುತ್ತಾರೆ.
ಒಕ್ಕಲೇಳುವ ಭಯ: ಜಗದೀಶ ನಗರದ ಬಹುಭಾಗ ಹುಬ್ಬಳ್ಳಿ ವಿಮಾನ ನಿಲ್ದಾಣದ ಮೇಲ್ದರ್ಜೆಗೆ ಬೇಕಾಗಿರುವ ಜಮೀನಿನ ವ್ಯಾಪ್ತಿಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಆಶ್ರಯ ಫಲಾನುಭವಿಗಳನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂಬ ಆತಂಕ ಹಲವರಲ್ಲಿ ಇದೆ. ಆದಾಗ್ಯೂ ಕೂಡ ಇಲ್ಲಿನ ನಿವಾಸಿಗಳು ಸರ್ಕಾರ ನಿವೇಶನ ಖರೀದಿಸಲು ಹಣ ನೀಡುವ, ಇಲ್ಲವೇ ವಾಜಪೇಯಿ ನಗರದಲ್ಲಿ ಖಾಲಿ ಇರುವ ಮನೆಗಳನ್ನು ಹಂಚಿಕೆ ಮಾಡಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದ್ದರಿಂದ ಒಂದು ವೇಳೆ ಇಲ್ಲಿ ಸೂರು ಕಳೆದುಕೊಂಡರೂ ಸರ್ಕಾರ ಇನ್ನೊಂದು ಕಡೆ ವ್ಯವಸ್ಥೆ ಮಾಡಿಕೊಡುತ್ತದೆ. ಅಲ್ಲಿಯವರೆಗೆ ಇಲ್ಲೇ ಇದ್ದರಾಯಿತು ಎನ್ನುತ್ತಾರೆ ಜಗದೀಶ ನಗರದ ನಿವಾಸಿಗಳು. ಇಲ್ಲಿನ ನಿವಾಸಿಗಳ ಪ್ರಕಾರ 300ಕ್ಕೂ ಹೆಚ್ಚು ಮನೆಗಳು ವಿಮಾನ ನಿಲ್ದಾಣ ವಿಸ್ತರಣೆ ಕೆಲಸಕ್ಕೆ ಆಪೋಷನಗೊಳ್ಳಲಿವೆ.
ಇದು ಎಂಥಾ ಕಾಲೋನಿ?: ಬಯಲು ಮಲ ವಿಸರ್ಜನೆ ಬೇಡ ಎಂದು ಹೇಳುವ ಸರ್ಕಾರ, ಆ ಕೆಲಸ ಮಾಡುವುದಕ್ಕೆ ತಾನೇ ಅವಕಾಶ ಮಾಡಿಕೊಟ್ಟಿದೆ. ಜಗದೀಶ ನಗರದ ಆಶ್ರಯ ಮನೆಗಳಿಗೆ ಶೌಚಾಲಯವನ್ನಾದರೂ ನಿರ್ಮಿಸಿಕೊಡುವ ಕೆಲಸ ಅಂದು ಸರ್ಕಾರದಿಂದ ಆಗಬೇಕಿತ್ತು. ಹೋಗಲಿ ಕನಿಷ್ಠ ಸಾರ್ವಜನಿಕ ಶೌಚಾಲಯಗಳನ್ನಾದರೂ ನಿರ್ಮಿಸಬೇಕಿತ್ತು. ಆದರೆ ಹೇಳುವುದು ಒಂದು ಮಾಡುವುದು ಇನ್ನೊಂದು ಎಂಬ ಸಿದ್ಧಾಂತ ಅನುಸರಿಸುತ್ತಿರುವ ಸರ್ಕಾರ ಮತ್ತು ಅಧಿಕಾರಿಗಳಿಗೆ ಕನಿಷ್ಠ ಇಲ್ಲಿ ವಾಸಿಸುತ್ತಿರುವ 300 ಕುಟುಂಬಗಳಿಗಾದರೂ ಮೂಲ ಸೌಕರ್ಯ ಕಲ್ಪಿಸುವುದಕ್ಕೆ ಮನಸ್ಸಾದರೂ ಬರಬೇಕಿತ್ತು. ಈ ನಿಟ್ಟಿನಲ್ಲಿ ಅಧಿಕಾರಿಗಳು ಮತ್ತು ಸರ್ಕಾರ ಇನ್ನೂ ಚಿಂತನೆ ಮಾಡಿಲ್ಲ.
ಫಲಾನುಭವಿಗಳ ಪತ್ತೆ ಇಲ್ಲ...
ಜಗದೀಶ ನಗರದ ಆಶ್ರಯ ಮನೆಗಳನ್ನು ಪಡೆದಿರುವ ಫಲಾನುಭವಿಗಳ ಪೈಕಿ ಕೆಲವರು ಒಂದು ದಿನ ಕೂಡ ತಮ್ಮ ಮನೆಗಳತ್ತ ತಲೆ ಹಾಕಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು. ಕೆಲವರಿಗಂತೂ ತಮಗೊಂದು ಆಶ್ರಯ ಯೋಜನೆಯಡಿ ಮನೆ ಸಿಕ್ಕಿರುವ ಕುರಿತು ಮಾಹಿತಿಯೂ ಇರಲಿಕ್ಕಿಲ್ಲ. ಆದರೆ ಖಾಲಿ ಇದ್ದ ಮನೆಗಳನ್ನು ತಮ್ಮ ನೆಲೆಯಾಗಿಸಿಕೊಳ್ಳುವ ಬಡ ಕುಟುಂಬಗಳನ್ನು ಸ್ವಾರ್ಥಿಗಳು ಜೀವ ಹಿಂಡುವ ಕೆಲಸ ಮಾಡುತ್ತಾರೆ. ಅಂತಹದ್ದೊಂದು ಉದಾಹರಣೆ ಇದು. ಅಂದ ಹಾಗೆ ಈ ವಿಚಾರವನ್ನು ಬಹಿರಂಗ ಪಡಿಸಿದ್ದು ಕುಷ್ಟಗಿಯಿಂದ ಹುಬ್ಬಳ್ಳಿಗೆ ದುಡಿಯಲು ಬಂದ ಕುಟುಂಬವೊಂದರ ಯುವಕ 'ಹುಬ್ಬಳ್ಳಿಗೆ ದುಡ್ಯಾಕ ಬಂದ ಮ್ಯಾಲ ನಮಗ ಇರಾಕ್ ಜಾಗ ಇರಲಿಲ್ರಿ. ಅದಕ್ ನಮ್ಮ ಅಪ್ಪಾರು ಈ ಮನಿ ಹಸನ ಮಾಡಿದ ಮ್ಯಾಲ ನಾವ್ ಇರಾಕ್ ಸುರು ಮಾಡಿದ ಎರಡ್ ವರ್ಸದ ಮ್ಯಾಲ ಒಬ್ಬ ಮನಸ್ಯಾ ಬಂದು ಇದು ನಮ್ಮ ಮನಿ ಐತಿ, ನಾವ್ ಇಸ್ಟ್ ದಿವಸ ಹುಬ್ಬಳ್ಳ್ಯಾಗ ಇದ್ವಿ. ಇನ್ಮ್ಯಾಗ ಇಲ್ಲಿಗಾ ಬರತಿವಿ ಅಂದ್ರು. ಆದ್ರ ಒಬ್ಬ ಹಿರೇ ಮನಸ್ಯಾ ಬಂದು ಎಲ್ಲಿ ಕಾಗದ ಪತ್ರಾ ತೋರ್ಸು ಅಂದದ್ದಕ್ಕೆ ಎಂತಾದ್ದೊ ಕಾಗದ ಪತ್ರಾ ತೋರ್ಸಿದಾ. ಕಾಗದ ಪತ್ರಾ ನೋಡಿದ ಆ ಹಿರೇ ಮನಸ್ಯಾ, ಇದು ಈ ಮನಿದಲ್ಲ ಎಂದು ಊರ ಹಿರೇ ಮನಸ್ಯಾ ಹೇಳಿದ ಮ್ಯಾಲ ಹೋದ ಆಸಾಮಿ ಮತ್ತ ಈ ಕಡಿ ತಲಿ ಹಾಕಿಲ್ಲ' ಎನ್ನುತ್ತಾನೆ.
-ಸತೀಶ ಪಾಗಾದ