ಒಳಚರಂಡಿ ಕಾಮಗಾರಿಗೆ ಶೆಟ್ಟರ್ ಚಾಲನೆ
ಹುಬ್ಬಳ್ಳಿ: ಇಲ್ಲಿಯ ಬೈರಿದೇವರಕೊಪ್ಪದ ರೇಣುಕಾನಗರಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕ ಜಗದೀಶ್ ಶೆಟ್ಟರ ಒಳಚರಂಡಿ ಅವ್ಯವಸ್ಥೆ ಪರಿಶೀಲಿಸಿ, ನೂತನ ಒಳಚರಂಡಿ ಕಾಮಗಾರಿಗೆ ಚೈತನ್ಯ ಕಾಲೋನಿಯಲ್ಲಿ ಚಾಲನೆ ನೀಡಿದರು. ಶಾಸಕರ ಅನುದಾನ ಹಾಗೂ ಪಾಲಿಕೆಯ ಮ್ಯಾಚಿಂಗ್ ಗ್ರಾಂಟ್ನಲ್ಲಿ ಕೈಗೊಳ್ಳಲಾಗುತ್ತಿರುವ ಈ ಕಾಮಗಾರಿಗೆ ಸಂಬಂಧಿಸಿದ ಅಂದಾಜು ಪತ್ರಿಕೆಯನ್ನು ಕೂಡಲೇ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಶೆಟ್ಟರ್, ಸಾರ್ವಜನಿಕರ ತೊಂದರೆಗಳನ್ನು ಆಲಿಸಿದರು. ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಮಾಜಿ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ಪಾಲಿಕೆ ವಲಯಾಧಿಕಾರಿ ಡಿ.ಡಿ. ಮಾದರ ಮತ್ತಿತರರು ಹಾಜರಿದ್ದರು.
ಇಂದು ಸಮಾರಂಭ
ಧಾರವಾಡ: ಇಲ್ಲಿನ ಪ್ರೋಬಸ್ ಕ್ಲಬ್ ಜೂ. 25ರಂದು ಕೆ.ಸಿ. ಪಾರ್ಕ್ ಹತ್ತಿರದ ಕ್ಲಬ್ ಸಭಾ ಭವನದಲ್ಲಿ ಉಪನ್ಯಾಸ ಏರ್ಪಡಿಸಿದೆ. ಡಾ.ಎಸ್.ಎಸ್. ಹಿರೇಮಠ, ಸ್ತ್ರೀರೋಗ ತಜ್ಞರಾದ ಶಿವಲೀಲಾ, ಡಾ. ಲೀಲಾ ಹಿರೇಮಠ ಭಾಗವಹಿಸುತ್ತಾರೆ. ಅಧ್ಯಕ್ಷತೆಯನ್ನು ಡಾ.ಎಸ್.ಬಿ. ತೋರಗಲ್ ವಹಿಸುತ್ತಾರೆ ಎಂದು ಕ್ಲಬ್ನ ಎಸ್.ಎಸ್. ಕೋತಂಬರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿ ವೇತನಕ್ಕೆ ಅರ್ಜಿ
ಧಾರವಾಡ: ಇಲ್ಲಿನ ಪ್ರತಿಭಾ ಪ್ರತಿಷ್ಠಾನವು ಪ್ರತಿ ವರ್ಷದಂತೆ ಆರ್ಥಿಕವಾಗಿ ಹಿಂದುಳಿದ ಧಾರವಾಡ ನಗರ ಪ್ರದೇಶದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿ ಆಹ್ವಾನಿಸಿದೆ. ಬ್ರಾಹ್ಮಣ ಸಮಾಜದ ಪ್ರೌಢ ಶಾಲೆ, ಪಿಯುಸಿ, ಡಿಪ್ಲೋಮಾ, ಐಟಿಐ, ಯಾವುದೇ ಪದವಿ ಮತ್ತು ಸ್ನಾತಕೋತ್ತರ ವರ್ಗದಲ್ಲಿ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಮೊ-9448801195, 9880254311 ಸಂಪರ್ಕಿಸಬಹುದು ಎಂದು ವೆಂಕಟೇಶ ದೇಸಾಯಿ ತಿಳಿಸಿದ್ದಾರೆ.
30ರಂದು ಸಾಂಸ್ಕೃತಿಕ ಸಂಜೆ
ಧಾರವಾಡ: ಪಂ. ಬಸವರಾಜ ರಾಜಗುರು ಟ್ರಸ್ಟ್ ವತಿಯಿಂದ ವಿದ್ಯಾವರ್ಧಕ ಸಂಘದ ದೇಶಪಾಂಡೆ ಸಭಾ ಭವನದಲ್ಲಿ ಜೂ. 30ರಂದು ಸಂಜೆ 6ಕ್ಕೆ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.