ಪ್ರಗತಿ ಪರಿಶೀಲನಾ ಸಭೆ ನಡೆಸದ ಸಚಿವ ಸೊರಕೆ
ಹುಬ್ಬಳ್ಳಿ: ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಸೋಮವಾರ ನಡೆಯಬೇಕಿದ್ದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರಗತಿ ಪರಿಶೀಲನಾ ಸಭೆ ಹುಸಿಯಾಯಿತು.
ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಇದೇ ಮೊದಲ ಬಾರಿಗೆ ಮಹಾನಗರಕ್ಕೆ ಆಗಮಿಸಿದ್ದರಿಂದ ಪಾಲಿಕೆ ವ್ಯಾಪ್ತಿಯಲ್ಲಿನ ಹಲವಾರು ಸಮಸ್ಯೆಗಳ ನಿವಾರಣೆಗೊಳ್ಳಬಹುದೆಂದು ಅಂದಾಜಿಸಲಾಗಿತ್ತು. ಆದರೆ ಸಚಿವ ಸೊರಕೆ, ಪ್ರಗತಿ ಪರಿಶೀಲನಾ ಸಭೆ ನಡೆಸದೇ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಹೊರನಡೆದರು. ಪ್ರಗತಿ ಪರಿಶೀಲನಾ ಸಭೆ ಹಿನ್ನಲೆಯಲ್ಲಿ ಪಾಲಿಕೆ, ಜಲಮಂಡಳಿ, ಆರೋಗ್ಯ ಇಲಾಖೆ ಅಧಿಕಾರಿಗಳೂ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಪೂರ್ಣ ಸಿದ್ಧತೆಯೊಂದಿಗೆ ಸಭೆಗೆ ಆಗಮಿಸಿದ್ದರು. ಪಾಲಿಕೆಯಲ್ಲಿನ ವಿವಿಧ ಕಾಮಗಾರಿಗಳು, ಅವುಗಳಿಗೆ ತಗುಲಿದ ವೆಚ್ಚ, ಪ್ರಗತಿಯಲ್ಲಿರುವ ಕಾಮಗಾರಿ ಸೇರಿದಂತೆ ಹಲವಾರು ವಿಷಯಗಳ ಮಾಹಿತಿಯುಳ್ಳ ಪುಸ್ತಕಗಳನ್ನೂ ಪ್ರಕಟಿಸಲಾಗಿತ್ತು.
ನಗರಾಭಿವೃದ್ಧಿ ಸಚಿವರು ಪ್ರಗತಿ ಪರಿಶೀಲನಾ ಸಭೆ ನಡೆಸುವರೆಂಬ ಕಾರಣದಿಂದ ಪಾಲಿಕೆ ಅಧಿಕಾರಿಗಳು ಕಳೆದ ಐದಾರು ದಿನಗಳಿಂದ ಪೂರ್ವ ಸಿದ್ಧತೆ ನಡೆಸಿದ್ದರು. ಸೋಮವಾರ ಸಂಜೆ 4ಕ್ಕೆ ಪ್ರಗತಿ ಪರಿಶೀಲನಾ ಸಭೆ ನಿಗದಿಪಡಿಸಲಾಗಿತ್ತು. ಆದರೆ ಸಚಿವ ಸೊರಕೆ ಅವರು ಪಾಲಿಕೆ ಕಚೇರಿಗೆ ಆಗಮಿಸಿದ್ದಾಗ ಸಂಜೆ 6 ದಾಟಿತ್ತು. ಪಾಲಿಕೆ ಆಯುಕ್ತರ ಕಚೇರಿ ಮೇಲ್ಭಾಗದ ಸಭಾ ಭವನಕ್ಕೆ ಆಗಮಿಸಿದ ಸಚಿವ ಸೊರಕೆ, ಮೊದಲ ಸಾಲಿನಲ್ಲಿ ಸಭೆಗಾಗಿ ಕಾಯುತ್ತ ಕುಳಿತಿದ್ದ ಅಧಿಕಾರಿಗಳನ್ನು ಹಿಂದಿನ ಸಾಲಿಗೆ ಸಾಗಹಾಕಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ 10-15 ನಿಮಿಷ ಮಾತನಾಡಿ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದತ್ತ ಹೆಜ್ಜೆ ಹಾಕಿದರು. ಅಲ್ಲಿಯೂ ಕಾಟಾಚಾರಕ್ಕೆನ್ನುವಂತೆ ಕೇವಲ 10-15 ನಿಮಿಷಗಳಲ್ಲಿ ಅವಸರದಲ್ಲಿಯೇ ಪ್ರಗತಿ ಪರಿಶೀಲನಾ ಸಭೆ ಪೂರ್ಣಗೊಳಿಸಿದರು.
--