ಮಿಶ್ರಿಕೋಟಿ ಗ್ರಾಪಂ ಸಭೆ: ದೂರುಗಳ ಸರಮಾಲೆ
ಕಲಘಟಗಿ: ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮದ 3 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಹದಗೆಟ್ಟ ರಸ್ತೆಗಳು ಪಡಿತರ ಚೀಟಿ ಪರದಾಟ ಸೇರಿದಂತೆ ಹತ್ತಾರು ದೂರುಗಳು ತಾಲೂಕಿನ ಮಿಶ್ರಿಕೋಟಿ ಗ್ರಾಪಂ ಸಭೆಯಲ್ಲಿ ಸೋಮವಾರ ತೂರಿಬಂದವು. ಅಲ್ಲಿನ ಗ್ರಾಮದೇವಿ ದೇವಸ್ಥಾನದಲ್ಲಿ ಜರುಗಿದ ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಚಂದ್ರವ್ವ ಕೆ. ಚಿಕ್ಕಾಡಿ, ಉಪಾಧ್ಯಕ್ಷೆ ರುಸ್ತುನಬಿ ದುಕಾನದಾರ, ಅಭಿವೃದ್ಧಿ ಅಧಿಕಾರಿ ಸಹದೇವ ಮಾಲಿನ, ನೋಡಲ್ ಅಧಿಕಾರಿ ಹೊಸಮನಿ, ಗ್ರಾಪಂ ಸದಸ್ಯರ ಸಮ್ಮುಖದಲ್ಲಿ ಸಭೆ ಜರುಗಿತು. ಗ್ರಾಮಸ್ಥರ ಪ್ರಶ್ನೆಗಳಿಗೆ ಅಧಿಕಾರಿಗಳು ಅಸಮರ್ಪಕ ಉತ್ತರ ನೀಡಿದ್ದರಿಂದ ಸಭೆ ಗೊಂದಲಗೂಡಾಯಿತು. ಮಿಶ್ರಿಕೋಟಿ ಹಾಗೂ ಹುಬ್ಬಳ್ಳಿ-ಕಾರವಾರ ಹೆದ್ದಾರಿ ಕೂಡುವ ರಸ್ತೆ ಹಾಗೂ ಮಿಶ್ರಿಕೋಟಿ, ಗಂಜೀಗಟ್ಟಿ, ಉಗ್ನಿಕೇರಿ ಮಾರ್ಗದ ರಸ್ತೆಗಳ ಕಾಮಗಾರಿ ಮಾಡಿದ್ದರೂ ಮತ್ತೆ ಹದಗೆಟ್ಟಿವೆ ಎಂದು ಸಭೆಯಲ್ಲಿನ ಜನ ದೂರಿದರು. ಅಲ್ಲದೆ, ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗ್ರಾಮ ಪಂಚಾಯ್ತಿ ಕುಡಿಯುವ ನೀರು ಪೂರೈಸುತ್ತಿಲ್ಲ. ಆಶ್ರಯಮನೆಗಳು ಉಳ್ಳವರ ಪಾಲಾಗಿವೆ ಎಂದು ಗ್ರಾಮದ ಹಲವರು ದೂರಿದರು. ಇದೇ ಸಂದರ್ಭದಲ್ಲಿ ಒಂದನೇ ವಾರ್ಡಿನ ಆಂಜನೇಯ ದೇವಸ್ಥಾನದ ಬಳಿಯ ರಸ್ತೆ ಹಾಗೂ ಉದ್ಯಾನವನ ನಿರ್ಮಿಸುವ ಕುರಿತು ಚರ್ಚಿಸಲಾಯಿತು. ಅಲ್ಲದೆ ಶಾಶ್ವತ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಲು ಸಂಬಂಧಿಸಿದ ಇಲಾಖೆಗೆ ಪತ್ರ ಬರೆಯುವುದಾಗಿ ಗ್ರಾಪಂ ಅಧಿಕಾರಿಗಳು ತಿಳಿಸಿದರು.