ಸಿಎಂ ಮಾತಿಗೆ ತಕ್ಕಂತೆ ನಡೆದುಕೊಳ್ಳಲಿ: ಹಿರೇಮಠ
ಧಾರವಾಡ: ಮುಖ್ಯಮಂತ್ರಿಯಾದರೆ ಅಕ್ರಮ ಗಣಿಗಾರಿಕೆಯಿಂದ ಸಂಪಾದಿಸಿದ ಹಣ ಮರಳಿ ಪಡೆಯಲು ವಿಶೇಷ ಕಾನೂನು ಮತ್ತು ವಿಶೇಷ ನ್ಯಾಯಾಲಯ ಸ್ಥಾಪಿಸಿ ಅಕ್ರಮದಲ್ಲಿ ತೊಡಗಿದ ಗಣಿ ಮಾಲೀಕರು, ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸುವುದಾಗಿ ಹೇಳಿದ್ದ ಸಿಎಂ ಸಿದ್ದರಾಮಯ್ಯ ಮಾತಿಗೆ ತಕ್ಕಂತೆ ನಡೆದುಕೊಳ್ಳಲಿ ಎಂದು ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್.ಆರ್. ಹಿರೇಮಠ ಆಗ್ರಹಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿ ವರ್ಗದ ಎಲ್ಲ ಗಣಿ ಕಂಪನಿಗಳಿಂದ ಅಕ್ರಮ ಸಂಪಾದನೆಯನ್ನು ಸರ್ಕಾರ ಮರಳಿ ಪಡೆಯಬೇಕು ಹಾಗೂ ಅಕ್ರಮ ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಈಗಾಗಲೇ ಗಣಿ ಕಂಪನಿಗಳು ಮಾಡಿದಂಥ ಅಕ್ರಮ ಸಂಪಾದನೆಯನ್ನು ಬಡ್ಡಿ ಸಮೇತವಾಗಿ ಸರ್ಕಾರದ ಬೊಕ್ಕಸಕ್ಕೆ ತರಬೇಕಿದೆ. ಇದರಲ್ಲಿ ಭಾಗಿಯಾಗಿರುವ ಎಲ್ಲರಿಗೂ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕೆಂದು ಮುಖ್ಯಮಂತ್ರಿಗೆ ಒತ್ತಾಯಿಸಿದರು.
ಆ.12ರಂದು ಸಮ್ಮೇಳನ: 60ಕ್ಕೂ ಹೆಚ್ಚು ಜನರು ಸಂಡೂರು ಸುತ್ತಮುತ್ತಲಿನ ಪುರುಷ ಹಾಗೂ ಮಹಿಳೆಯರು ತರಬೇತಿ ಪಡೆದು ಬರುವ ಆ.12ರಂದು ಅಕ್ರಮ ಭೂ ಒತ್ತುವರಿ ಹಾಗೂ ಗಣಿಗಾರಿಕೆ ಕುರಿತು ಹೋರಾಟದ ರೂಪುರೇಷ ಹಾಕಿಕೊಳ್ಳಲಾಗಿದೆ.
ಅಲ್ಲದೇ ಅ.11ರಂದು ಜಯಪ್ರಕಾಶ ನಾರಾಯಣರ ಜನ್ಮದಿನ. ಅಂದು ಜನ ಸಂಗ್ರಾಮ ಪರಿಷತ್ತಿನಿಂದ ದಾವಣಗೆರೆಯಲ್ಲಿ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದರು.