ಅಂತಸ್ತು ವಿಸ್ತೀರ್ಣ ಏರಿಸಲು ಆಗ್ರಹ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಂತಸ್ತು ವಿಸ್ತೀರ್ಣ ಅನುಪಾತ (ಎಫ್‌ಎಆರ್) ವಸತಿಗೆ 2.25 ಮತ್ತು ವಾಣಿಜ್ಯಕ್ಕೆ 2.5 ಇದ್ದು, ವಸತಿಗೆ ಈ ಅನುಪಾತವನ್ನು 4.0ಕ್ಕೆ ಏರಿಸಬೇಕು ಎಂದು ಆಗ್ರಹಿಸಿ ಅಸೋಶಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜನೀಯರ್ಸ್ ವತಿಯಿಂದ ಸೋಮವಾರ ನಗರಕ್ಕೆ ಆಗಮಿಸಿದ್ದ ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಅವರಿಗೆ ಮನವಿ ಸಲ್ಲಿಸಲಾಯಿತು.
ಅವಳಿ ನಗರದಲ್ಲಿ ಜನಸಂಖ್ಯೆ ಹೆಚ್ಚುತ್ತಿದೆ. ನಿವೇಶನಗಳ ದರಗಳು ಏರಿಕೆಯಾಗಿವೆ. ಬಹುಮಹಡಿ ಕಟ್ಟಡ ಕಟ್ಟುವುದರಿಂದ ಜನರಿಗೆ ಉಪಯೋಗವಾಗುತ್ತದೆ. ಒಂದೇ ಕುಟುಂಬದಲ್ಲಿ ಸಹೋದರರ ಸಂಖ್ಯೆ ಹೆಚ್ಚಾಗಿದ್ದರೆ ಒಂದೇ ನಿವೇಶನದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಬಹುದು ಎಂದು ಮನವಿ ಸಲ್ಲಿಸಿದ ಅಸೋಸಿಯೇಶನ್ ಅಧ್ಯಕ್ಷ ಸುರೇಶ ಕಿರೇಸೂರ ತಿಳಿಸಿದರು.
ಹೊಸ ನಿವೇಶನ ಹಾಗೂ ಮನೆಗಳ ನಿರ್ಮಾಣದಿಂದ ಕೃಷಿಗೆ ಜಮೀನಿನ ಕೊರತೆಯಾಗುತ್ತದೆ. ಬಡವರಿಗೆ ಆಶ್ರಯ ಮನೆಗಳನ್ನು ಬಹುಮಹಡಿ ಕಟ್ಟಡದಲ್ಲಿ ನಿರ್ಮಿಸಬಹುದು. ಸಣ್ಣ ಮನೆಗಳ ನಿರ್ಮಾಣದಿಂದ ರಸ್ತೆ, ನೀರು, ಒಳತರಂಡಿ, ವಿದ್ಯುತ್ ಮತ್ತಿತರ ಮೂಲ ಸೌಲಭ್ಯಗಳನ್ನು ಪ್ರತ್ಯೇಕವಾಗಿ ಒದಗಿಸಬೇಕಾಗುತ್ತದೆ. ಬಹುಮಹಡಿ ಕಟ್ಟಡಗಳ ನಿರ್ಮಾಣದಿಂದ ಈ ಎಲ್ಲ ಸೌಲಭ್ಯಗಳನ್ನು ಒಂದೇ ಕಟ್ಟಡಕ್ಕೆ ಒದಗಿಸಬಹುದು.
ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಎಫ್‌ಎಆರ್ ಅನುಪಾತ 4.0 ಇದ್ದು, ಈ ಸೌಲಭ್ಯವನ್ನು ಮಹಾನಗರದಲ್ಲಿಯೂ ಒದಗಿಸಬೇಕು ಎಂದು ಕಿರೇಸೂರ ಆಗ್ರಹಿಸಿದರು. ಅಸೋಸಿಯೇಷನ್‌ನ ಸಂಜಯ್ ಕಪೂರ, ಅಶೋಕ ಬಸವಾ, ವಿ.ಎನ್. ಹಿರೇಮಠ ಮತ್ತಿತರರು ಹಾಜರಿದ್ದರು.